ಮೈಸೂರು: ವೀರಶೈವ ಹಾಗೂ ಲಿಂಗಾಯತ ಸಮುದಾಯ ಬೇರೆ ಬೇರೆ ಎಂಬ ಭಿನ್ನಾಭಿಪ್ರಾಯ ಬದಿಗೊತ್ತಿ ಎಲ್ಲರೂ ಒಂದಾಗಿ ಮುನ್ನಡೆಯುವ ಮೂಲಕ ಸಮಾಜದ ಒಳಿತಿಗಾಗಿ ಶ್ರಮಿಸಬೇಕಿದೆ ಎಂದು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಅಖೀಲ ಭಾರತ ವೀರಶೈವ ಮಹಾಸಭಾ ವತಿಯಿಂದ ನಗರದ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಸಂಸ್ಥಾಪಕ ಹಾನಗಲ್ ಕುಮಾರಸ್ವಾಮಿ ಅವರ 150ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಹಾನಗಲ್ಲ ಕುಮಾರಸ್ವಾಮಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವೀರಶೈವ ಹಾಗೂ ಲಿಂಗಾಯತ ಸಮುದಾಯ ಬೇರೆ ಬೇರೆ ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆ ಎರಡು ಸಮುದಾಯವನ್ನು ಒಗ್ಗೂಡಿಸಲು ಮಠಾಧೀಶರುಗಳು ಮುಂದಾಗಬೇಕಿದೆ. ಸಂಘಟನೆಯಲ್ಲಿ ನಾವು ದುರ್ಬಲರಾಗುತ್ತಿದ್ದು, ಇಂದಿನ ಯುವ ಸಮೂಹ ತಮ್ಮದೇ ಹಾದಿಯಲ್ಲಿ ಸಾಗುವ ಮೂಲಕ ದಿಕ್ಕು ತಪ್ಪುತ್ತಿದ್ದಾರೆ. ಹೀಗಾಗಿ ಯುವ ಸಮುದಾಯದಲ್ಲಿರುವ ಚೈತನ್ಯವನ್ನು ಸುದುಪಯೋಗ ಮಾಡಿಕೊಂಡು ಇವರಲ್ಲಿ ಉತ್ತಮ ಸಂಸ್ಕಾರ ಬೆಳೆಸಬೇಕಿದೆ. ಆ ಮೂಲಕ ಎಲ್ಲರೂ ಒಂದಾಗಿ ಮುನ್ನಡೆದಾಗ ಮಾತ್ರವೇ ಸಮಾಜದ ಏಳಿಗೆ ಸಾಧ್ಯವಾಗಲಿದೆ ಎಂದರು.
ವೀರಶೈವ ಅತ್ಯಂತ ಪುರಾತನ ಧರ್ಮವಾಗಿದ್ದು, ಇದು ವಿಶ್ವಧರ್ಮವಾಗಿ ಸಮಾಜದಲ್ಲಿ ಸಮಾನತೆ, ಸ್ತ್ರೀ ಸ್ವಾತಂತ್ರ್ಯ ಸೇರಿದಂತೆ ಸಮಾಜಕ್ಕೆ ಒಳಿತನ್ನು ಮಾಡುವುದು ಈ ಧರ್ಮದ ಉದ್ದೇಶವಾಗಿದೆ. ಹೀಗಾಗಿಯೇ ಹಲವು ಶತಮಾನಗಳಿಂದಲೂ ಬಸವಣ್ಣ, ಹಾನಗಲ್ ಕುಮಾರಸ್ವಾಮಿ ಸೇರಿದಂತೆ ಅನೇಕ ಮಹಾಪುರುಷರು ಮನುಕುಲದ ಒಳಿತಿಗಾಗಿ ಶ್ರಮಿಸುವ ಮೂಲಕ ಅಂಧಕಾರದಲ್ಲಿದ್ದ ಸಮಾಜ ಉಳಿಸಿ, ಬೆಳೆಸಲು ಪ್ರಯತ್ನಿಸಿದ್ದಾರೆ ಎಂದರು ತಿಳಿಸಿದರು.
ದೇಶದ ಬಹುತೇಕ ಮಠಗಳು ತಮ್ಮ ಧರ್ಮದ ಕುರಿತಂತೆ ಜಾಗೃತಿ ಮೂಡಿಸಿದರೆ, ವೀರಶೈವ ಸಮುದಾಯದ ಮಠಗಳು ಸಮಾಜದ ಎಲ್ಲಾ ಧರ್ಮದ ಒಳಿತಿಗಾಗಿ ಕೆಲಸ ಮಾಡುತ್ತಿವೆ. ಪ್ರತಿ ವರ್ಷವೂ ಸಮಾಜದ ಒಳಿತಿಗಾಗಿ ಶ್ರಮಿಸಿದ ಅನೇಕ ಮಹಾಪುರುಷರ ಜಯಂತಿ ಅಂಗವಾಗಿ ಉಪನ್ಯಾಸ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಆದರೆ ಅವರುಗಳು ಸಮಾಜಕ್ಕೆ ನೀಡಿದ ಕೊಡುಗೆ, ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಅರ್ಥ ಸಿಗಲಿದೆ ಎಂದು ಹೇಳಿದರು.
ಬಾಲಕೋಟೆ ಇಳಕಲ್‌ನ ಹಿರೇಮಠದ ಪಂಡಿತ್ ಅನ್ನದಾನ ಶಾಸಿಗಳು ವಿಶೇಷ ಉಪನ್ಯಾಸ ನೀಡಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹೊಸಮಠದ ಚಿದಾನಂದ ಸ್ವಾಮೀಜಿ, ಮಲ್ಲನಮೂಲೆ ಮಠದ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ, ವಿರಕ್ತ ಮಠದ ಶಿವಬಸವ ಸ್ವಾಮೀಜಿ, ಅಡವಿ ಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮೀಜಿ, ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ವಿ.ಹಿನಕಲ್ ಬಸವರಾಜು ಇನ್ನಿತರರು ಹಾಜರಿದ್ದರು.