ಮುಂದುವರಿದುದು- ಪೊಟ್ಯಾಸಿಯಂ ಅಂಶದ ಹೆಚ್ಚಳ ಅಥವಾ ಕೊರತೆಯೂ ವ್ಯಕ್ತಿ ನಿರ್ದಿಷ್ಟವಾಗಿರುತ್ತದೆ. ಪ್ರಾಣಿಜನ್ಯ ಪ್ರೊಟೀನ್ ಸಮೃದ್ಧವಾಗಿರುವ ಆಹಾರ ವಸ್ತುಗಳಲ್ಲಿ ಪೊಟ್ಯಾಸಿಯಂ ಕೂಡ ಹೆಚ್ಚು ಪ್ರಮಾಣದಲ್ಲಿ ಇರುತ್ತದೆ. ಆದ್ದರಿಂದ ಇದನ್ನು ಸೀಮಿತಗೊಳಿಸಬೇಕಾಗುತ್ತದೆ. ಹಣ್ಣು ಮತ್ತು ತರಕಾರಿಗಳಲ್ಲಿ ಪೊಟ್ಯಾಸಿಯಂ ಅಧಿಕ ಪ್ರಮಾಣದಲ್ಲಿ ಇರುವುದರಿಂದ ಬೇಯಿಸಿ ಪೊಟ್ಯಾಸಿಯಂ ಅಂಶನ್ನು ತೆಗೆದುಹಾಕಿ, ಬಳಿಕ ಸೇವಿಸುವ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಆದರೂ ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ಮಿತ ಪ್ರಮಾಣದಲ್ಲಿ ನಡೆಸಬೇಕಾಗುತ್ತದೆ. ರೋಗಿಯ ಆರೋಗ್ಯ ಸ್ಥಿತಿಯನ್ನು ಗಮನಿಸಿಕೊಂಡು ಅನೇಕ ಹಣ್ಣು ಮತ್ತು ತರಕಾರಿಗಳ ಸೇವನೆಯನ್ನು ಮಿತಗೊಳಿಸಬೇಕು. ರೋಗಿಯು ಮಧುಮೇಹಿಯಾಗಿದ್ದರೆ ವರ್ಜಿಸಬೇಕಾದ ಹಣ್ಣು ಮತ್ತು ತರಕಾರಿಗಳ ಪಟ್ಟಿ ಮತ್ತಷ್ಟು ಉದ್ದವಾಗುತ್ತದೆ.
ರೋಗಿಯ ದೇಹದಲ್ಲಿ ದ್ರವಾಂಶ ಉಳಿಯುವಿಕೆಯ ಪ್ರಮಾಣವನ್ನು ಆಧರಿಸಿ ಸೋಡಿಯಂ ಸೇವನೆಯ ಪ್ರಮಾಣದ ಮೇಲಣ ಮಿತಿಯು ಡಯಾಲಿಸಿಸ್ ಮೇಲಿರುವ ಮತ್ತು ಡಯಾಲಿಸಿಸ್‌ಗೆ ಒಳಗಾಗದ ರೋಗಿಗಳಿಗೆ ಒಂದೇ ಆಗಿರುತ್ತದೆ. ಎಲ್ಲ ಕಾಯ್ದಿರಿಸಿದ, ಕ್ಯಾನ್‌ಡ್, ಟಿನ್‌ಡ್ ಆಹಾರಗಳು, ಉಪ್ಪಿಗೆ ಪರ್ಯಾಯಗಳು, ಬೇಕರಿ ತಿನಿಸುಗಳು, ಸಾಸ್‌ಗಳು, ಕೆಚಪ್‌ಗ್ಳನ್ನು ವರ್ಜಿಸಬೇಕಾಗುತ್ತದೆ. ಒಣ ಮೀನು, ಉಪ್ಪಿನಕಾಯಿಗಳು ಕೂಡ ವಜ್ಯì.
ದೈನಿಕ ರಂಜಕಾಂಶದ ಮೇಲಣ ಮಿತಿಯನ್ನು ಆರಂಭ ದಿಂದಲೂ 600-750 ಗ್ರಾಂ ಮತ್ತು ಕ್ಯಾಲ್ಸಿಯಂ ಮಿತಿಯನ್ನು 1.5ರಿಂದ 2 ಗ್ರಾಂ ಇರಿಸಿಕೊಳ್ಳುವುದನ್ನು ಪಾಲಿಸಲಾಗುತ್ತದೆ. ಹೈನು ಉತ್ಪನ್ನಗಳಲ್ಲಿ ಕ್ಯಾಲ್ಸಿಯಂ ಧಾರಾಳವಾಗಿರುವುದರಿಂದ ಅವುಗಳ ಮೇಲೆ ಮಿತಿ ಹೇರುವ ಮೂಲಕ ಕ್ಯಾಲ್ಸಿಯಂ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು.
ಕಬ್ಬಿಣಾಂಶ ಮತ್ತು ಸೂಕ್ಷ್ಮ ಖನಿಜಾಂಶಗಳನ್ನು ಕೇವಲ ಆಹಾರದಿಂದಷ್ಟೇ ಪೂರೈಸುವುದು ಅಸಾಧ್ಯವಾದುದರಿಂದ ವೈದ್ಯರು ಪೂರಕ ಆಹಾರ/ ಔಷಧಗಳನ್ನು ಶಿಫಾರಸು ಮಾಡುತ್ತಾರೆ. ದೇಹದಲ್ಲಿ ಹೆಚ್ಚು ಪ್ರಮಾಣದ ದ್ರವಾಂಶ ಉಳಿಯುವುದನ್ನು ತಡೆಗಟ್ಟಲು ದ್ರವಾಹಾರ ಸೇವನೆಯ ಮೇಲೆ ಮಿತಿ ಹಾಕಿಕೊಳ್ಳುವುದು ಅಗತ್ಯ. ರೋಗಿಯ ಸ್ಥಿತಿಯನ್ನು ಆಧರಿಸಿ ಇದು ಸಾಮಾನ್ಯವಾಗಿ ದಿನಕ್ಕೆ 800 ಮಿ. ಲೀ.ಗಳಿಂದ 1.5 ಲೀಟರ್ ಆಗಿರುತ್ತದೆ. ರೋಗಿ ಎಷ್ಟು ಪ್ರಮಾಣದ ದ್ರವಾಹಾರ ಸೇವಿಸಬೇಕು ಎಂಬುದನ್ನು ವೈದ್ಯರು ಶಿಫಾರಸು ಮಾಡುತ್ತಾರೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರತಿಯೊಬ್ಬ ರೋಗಿಯ ಆಹಾರ ಶೈಲಿ ಮತ್ತು ಆಹಾರಾಭ್ಯಾಸಗಳನ್ನು ಪರಿವರ್ತಿಸುವಲ್ಲಿ ವೈದ್ಯರು ಮತ್ತು ಪಥ್ಯಾಹಾರ ತಜ್ಞರು ಶ್ರಮ ವಹಿಸಬೇಕಾಗಿದೆ. ಕಾಯಿಲೆಯ ವಿಧ, ಸಹ ಕಾಯಿಲೆಗಳು, ಪೌಷ್ಟಿಕಾಂಶ ಸ್ಥಿತಿಗತಿ ಮತ್ತು ಕ್ಯಾಲೊರಿ, ಪ್ರೊಟೀನ್, ಸೋಡಿಯಂ ಮತ್ತು ದ್ರವಾಹಾರ ಮಿತಿಗಳನ್ನು ಗಮನದಲ್ಲಿ ಇರಿಸಿಕೊಂಡು ಪ್ರತೀ ಆಹಾರ ಯೋಜನೆಗಳನ್ನೂ ರೂಪಿಸಬೇಕಾಗುತ್ತದೆ.