ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಪ್ರಧಾನಿ ಮೋದಿ ವಿರುದ್ಧ ದಾಖಲಾದ ಪ್ರಕರಣಗಳ ತೀರ್ಮಾನದ ವೇಳೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತರಲ್ಲೊಬ್ಬರಾದ ಅಶೋಕ್ ಲವಾಸಾ ಮುಂದಿನ ಸಭೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ನಿರ್ಧಾರ ಕೈಗೊಂಡಿರುವ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಚುನಾವಣಾ ಆಯೋಗದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುವುದು ಸಹಜ ಎಂದಿದ್ದಾರೆ. ಮೂರು ಆಯುಕ್ತರೂ ಒಂದೇ ರೀತಿ ಅಭಿಪ್ರಾಯ ಹೊಂದಿರಬೇಕು ಎಂದೇನಿಲ್ಲ. ಅವರೇನೂ ಅವಳಿಗಳಲ್ಲ. ಈ ಹಿಂದೆಯೂ ಹಲವು ಬಾರಿ ಭಿನ್ನ ಅಭಿಪ್ರಾಯಗಳು ಮೂಡಿ ಬಂದಿದ್ದವು ಎಂದಿದ್ದಾರೆ.
ಇದು ಚುನಾವಣಾ ಆಯೋಗದ ಆಂತರಿಕ ವಿಷಯ. ಯಾವುದೇ ಊಹಾಪೋಹಗಳಿಗೆ ಅವಕಾಶವಿಲ್ಲ. ಈ ಭಿನ್ನಾಭಿಪ್ರಾಯದ ಬಗ್ಗೆ ಹಾಗೂ ಇತರ ವಿಷಯಗಳ ಕುರಿತು ಚರ್ಚಿಸಲೆಂದೇ ಮೇ 21 ರಂದು ಸಭೆ ಕರೆಯಲಾಗಿದೆ ಎಂದು ಅರೋರಾ ಹೇಳಿದ್ದಾರೆ. ಈಗಾಗಲೇ ಸಿಇಸಿಗೆ ಮೂರು ಬಾರಿ ಲವಾಸಾ ಪತ್ರ ಬರೆದು, ಚುನಾವಣಾ ಆಯೋಗದ ನಿರ್ಧಾರಗಳಲ್ಲಿ ಪ್ರಕಟವಾದ ಭಿನ್ನ ಅಭಿಪ್ರಾಯವನ್ನೂ ದಾಖಲಿಸುವಂತೆ ಕೋರಿದ್ದಾರೆ ಎನ್ನಲಾಗಿದೆ.
ಪ್ರಧಾನಿ ಮೋದಿ ವಿರುದ್ಧ ದಾಖಲಾದ ಆರು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಆಯೋಗ ಕ್ಲೀನ್‌ಚಿಟ್ ನೀಡಿತ್ತು. ಈ ಪೈಕಿ ಕೆಲವು ಪ್ರಕರಣಗಳಲ್ಲಿ ಮೋದಿಗೆ ನೋಟಿಸ್ ಕಳುಹಿಸಬೇಕು ಎಂಬ ಅಭಿಪ್ರಾಯವನ್ನು ಲವಾಸಾ ವ್ಯಕ್ತಪಡಿಸಿದ್ದರು. ಆದರೆ ಅರೋರಾ ಹಾಗೂ ಇನ್ನೊಬ್ಬ ಆಯುಕ್ತ ಸುಶೀಲ್ ಚಂದ್ರ ಅಭಿಪ್ರಾಯ ಭಿನ್ನವಾಗಿದ್ದರಿಂದ ಬಹುಮತದಂತೆ ಮೋದಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು.
ತನಿಖೆಯಾಗಲಿ: ಕಾಂಗ್ರೆಸ್: ಲವಾಸಾ ಆಕ್ಷೇಪಿಸಿರುವ ವಿಷಯಗಳ ಕುರಿತು ವಿಸ್ತೃತ ತನಿಖೆ ನಡೆಯಲಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. ಸಾಂಸ್ಥಿಕ ಗೌರವವನ್ನು ಹಾಳು ಮಾಡುವುದು ಮೋದಿ ಸರಕಾರದ ಧ್ಯೇಯವಾಗಿದೆ. ಚುನಾವಣಾ ಆಯೋಗವು ಮೋದಿಯ ಕೈಗೊಂಬೆಯಾಗಿದೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಲವಾಸಾ ವ್ಯಕ್ತಪಡಿಸಿದ ಭಿನ್ನಾಭಿಪ್ರಾಯಗಳನ್ನು ದಾಖಲಿಸುವ ಮೂಲಕ ಚುನಾÊಣಾ ಆಯೋಗವು ತನ್ನ ಗೌರವವನ್ನು ಕಾಪಾಡಿಕೊಳ್ಳ¸ೇಕು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಹೇಳಿದ್ದಾರೆ.