Advertisement

ಕುರುಡಗಿ ಶಾಲೆಯಲ್ಲಿ ಪಾಠ ಕೇಳಲು ಭಯ!

02:28 PM Jan 29, 2020 | Suhan S |

ನರೇಗಲ್ಲ: ಸಮೀಪದ ಕುರುಡಗಿ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಕಟ್ಟಡದ ಗೋಡೆ, ಮೇಲ್ಛಾವಣಿ ಹಾಗೂ ಶೌಚಾಲಯಗಳು ಸಂಪೂರ್ಣ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪಾಠ ಕೇಳುವ ಪ್ರಸಂಗ ನಿರ್ಮಾಣವಾಗಿದೆ.

Advertisement

ಕುರುಡಗಿ ಗ್ರಾಮದ ಸರ್ಕಾರಿ ಶಾಲೆಯ ಒಂದೇ ಆವರಣದಲ್ಲಿ ಒಟ್ಟು 15 ಕೊಠಡಿಗಳಿವೆ. ಎರಡು ಕಟ್ಟಡ ಅಂಗನವಾಡಿ, ಸರ್ಕಾರಿ ಉರ್ದು ಶಾಲೆಯ 6 ಕೊಠಡಿಗಳ ಪೈಕಿ 2 ಕೊಠಡಿ ನೆಲಸಮವಾಗಿವೆ. 4 ಕೊಠಡಿಗಳಲ್ಲಿ 1 ಕೊಠಡಿ ಮಾತ್ರ ಸುಸಜ್ಜಿತ ಮಾಗಿದೆ. 3 ಕೊಠಡಿಗಳು ವಿದ್ಯಾರ್ಥಿಗಳ ಬಲಿಗಾಗಿ ಕಾದಿವೆ. ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆಯ 9 ಕೊಠಡಿಗಳಿವೆ. ಐದು ಕೊಠಡಿಗಳು ಈಗಾಗಲೇ ಶತಮಾನ ಕಂಡಿವೆ, ಮಳೆಗಾಲದ ಸಮಯದಲ್ಲಿ ಹಳೆಯ ಕಟ್ಟಡಗಳು ಸೋರುತ್ತಿವೆ. 4 ಕೊಠಡಿಗಳ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೇ ಬಿಸಿಯೂಟದ ಕೊಠಡಿಯೂ ಸಂಪೂರ್ಣ ಶಿಥಿಲಗೊಂಡಿದೆ. ಉರ್ದು ಶಾಲೆ ಶಿಥಿಲಗೊಂಡ ಒಂದು ಕೊಠಡಿಯಲ್ಲಿ ಅಡುಗೆ ಮಾಡುವ ಸ್ಥಿತಿಯಿದೆ.

ಕನ್ನಡ ಶಾಲೆಯಲ್ಲಿ 1ರಿಂದ 8 ತರಗತಿ ನಡೆಯುತ್ತಿದ್ದು, 147ಕ್ಕೂ ಅಧಿಕ ಮಕ್ಕಳಿದ್ದಾರೆ. 7 ಜನ ಸಿಬ್ಬಂದಿ ಹೊಂದಿದೆ. ಉರ್ದು ಶಾಲೆಯಲ್ಲಿ 1ರಿಂದ 5 ತರಗತಿ ನಡೆಯುತ್ತಿದ್ದು, 10ಕ್ಕೂ ಅಧಿಕ ಮಕ್ಕಳಿದ್ದಾರೆ. ಇಲ್ಲಿನ ಪ್ರತಿಯೊಂದು ಕೊಠಡಿಗಳು ಸಂಪೂರ್ಣ ಬಿರುಕು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಿ ಮಕ್ಕಳ ಜೀವಕ್ಕೆ ಸಂಚಕಾರ ತರವ ಎಲ್ಲ ಲಕ್ಷಣಗಳು ಇಲ್ಲಿ ಕಂಡು ಬರುತ್ತಿದೆ. ಶಾಲೆ ಕೊಠಡಿಗಳ ಮೇಲ್ಛಾವಣಿಯ ಸಿಮೆಂಟ್‌ ಸ್ವತಃ ಕಳೆದುಕೊಂಡು ಕಿತ್ತು ಬೀಳುತ್ತಿದೆ. ಕಬ್ಬಿಣದ ರಾಡುಗಳು ಹೊರಜಗತ್ತು ಇಣುಕಿ ನೋಡುತ್ತಿವೆ. ಗೋಡೆಗಳು ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. ಕಮಾನಿನ ಮೇಲ್ಛಾವಣಿ ಸೀಳಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ಮಕ್ಕಳ ಪ್ರಾಣಕ್ಕೆ ಕುತ್ತು ತರಬಹುದಾಗಿದೆ. ಬಿಸಿಯೂಟದ ಕೊಠಡಿಯ ಗೋಡೆ, ಮೇಲ್ಛಾವಣಿ ಸಹಸ ಬಿರುಕು ಬಿಟ್ಟ ಪರಿಣಾಮ ಅಡಗಿ ಮಾಡುವ ಸಮಯದಲ್ಲಿ ಛಾವಣಿ ಮೇಲಿಂದ ಸಿಮೆಂಟ್‌ ಬೀಳುತ್ತದೆ. ಇದರಿಂದ ಬಿಸಿಯೂಟ ತಯಾರಿಸಲು ಕಷ್ಟವಾಗುತ್ತಿದೆ.

ಮಳೆ ಬಂದಾಗ ಅಪಾಯದ ಸಾಧ್ಯತೆ ಇಮ್ಮಡಿಯಾಗುತ್ತದೆ. ಮಳೆ ನೀರು, ಬಿರುಕು ಗೋಡೆಗಳ ಮೂಲಕ ನೇರವಾಗಿ ಕೊಠಡಿಗಳ ಒಳಗೆ ಬರುತ್ತದೆ. ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ಇದ್ದರೂ ಯಾರೊಬ್ಬರೂ ಸಮಸ್ಯೆ ಪರಿಹಾರಕ್ಕೆ ಮುಂದಾಗುತ್ತಿಲ್ಲ. ಈಗಾಗಲೇ ಕಳೆದ ತಿಂಗಳ ಈ ಶಾಲೆಯ ಆವರಣದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ಮಗು ನೀರಿನ ತೊಟ್ಟಿಯಲ್ಲಿ ಬಿದ್ದು ಜೀವವನ್ನು ಕಳೆದುಕೊಂಡಿದೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಎಚ್ಚರಿಕೆ ವಹಿಸುತ್ತಿಲ್ಲ. ಮಕ್ಕಳ ಜೀವದ ಜೊತೆ ಚೆಲ್ಲಾಟ ಆಡುತ್ತಿರುವ ಶಿಕ್ಷಣ ಇಲಾಖೆ ಅಧಿ  ಕಾರಿಗಳಿಗೆ ಗ್ರಾಮಸ್ಥರು ಹಾಗೂ ಪಾಲಕರು ಹಿಡಿಶಾಪ ಹಾಕುತ್ತಿದ್ದಾರೆ.

ವಿದ್ಯಾರ್ಥಿಗಳು- ಸಿಬ್ಬಂದಿಗಿಲ್ಲ ಶೌಚಾಲಯ :  ಕುರುಡಗಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆ ಆವರಣದಲ್ಲಿ ನಿರ್ಮಿಸಿರುವ ಶೌಚಾಲಯ ಹಾಗೂ ಮೂತ್ರಾಲಯಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮಕ್ಕಳು ಬಯಲಲ್ಲಿ ಮಲಮೂತ್ರ ಮಾಡುತ್ತಾರೆ. ಆದರೆ, ಮಹಿಳಾ ಶಿಕ್ಷಕ ಹಾಗೂ ಪುರುಷ ಶಿಕ್ಷಕರು ಮುಜುಗರ ಪಡುತ್ತಿದ್ದಾರೆ. ಇಲಾಖೆಗೆ ಹತ್ತು ಹಲವಾರು ಬಾರಿ ಮೌಖೀಕ ಹಾಗೂ ಲಿಖೀತ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ

Advertisement

ಇಲ್ಲಿನ ಉರ್ದು ಶಾಲೆ ಕೊಠಡಿಗಳು ಸಂಪೂರ್ಣ ಶಿಥಿಲ ಗೊಂಡಿರುವುದಿಂದ ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುತ್ತಿದ್ದಾರೆ. ಕೂಡಲೇ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ ಇರುವ ಶಾಲೆಗಳನ್ನು ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿ ಕಲಿಯುವ ಮಕ್ಕಳಿಗೆ ಅನುಕೂಲ ಮಾಡಬೇಕು.ನಬೀಸಾಬ ನದಾಫ್‌, ಎಸ್‌ಡಿಎಂಸಿ ಅಧ್ಯಕ್ಷ

 

ಸಿಕಂದರ ಎಂ. ಆರಿ

Advertisement

Udayavani is now on Telegram. Click here to join our channel and stay updated with the latest news.

Next