Advertisement

ಮಿಂಚು ನಿವಾಸದಲ್ಲೀಗ ಮೌನದ ಮಂಕು

10:01 AM Jan 13, 2020 | Lakshmi GovindaRaj |

ಬೆಂಗಳೂರು: ಮುಂಜಾವಿನ ಚಳಿಯಲ್ಲೂ ಅಲ್ಲಿ ಸಾಹಿತ್ಯ ಲೋಕದ ದಂಡೇ ನೆರೆದಿತ್ತು. ಸೂರ್ಯ ಬೆನ್ನೇರಿ ಬರುತ್ತಿದ್ದಂತೆ ಈ ಸಂಖ್ಯೆಯಲ್ಲಿ ಮತ್ತಷ್ಟು ದ್ವಿಗುಣಗೊಂಡಿತ್ತು. ಎಲ್ಲರ ಕಣ್ಣಾಲಿಗಳಲ್ಲಿ ನೀರು ಜಿನುಗುತ್ತಿತ್ತು! ಆದರೆ, ದುಃಖದ ಮಡುವಿನಲ್ಲೂ ಸಾಹಿತ್ಯ, ಸಂಶೋಧನಾ ಕ್ಷೇತ್ರಗಳ ಚರ್ಚೆ ನಡೆದು ಚಿದಾನಂದ ಮೂರ್ತಿಗೆ ನಿಜ ಶ್ರದ್ಧಾಂಜಲಿ ನೀಡಿದಂತಿತ್ತು.

Advertisement

ಆ ಮನೆಯ ಮುಂದಿನ ಕಲ್ಲಿನ ಮೇಲೆ ಎಳೆ ಬಿಲಿಸಿಗೆ ಮೈಯೊಡ್ಡಿ ಕುಳಿತವರಿಂದ ಸಂಶೋಧನಾ ಕ್ಷೇತ್ರದ ಸಾಧಕನ ಗುಣಗಾನ ನಡೆದಿತ್ತು. ಅದು ನೋವಿನ ಕಥೆಯನ್ನು ಕಟ್ಟಿ ಹೇಳಿದಂತಿತ್ತು. ಒಬ್ಬರು ಮತ್ತೂಬ್ಬರನ್ನು ಸಂತೈಸಿಕೊಳ್ಳುತ್ತಾ ಸಮಾಧಾನ ಪಡಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

ಇದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಅವರ ಹಂಪಿ ನಗರದ “ಮಿಂಚು’ ನಿವಾಸದಲ್ಲಿ ಶನಿವಾರ ಬೆಳಗ್ಗೆ ಕಂಡು ಬಂದ ಸನ್ನಿವೇಶ. ಕನ್ನಡ ಸಂಶೋಧನಾ ಕ್ಷೇತ್ರದ ಹಿರಿಯ ಜೀವಿಯ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾವಿರಾರು ಸಂಖ್ಯೆಯಲ್ಲಿ ಜನರು ಮಿಂಚು ನಿವಾಸದತ್ತ ದೌಡಾಯಿಸಿದರು. ಇದರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಮನೆಯ ಮುಂದಿನ ಉಯ್ಯಾಲೆ ಖಾಲಿ ಖಾಲಿ: ಚಿಮೂ ಅವರ ನಿವಾಸದ ಮುಂದಿದ್ದ ಉಯ್ಯಾಲೆ ಖಾಲಿ ಖಾಲಿಯಾಗಿತ್ತು. ವಿರಾಮದ ವೇಳೆ ಚಿದಾನಂದಮೂರ್ತಿಯವರು ಮಾವಿನ ಮರದ ಕೆಳಗೆ ಇರಿಸಲಾಗಿದ್ದ ಕಬ್ಬಿಣದ ಉಯ್ಯಾಲೆಯಲ್ಲಿ ಕುಳಿತು ಪುಸ್ತಕಗಳ ಮೇಲೆ ಕಣ್ಣಾಡಿಸುತ್ತಿದ್ದರು. ಆದರೆ, ಚಿದಾನಂದ ಮೂರ್ತಿ ಅವರಿಲ್ಲದೆ ಆ ಉಯ್ಯಾಲೆ ಖಾಲಿ ಆಗಿತ್ತು.

ಕಲ್ಲಿನ ಮೇಲೆ ಬಿಸಿಲಿಗೆ ಮೈಯೊಡ್ಡಿ ಚರ್ಚೆ: ಬೆಳಗ್ಗೆಯೆ ಅಧಿಕ ಸಂಖ್ಯೆಯಲ್ಲಿ ಚಿಮೂ ನಿವಾಸಕ್ಕೆ ಆಗಮಿಸಿದ ಹಲವು ಸಾಹಿತಿಗಳು ಚಿದಾನಂದ ಮೂರ್ತಿ ಅವರ ಕನ್ನಡ ಪರ ಹೋರಾಟದ ದಿನಗಳನ್ನು ಮೆಲುಕು ಹಾಕಿದರು. ಗೋಕಾಕ್‌ ಚಳುವಳಿ, ಬೆಳಗಾವಿ ಬಗೆಗಿನ ಹೋರಾಟ ಮತ್ತು ಸರ್ಕಾರ ಕನ್ನಡ ಶಾಲೆಗಳಲ್ಲಿ ಪ್ರಾಥಮಿಕ ಹಂತದಲ್ಲೆ ಇಂಗ್ಲಿಷ್‌ ಶಿಕ್ಷಣ ಆರಂಭಿಸಿರುವ ವಿಚಾರವಾಗಿ ಚಿಮೂ ಅವರಿಗಿದ್ದ ಕನ್ನಡ ಬಗೆಗಿನ ಕಳಕಳಿಯ ಬಗ್ಗೆ ಚರ್ಚೆ ನಡೆಯಿತು.

Advertisement

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಆರ್‌.ಕೆ.ನಲ್ಲೂರು ಪ್ರಸಾದ್‌, “ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ವೇಳೆ ಹಲವು ವಿಚಾರಗಳಲ್ಲಿ ನನ್ನ ಬೆನ್ನ ಹಿಂದೆ ಇದ್ದರು. ಅವರ ಮಾತುಗಳು ಯಾವಾಗಲೂ ನೇರವಾಗಿರುತ್ತಿದ್ದವು. ಎಲ್ಲಕ್ಕಿಂತ ಮಿಗಿಲಾಗಿ ಕನ್ನಡ ಬಗೆಗಿನ ಕಳಕಳಿ ಆ ಮಾತಿನಲ್ಲಿ ಇರುತ್ತಿತ್ತು’ ಎಂದು ಹೇಳಿದರು.

ಶಿಷ್ಯರಿಂದ ಮೇಷ್ಟ್ರಿಗೆ ನಮನ: ಸಂಶೋಧನಾ ಕ್ಷೇತ್ರದ ಮಾಸ್ತರ್‌ ಅವರ ಅಂತಿಮ ದರ್ಶನ ಪಡೆಯಲು ಅವರ ನಿವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಚಿಮೂ ಶಿಷ್ಯರು ಹಾಜರಾಗಿದ್ದರು. ಇದರಲ್ಲಿ ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಕಲಿತಿದ್ದ ವಿದ್ಯಾರ್ಥಿಗಳು ಸೇರಿದ್ದರು. ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ, ಡಾ .ಕೆ. ಮರುಳಸಿದ್ಧಪ್ಪ ಸೇರಿದಂತೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರೂ ಇದ್ದರು.

“ನಾನು ಕೂಡ ಚಿಮೂ ಮೇಷ್ಟ್ರು ಅವರ ಶಿಷ್ಯ. ಹಲವು ವಿಚಾರಗಳಲ್ಲಿ ನನಗೆ ಮತ್ತು ಮೇಷ್ಟ್ರುಗೆ ಅಭಿಪ್ರಾಯ ಭೇದವಿತ್ತು. ಆದರೂ ಸಮಾರಂಭಗಳಲ್ಲಿ ಸಿಕ್ಕಾಗ ಪ್ರೀತಿಯಿಂದ ಮಾತನಾಡುತ್ತಿದ್ದೆ. ಅವರು ಕೂಡ ಕಿರುನಗೆ ಬೀರುತ್ತಿದ್ದರು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಕೆ.ಮರುಳಸಿದ್ದಪ್ಪ ಹೇಳಿದರು.

“ರಾಜಕೀಯ ವಿಚಾರ ಮಾತನಾಡಿದಾಗ ನಾನು ಅವರೊಂದಿಗೆ ಮುನಿಸಿಕೊಳ್ಳುತ್ತಿದ್ದೆ. ಹೀಗಾಗಿ, ಕೆಲವು ಸಮಾರಂಭಗಳಲ್ಲಿ ನಾನು ಹಾಗೂ ಅವರು ಮುಖಾಮುಖೀಯಾದಾಗ ಇರುಸು, ಮುರುಸಿಗೆ ಒಳಗಾಗಿರುವುದೂ ಇದೆ. ಆದರೆ, ಅವರು ಹೇಳಬೇಕಾದದ್ದನ್ನು ನೇರವಾಗಿ ಹೇಳಿ ಬಿಡುತ್ತಿದ್ದರು; ಎಂದು ತಮ್ಮ ಗುರುವಿನ ನಡೆ-ನುಡಿಯನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next