ರಾಜನ ಮಗ ಧೀರ ನಾಯಕನಿಂದ ಮಾರ ನಾಯಕನ ಮಗುವಿನ ಹತ್ಯೆಯಾಗುತ್ತದೆ. ಕಾಟೇರಿಗಳ ಭವಿಷ್ಯ ಸುಳ್ಳಾಗಿರುವುದನ್ನು ತಿಳಿದ ಮಡದಿ ಮಂಗಳೆ ಕಾಡಿನ ಕಡೆ ತೆರಳುತ್ತಾಳೆ. ಆಕೆಯನ್ನು ಹುಡುಕಿಕೊಂಡು ಕಾಡಿಗೆ ಹೋದ ಮಾರನಾಯಕ ಸತ್ತ ಮಗುವನ್ನು ಮತ್ತು ಆತ್ಮಹತ್ಯೆಗೈದ ಮಡದಿಯನ್ನು ಬದುಕಿಸಲು ಕಾಟೇರಿಗಳ ಮಾತಿನಂತೆ ಸಂಜೀವಿನಿಯ ಬಗ್ಗೆ ತಿಳಿಯಲು ಜೈನ ಮುನಿಯನ್ನು ವಿಚಾರಿಸಿ, ಅದನ್ನು ಪಡೆಯಲು ಕಾಡನ್ನು ಕಡಿಯಲು ಪ್ರಾರಂಭಿಸುತ್ತಾನೆ. ಕಡಿದಷ್ಟೂ ಮತ್ತೆ ಮತ್ತೆ ಚಿಗುರುವ ಕಾಡನ್ನು ಕಡಿಯುತ್ತಾ ದುರಂತ ಅಂತ್ಯ ಕಾಣುತ್ತಾನೆ. ಇದು ಮಾರನಾಯಕ ನಾಟಕದ ಕಥಾಹಂದರ. ಮಾರನಾಯಕನಾಗಿ ಆಕಾಶ್ ಕೋಟೇಶ್ವರ, ಮಂಗಳೆಯಾಗಿ ಸುರಭಿ ಹೆಬ್ಟಾರ್, ಭದ್ರಪ್ಪ ನಾಯಕನಗಿ ಶ್ರೀನಿವಾಸ, ಕಾಟೇರಿಗಳಾಗಿ ಶ್ರೀನಿಧಿ, ಹರೀಶ್, ಪ್ರಶಾಂತ್, ದಳವಾಯಿಗಳಾಗಿಹೆರಿಯಾ ಮಾಸ್ಟರ್, ಶ್ರೀಧರ ಭಂಡಾರಿ, ಧೀರ ನಾಯಕನಾಗಿ ಶ್ರೀಶ ಭಟ್, ಜೈನ ಮುನಿಯಾಗಿ ನರಸಿಂಹ ಐತಾಳ್, ವೀರ ನಾಯಕನಾಗಿ ಭರತ್ ಚಂದನ್, ದೂತನಾಗಿವಿಶ್ವನಾಥ್, ಸೇವಕಿಯಾಗಿ ಗಾಯತ್ರಿ ಹೆಬ್ಟಾರ್ ಇವರುಗಳು ಇದೇ ಪ್ರಥಮ ಬಾರಿಗೆ ರಂಗವೇರಿದ್ದು, ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಉತ್ಕೃಷ್ಟವಾಗಿತ್ತು.
ಇದು ವಿಲಿಯಂ ಷೇಕ್ಸ್‌ಪಿಯರ್‌ನ “ಮ್ಯಾಕ್‌ಬೆತ್’ ನಾಟಕದ ಕನ್ನಡ ರೂಪಾಂತರ (ರಚನೆ: ಎಚ್. ಎಸ್. ಶಿವಪ್ರಕಾಶ್). ನಮ್ಮ ಮಣ್ಣಿನ ಸೊಗಡಿಗೆ ಹತ್ತಿರವಾದ ಈ ನಾಟಕ ಮನುಷ್ಯ ಮೌಲ್ಯಗಳು ಕುಸಿಯುತ್ತಿರುವ ಇವತ್ತಿನ ವ್ಯಾವಹಾರಿಕ ಜಗತ್ತಿನಲ್ಲಿ ತನ್ನ ಪ್ರಸ್ತುತತೆಯನ್ನು ಎತ್ತಿ ಹಿಡಿಯುತ್ತದೆೆ.
Advertisement
ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್(ರಿ.), ಗೀತಾನಂದ ಫೌಂಡೇಶನ್, ಮಣೂರು, ಯಶಸ್ವಿ ಕಲಾವೃಂದ (ರಿ.), ಕೊಮೆ, ತೆಕ್ಕಟ್ಟೆ ಮತ್ತು ರಂಗ ಸಂಪದ ,ಕೋಟ, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ “ರಂಗ ರಂಗು’ ಎನ್ನುವ ಇಪ್ಪತ್ತು ದಿನಗಳ ನಾಟಕ ತರಬೇತಿ ಶಿಬಿರದ ಕೊನೆಯಲ್ಲಿ ಹಯಗ್ರೀವ ಕಲ್ಯಾಣ ಮಂಟಪ, ತೆಕ್ಕಟ್ಟೆ ಇಲ್ಲಿ ಈ ನಾಟಕ ಹಿರಿಯ ತಂಡದವರಿಂದ ಪ್ರದರ್ಶಿಸಲ್ಪಟ್ಟಿತು.