ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಕುರಿತ ಪ್ರತಿಕ್ರಿಯೆ ಕೇಳಿದ ಮಾಧ್ಯಮದವರ ಮೇಲೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಹರಿಹಾಯ್ದ ಪ್ರಸಂಗ ನಡೆಯಿತು.
2019 ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರಕ್ಕೆ ಬಂದಾಗ ಅವರಿಗೆ ಒದಗಿಸಬೇಕಾದ ಭದ್ರತೆ ಕುರಿತು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸುತ್ತೋಲೆ ಕುರಿತು ಡಿಜಿಪಿ ಕಚೇರಿಯಲ್ಲಿ ಪ್ರತಿಕ್ರಿಯೆ ಪಡೆಯಲು ಮುಂದಾದ ಮಾಧ್ಯಮ ಪ್ರತಿನಿಧಿಗಳನ್ನು ಕಂಡ ಅವರು, ನಿಮ್ಮನ್ನು ಯಾರು ಇಲ್ಲಿಗೆ ಕಳುಹಿಸಿದ್ದು, ಎಂದು ಸಿಬ್ಬಂದಿಗೆ “ಸೆಂಡ್ ದೆಮ್ ಔಟ್’ ಎಂದರು.
ಇದಕ್ಕೂ ಮೊದಲು ಡಿಜಿಪಿ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅದರಲ್ಲಿ ಪಾಲ್ಗೊಂಡಿದ್ದ ನೀಲಮಣಿ ಎನ್.ರಾಜು ಅವರನ್ನು ಮಾಧ್ಯಮ ಪ್ರತಿನಿಧಿಗಳು, ಪ್ರಧಾನಿ ಭದ್ರತೆ ಸಂಬಂಧ ಪ್ರತಿಕ್ರಿಯೆ ನೀಡಲು ಕೋರಿದರು.
ಕೆಲ ಸಮಯದ ಬಳಿಕ ಡಿಜಿಪಿ ಕಚೇರಿ ಮಾಧ್ಯಮ ಸಂಪರ್ಕಾಧಿಕಾರಿಗಳು ಡಿಜಿಪಿ ಮಾತನಾಡಲು ಬರುವಂತೆ ಸೂಚಿಸಿದ್ದಾರೆ ಎಂದು ತಿಳಿಸಿದ್ದರು. ಅದರಂತೆ ಮಾಧ್ಯಮದವರು ಡಿಜಿಪಿ ಕೊಠಡಿಗೆ ಹೋದಾಗ ನೀವು ಯಾವ ಕಾರಣಕ್ಕೆ ಇಲ್ಲಿಗೆ ಬಂದಿದ್ದೀರಾ?
ನಿಮ್ಮನ್ನು ಒಳಗೆ ಬಿಟ್ಟವರು ಯಾರು? ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ ಎಂದು ಏರುಧ್ವನಿಯಲ್ಲಿ ಕೂಗಾಡಿದರು. ನಮ್ಮನ್ನು ಕೇಳಲು ನೀವು ಯಾರು? ನಾವೇನು ಹೇಳುತ್ತೇವೋ ಆ ಮಾಹಿತಿ ಪಡೆದುಕೊಂಡು ಹೋಗಬೇಕಷ್ಟೇ ಎಂದು ತಾಕೀತು ಮಾಡಿದರು.