Advertisement

ಶಿಥಿಲಗೊಂಡಿದೆ ತೊಡಿಕಾನ ಕಿರು ಸೇತುವೆ

02:47 AM Jul 09, 2019 | sudhir |

ಅರಂತೋಡು: ತೊಡಿಕಾನ ಶಾಲಾ ಬಳಿ ಮತ್ಸ್ಯತೀರ್ಥ ಹೊಳೆಗೆ ನಿರ್ಮಿಸಿದ ಹಳೆಯ ಕಿರು ಸೇತುವೆ ಶಿಥಿಲಗೊಂಡಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ.

Advertisement

ಮತ್ಸ್ಯತೀರ್ಥ ಹೊಳೆಗೆ ಇಲ್ಲಿ ಸೇತುವೆ ನಿರ್ಮಾಣವಾಗುವುದಕ್ಕಿಂತ ಮೊದಲು ತೊಡಿಕಾನ ಶಾಲೆಗೆ ತೆರಳುವ ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಅಡಿಕೆ ಮರದಿಂದ ನಿರ್ಮಾಣ ಮಾಡಿದ ಪಾಲದ ಮೂಲಕ ನಡೆದುಕೊಂಡು ಹೋಗುತ್ತಿದ್ದರು. ಅನೇಕ ಶಾಲಾ ಮಕ್ಕಳು ಅಪಾಯದ ಸ್ಥಿತಿಯಲ್ಲಿ ಪಾಲವನ್ನು ದಾಟಿ ಹೋಗಬೇಕಾದ ಕಾರಣ ಹೆತ್ತವರು ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯಪಡುತ್ತಿದ್ದರು.

ಸುಮಾರು 35 ವರ್ಷಗಳ ಹಿಂದೆ ಲೋಕೋ ಪಯೋಗಿ ಇಲಾಖೆಯಿಂದ ಶಾಲಾ ಬಳಿಯ ಮತ್ಸ್ಯತೀರ್ಥ ಹೊಳೆ ಸೇತುವೆ ನಿರ್ಮಾಣ ಮಾಡಲಾಗಿತ್ತು. ಇದು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ವರದಾನವಾಗಿ ಪರಿಣಮಿಸಿ ಸಾವಿರಾರು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಯಿತು.

ಮುಖ್ಯ ಸಂಪರ್ಕ ಸೇತುವೆ

ಸುಮಾರು 4-5 ವರ್ಷಗಳ ಹಿಂದೆ ಇದು ಮುಖ್ಯ ಸೇತುವೆಯಾಗಿತ್ತು. ತೊಡಿಕಾನದ ಕುಂಟುಕಾಡು, ಬಾಳೆಕಜೆ, ಚಿಪ್ಪುರು ಗುಡ್ಡೆ, ಕುತ್ತಮೊಟ್ಟೆ ಭಾಗದ ಜನರು ಇದನ್ನೇ ಅವಲಂಬಿಸಿದ್ದರು. ಸೇತುವೆ ನಿರ್ಮಾಣವಾದ ಬಳಿಕ ಸಾರ್ವಜನಿಕರು ವಾಹನ ಸಂಚಾರಕ್ಕೆ ಕೆಳಗಿನ ಸೇತುವೆಯನ್ನೇ ಹೆಚ್ಚಾಗಿ ಬಳಸಿ ಕೊಳ್ಳುತ್ತಿದ್ದಾರೆ. ಕುಂದವಿರುವ ತಳಭಾಗ ಜೇಡಿಮಣ್ಣಿಂದ ಕೂಡಿದೆ. ಕಳೆದ ವರ್ಷ ಧಾರಾಕಾರ ಮಳೆಯಿಂದ ದೊಡ್ಡ ದೊಡ್ಡ ಮರಗಳು ಹೊಳೆಯಲ್ಲಿ ಬಂದು ಕುಂದಕ್ಕೆ ಬಡಿದಿವೆ. ಇದರಿಂದ ಸೇತುವೆಗೆ ಅಪಾಯ ಎದುರಾಗಿದೆ.

Advertisement

ವಾಹನ ಸಂಚಾರಕ್ಕೆ ತಡೆ

ಈ ಸೇತುವೆ ಶಿಥಿಲಗೊಂಡಿರುವ ಹಿನ್ನೆಲೆಯಲ್ಲಿ ತೊಡಿಕಾನ ಗ್ರಾಮದಲ್ಲಿ ನಡೆದ ವಾರ್ಡ್‌ ಸಭೆಯಲ್ಲಿ ಗ್ರಾಮ ಪಂಚಾಯತ್‌ನ ಗಮನಕ್ಕೆ ತರಲಾಗಿತ್ತು. ಸ್ಥಳೀಯ ಗ್ರಾ.ಪಂ. ವತಿಯಿಂದ ಸೇತುವೆಯ ಮೇಲೆ ವಾಹನಗಳು ಸಂಚರಿಸದಂತೆ ಕಬ್ಬಿಣದ ಪೈಪ್‌ ಮೂಲಕ ತಡೆ ಬೇಲಿ ನಿರ್ಮಿಸಿ ಬೈಕ್‌ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೊಳೆಯಲ್ಲಿ ದೊಡ್ಡ ದೊಡ್ಡ ಪೊದೆಗಳು ಬೆಳೆದಿರುವ ಕಾರಣ ಮಳೆಗಾಲದಲ್ಲಿ ಹೊಳೆ ನೀರು ಸಮರ್ಪಕವಾಗಿ ಹರಿದು ಹೋಗಲು ಸಮಸ್ಯೆಯಾಗುತ್ತಿದೆ.

ಏನು ಮಾಡಬಹುದು?

ಸೇತುವೆಯ ಸ್ಲ್ಯಾಬ್‌ಗಳು ಗಟ್ಟಿಮುಟ್ಟಾ ಗಿದ್ದು, ಯಾವುದೇ ದುರಸ್ತಿ ಕಾರ್ಯದ ಅಗತ್ಯ ಇಲ್ಲ. ಪಿಲ್ಲರ್‌ನ ಸುತ್ತಮುತ್ತ ಒಂದೂವರೆ ಮೀಟರ್‌ನಷ್ಟು ಎತ್ತರಕ್ಕೆ ಕಾಂಕ್ರೀಟ್ ಹಾಕಿ ಪಿಲ್ಲರನ್ನು ಗಟ್ಟಿ ಮಾಡಬೇಕಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

– ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next