ಕಾಸರಗೋಡು: ಎರಡು ಪ್ರದೇಶಗಳನ್ನು ಸಂಪರ್ಕಿಸುವ ಕೆಲಸ ಮಾಡುತ್ತಿರುವ ಸೇತುವೆಗಳು ಎರಡೂ ಪ್ರದೇಶಗಳ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಸೇತುವೆಗಳು ಸಂಪರ್ಕ ಸೇತುವಾಗಿ ಬಳಸಲ್ಪಡುವುದರಿಂದ ಅಂತಹ ಸೇತುವೆಗಳು ಭದ್ರವಾಗಿರಬೇಕಾದುದು ಅಷ್ಟೇ ಮುಖ್ಯ. ಆದರೆ ಪೆರಡಾಲ ಹೊಳೆಗೆ ನಿರ್ಮಾಣವಾಗಿರುವ ಸೇತುವೆ ದಿನದಿಂದ ದಿನಕ್ಕೆ ಶಿಥಿಲಗೊಳ್ಳುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಪೆರಡಾಲ ಹೊಳೆ ಬದಿಯಡ್ಕದ ಪ್ರಧಾನ ಹೊಳೆಯಾಗಿದೆ. ಕುಂಬಳೆ ಮುಳ್ಳೇರಿಯ ರಸ್ತೆಯ ಮಡಿಪ್ಪು ಎಂಬಲ್ಲಿರುವ ಪೆರಡಾಲ ಸೇತುವೆಯನ್ನು ಆಶ್ರಯಿಸಿ ದಿನನಿತ್ಯ ನೂರಾರು ವಾಹನಗಳು ಇಲ್ಲಿ ಓಡಾಡುತ್ತಿವೆ. ಆದರೆ ಈ ಸೇತುವೆಯ ಅಡಿಭಾಗವನ್ನು ಗಮನಿಸಿದರೆ ಎಂತಹ ಗಂಡೆದೆಯ ವ್ಯಕ್ತಿಯೂ ಭಯಪಡುವಂತಾಗಿದೆ. ಪೆರಡಾಲ ಸೇತುವೆಯ ಅಡಿಭಾಗವು ಶಿಥಿಲಗೊಳ್ಳಲು ಆರಂಭವಾಗಿದೆ.
ಕೇರಳ ರಾಜ್ಯ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿ ಬರುವಂತಹ ಈ ಸೇತುವೆಯನ್ನು 1999 ಜೂನ್ 4 ರಂದು ಅಂದಿನ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಪಿ.ಜೆ.ಜೋಸೆಫ್ ಅವರು ಲೋಕಾರ್ಪಣೆಗೊಳಿಸಿದ್ದರು. ಅದಕ್ಕಿಂತಲೂ ಮೊದಲು ಬ್ರಿಟಿಷರ ಕಾಲದಲ್ಲಿ ನಿರ್ಮಿಸಲ್ಪಟ್ಟ ಸೇತುವೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ಅಗಲ ಕಿರಿದಾದ ಸೇತುವೆಯ ಮೇಲೆ ವಾಹನಗಳ ಸಂಚಾರಕ್ಕೆ ಕಷ್ಟಕರವಾಗುತ್ತಿತ್ತೆಂಬುದನ್ನು ಮನಗಂಡು ಲೋಕೋಪಯೋಗಿ ಇಲಾಖೆಯು ಹೊಸ ಸೇತುವೆಯನ್ನು ನಿರ್ಮಿಸಿತ್ತು.
ಶಿಥಿಲಗೊಂಡಿದೆ ಸೇತುವೆ !
ಸೇತುವೆಯ ಅಡಿಭಾಗದಲ್ಲಿ ಮೂರು ಭದ್ರವಾದ ಪಿಲ್ಲರ್(ಕಂಬ)ಗಳನ್ನು ಅಳವಡಿಸಲಾಗಿದ್ದು, ಮಧ್ಯದ ಕಂಬದ ಅಡಿಭಾಗವು ನೀರಿನ ಹೊಡೆತಕ್ಕೆ ಸವೆದು ಹೋಗಿ ಅಳವಡಿಸಲ್ಪಟ್ಟ ಕಬ್ಬಿಣದ ರಾಡ್‌ಗಳು ಹೊರಗೆ ಬಂದಿವೆ. ಸೇತುವೆಯ ಅಡಿಭಾಗದಲ್ಲಿ ಅಲ್ಲಲ್ಲಿ ಸಿಮೆಂಟ್ ಕಿತ್ತುಹೋಗಿದ್ದು, ವಾಹನಗಳು ಸಂಚರಿಸುವ ವೇಳೆಯಲ್ಲಿ ಅದು ತುಂಡಾಗಿ ಬೀಳುತ್ತಿದೆಯೆಂದು ಸ್ಥಳೀಯರು ಹೇಳುತ್ತಿದ್ದಾರೆ. ಘನ ವಾಹನಗಳು ಸಂಚರಿಸುವ ವೇಳೆ ಸೇತುವೆಯ ಅಡಿಭಾಗದಲ್ಲಿ ನಿಂತರೆ ಸೇತುವೆಯು ಅದುರುವುದನ್ನು ಕಾಣಬಹುದಾಗಿದೆ.