ಕರಾವಳಿ ಭಾಗದಲ್ಲಿರುವ ದೈವಾರಾಧನೆಗೆ ಅನೇಕ ವರ್ಷಗಳ ಇತಿಹಾಸವಿದ್ದು, ಅದರದೇ ಆದ ಅನೇಕ ವಿಚಾರಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇದು ತುಳುನಾಡಿನ ಜನರ ಸಂಪ್ರದಾಯವಾಗಿದ್ದು, ಎಲ್ಲ ಭಕ್ತರಿಗೂ ನಂಬಿಕೆ, ಭಕ್ತಿ, ಗೌರವ ಅವರ ಮುಗ್ಧ ಮನಸಿನಲ್ಲಿ ಕಣ್ಣನೋಟದಲ್ಲಿ ಕಾಣಿಸುತ್ತದೆ.
ತುಳುನಾಡಿನ ಜನರು ಸಮಸ್ಯೆ ಅಥವಾ ಇತರ ಯಾವುದೇ ತೊಂದರೆಗಳು ಎದುರಾದರೆ ಅದನ್ನು ಪರಿಹರಿಸಲು ಮೊದಲು ಬೇಡುವುದು ದೈವ- ದೇವರನ್ನು.
ಇತ್ತೀಚಿನ ದಿನಗಳಲ್ಲಿ ನಮ್ಮ ಈ ಒಂದು ಸಂಸ್ಕೃತಿ ನಶಿಸಿ ಹೋಗುತ್ತಿದೆ. ನಮ್ಮವರೇ ನಮ್ಮ ಸಂಸ್ಕೃತಿಯನ್ನು ಹಾಳುಮಾಡುತ್ತಿದ್ದು, ತುಳುನಾಡಿನ ಜನತೆಗೆ ಇದು ಬೇಸರ ಹಾಗೂ ಅವಮಾನವನ್ನು ಉಂಟುಮಾಡಿದೆ. ಒಂದಾನೊಂದು ಕಾಲದಲ್ಲಿ ದೈವದ ಹೆಸರನ್ನು ಹೇಳಲು ಭಯಪಡುತ್ತಿದ್ದೆವು.
ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ದೈವರಾಧನೆ ಯಾವ ಮಟ್ಟಕ್ಕೆ ಹೋಗಿದೆಯೆಂದರೆ ರಸ್ತೆಯ ಮೆರವಣಿಗೆಯಲ್ಲಿ, ಶಾಲಾ-ಕಾಲೇಜುಗಳಲ್ಲಿ ಛದ್ಮವೇಷ ಹಾಕುವುದರ ಮೂಲಕ, ಕೆಲವು ನಾಟಕ, ಸಿನೆಮಾಗಳು ಹಾಗೂ ದೈವಾರಾಧನೆಯ ವಿಷಯದಲ್ಲಿ ಅಪಪ್ರಚಾರಗಳು ದಿನದಿಂದ ದಿನಕ್ಕೆ ಹೆಚ್ಚಾಗಿ ಕಂಡುಬರುತ್ತಿವೆ. ಕೇವಲ ಅಷ್ಟಲ್ಲದೇ ರಿಮೋಟ್ ಕಂಟ್ರೊಲ್ ಗೊಂಬೆಯಾಗಿ ಮಾಡಿ ಪ್ರದರ್ಶಿಸುವ ಮಟ್ಟಿಗೆ ತುಳುನಾಡಿನ ದೈವಾರಾಧನೆ ಸಂಸ್ಕೃತಿಯು ನಾಶವಾಗುವ ಪರಿಸ್ಥಿತಿಯನ್ನು ತಲುಪುತ್ತಾ ಇದೆ.
ಉದಾಹರಣೆಯ ಮೂಲಕ ಹೇಳುವುದಾದರೆ ಕಾಂತಾರ ಸಿನೆಮಾದಲ್ಲಿ ತುಳುನಾಡಿನ ದೈವಾರಾಧನೆ ಬಗ್ಗೆ ತಿಳಿಯಲಿ, ಜನರಿಗೂ ಮಾಹಿತಿ ಸಿಗಲೆಂಬ ಕಾರಣಕ್ಕೆ ಸಿನೆಮಾವನ್ನು ಮಾಡಿದ್ದಾರೆ. ಆದರೆ ಇದರ ಅನಂತರ ರೀಲ್ಸ್, ವೀಡಿಯೋ, ದೈವಗಳ ಪೇಜ್‌ಗಳನ್ನು ಬಳಸುತ್ತಿದ್ದಾರೆ.
ಹೀಗೆ ಮುಂದುವರಿದರೆ ದೈವಾರಾಧನೆ ಸಂಸ್ಕೃತಿಯು ಯುವಪೀಳಿಗೆಗೆ ಅರಿವಿಗೆ ಬಾರದೆ ಹೋಗಬಹುದು. ಇನ್ನಾದರು ಎಚ್ಚೆತ್ತುಕೊಳ್ಳೋಣ. ನಮ್ಮ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ಗೌರವ ನೀಡಿ. ತುಳುನಾಡಿನ ದೈವಾರಾಧನೆಯನ್ನು ಉಳಿಸುವ ಪ್ರಯತ್ನ ಮಾಡೋಣ.
-ರಶ್ಮಿತಾ ಎನ್.
ಎಂ.ಪಿ.ಎಂ. ಕಾಲೇಜು ಕಾರ್ಕಳ