ಚಿಕ್ಕಬಳ್ಳಾಪುರ: ಬೇಸಿಗೆ ಶುರುವಾಗಿರುವುದರಿಂದ ಜಿಲ್ಲೆಯಲ್ಲಿ ಕುಡಿಯವ ನೀರಿನ ಸಮಸ್ಯೆ ಎದುರಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು. ಎಲ್ಲೂ ಕುಡಿಯುವ ನೀರಿಗೆ ಜನ ತೊಂದರೆ ಎದುರಿಸಬಾರದು ಎಂದು ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದ್ದು, ಸಾರ್ವಜ ನಿಕರು ಕೊರೊನಾ ತಡೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ನೀರು ಸರಬರಾಜು ಮಾಡಿ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸದಂತೆ ಅಗತ್ಯ ಇರುವ ಕಡೆ ಖಾಸಗಿ ಕೊಳವೆ ಬಾವಿಗಳ ಮೂಲಕ ಅಥವಾ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕೆಂದು ಜಿಲ್ಲೆಯ ಗ್ರಾಮೀಣ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಾಮಾಜಿಕ ಅಂತರ ಇರಲಿ: ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ, ಪ್ರಧಾನ ಮಂತ್ರಿ ಕಿಸಾನ್, ಬರ ಪರಿಹಾರ ಹಾಗೂ ಬೆಳೆ ವಿಮೆಗೆ ಸಂಬಂಧಿಸಿದ ಅನುದಾನ ಸರ್ಕಾರದಿಂದ ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ರೈತರು ಬ್ಯಾಂಕ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಹಣ ಪಡೆದುಕೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ದಿನಸಿ ಅಂಗಡಿ, ರಸಗೊಬ್ಬರ, ಕೀಟನಾಶಕ ಔಷಧಿ ಹಾಗೂ ಬಿತ್ತನೆ ಬೀಜ ಮಾರಾಟ ಅಂಗಡಿ ಗಳು ತೆರೆಯಲು ಯಾವುದೇ ಸಮಯ ನಿಗದಿ ಇಲ್ಲ. ಕೃಷಿ ಹಾಗೂ ತೋಟಗಾರಿಕೆ, ರೇಷ್ಮೆ ಬೆಳೆ ಸೂಕ್ತ ಮಾರಾಟಕ್ಕಾಗಿ ಈಗಾಗಲೇ ಸ್ಥಾಪಿಸಿರುವ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಸರಕು ಸುಲಭವಾಗಿ ಸರಬರಾಜು ಮಾಡಲು ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ಮೂಲ ಸೌಲಭ್ಯ: ಅಪರ ಜಿಲ್ಲಾಧಿಕಾರಿ ಆರತಿ ಆನಂದ್ ಮಾತನಾಡಿ, ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಕಾರ್ಯಾಚರಣೆಗಾಗಿ ರಚಿಸಿರುವ ಅಂತರ್ ಜಿಲ್ಲಾ, ಅಂತರ್ ರಾಜ್ಯ ಹಾಗೂ ಅಂತರ್ ತಾಲೂಕು ಚೆಕ್‌ಪೋಸ್ಟ್‌ಗಳಿಗೆ ಬೇಕಾ ಗಿರುವ ಮತ್ತು ನಿರ್ಗತಿ ಕರಿಗೆ, ವಸತಿ ರಹಿತರಿಗೆ, ವಲಸೆ ಬಂದ ಕಾರ್ಮಿಕರಿಗೆ ವಸತಿ, ಊಟದ ವ್ಯವಸ್ಥೆ, ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಉಪವಿಭಾಗಾಧಿಕಾರಿ ರಘುನಂದನ್, ಜಿಲ್ಲಾ ಸರ್ವೆಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.