Advertisement
ದೇವಾಲಯದಲ್ಲಿ ನಡೆಯುವ ಉತ್ಸವಗಳ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಅಥವಾ ದೇವತಾ ಚಾಕರಿ ಮಾಡುವ ಹಲವು ಮನೆಯವರು ಪೂರ್ವಶಿಷ್ಟ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ಇದ್ದರೂ ಪುತ್ತೂರು ಮಹಾಲಿಂಗೇಶ್ವರನ ಉತ್ಸವದ ಸೇವೆ ಮಾಡಲು ಅವರು ಬಂದೇ ಬರುತ್ತಾರೆ.
ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ದೈವಾರಾಧನೆ ಸೇವೆ ಸಲ್ಲಿಸುವ ಕುಟುಂಬವೊಂದು ಸಾಲ್ಮರದಲ್ಲಿದೆ. ಈ ಕುಟುಂಬದ ಸದಸ್ಯ ಅರುಣ್ ಸಾಲ್ಮರ ದೇವಾಲಯದಲ್ಲಿ ನಡೆಯುವ ಎರುಕುಳ ದೈವ, ಕೊರಗ ಕೋಲ ಮತ್ತು ಅಂಙಣತ್ತಾಯ ದೈವಗಳ ದೈವಾರಾಧಕರಾಗಿ ಸೇವೆ ಸಲ್ಲಿಸುತ್ತಿದ್ದು, ಅದಕ್ಕಾಗಿ ಅವರು ಆಫ್ರಿಕಾದಿಂದ ಆಗಮಿಸಿ ಸೇವೆ ನೀಡಿದ್ದಾರೆ. ಶ್ರೀ ರಾಮಕೃಷ್ಣ ಮಠದ ಉದ್ಯೋಗಿಯಾಗಿರುವ ಅರುಣ್ ಈ ಬಾರಿ ನ. 23ರಂದು ನಡೆದ ಪೂಕರೆ ಉತ್ಸವದಲ್ಲಿ ಕೊರಗ ಕೋಲ ಮತ್ತು ಎರುಕುಳ ದೈವದ ದೈವಾರಾಧನೆ ಸೇವೆಗಾಗಿ ದಕ್ಷಿಣ ಆಫ್ರಿಕಾದ ಡರ್ಬಾನ್‌ನಿಂದ ಪುತ್ತೂರಿಗೆ ಆಗಮಿಸಿದ್ದಾರೆ.
Related Articles
40 ವರ್ಷ ವಯಸ್ಸಿನ ಅರುಣ್ ಸಾಲ್ಮರ ಅವರು ತಮ್ಮ ತಂದೆಯ ಕಾಲಾನಂತರ ಪುತ್ತೂರು ಸೀಮೆಯೊಡೆಯನ ಸನ್ನಿಧಿಯಲ್ಲಿ ದೈವಾರಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 15 ವರ್ಷಗಳಿಂದ ಶ್ರೀ ರಾಮಕೃಷ್ಣ ಮಠದ ಮೈಸೂರು ಮತ್ತು ಕೋಲ್ಕಾತ್ತಾದ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇವಾಲಯದ ದೈವಾರಾಧನೆಯ ಸೇವೆಗಾಗಿ ಆಗಮಿಸುವುದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಪ್ರಸ್ತುತ ಕೆಲವು ಸಮಯಗಳಿಂದ ಇವರು ದಕ್ಷಿಣ ಆಫ್ರೀಕಾದ ಡರ್ಬಾನ್‌ನಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶ್ರೀ ದೇವರ ಸೇವೆಗಾಗಿ ಡರ್ಬಾನ್‌ನಿಂದ ಆಗಮಿಸಿ ಎರುಕುಳ ದೈವದ ಸೇವೆ ನೆರವೇರಿಸಿದ್ದಾರೆ.
Advertisement
ದಕ್ಷಿಣ ಆಫ್ರಿಕಾದ ಡರ್ಬಾನ್‌ನಿಂದ ಇಲ್ಲಿಗೆ ಆಗಮಿಸಿ ಮತ್ತೆ ತೆರಳಲು ಅವರಿಗೆ 1ಲಕ್ಷ ರೂ. ವಿಮಾನದ ಟಿಕೆಟ್ ವೆಚ್ಚ ತಗಲುತ್ತದೆ. ಆದರೆ ಹಿರಿಯರ ಕಾಲದಿಂದಲೂ ಮಾಡಿಕೊಂಡು ಬಂದಿರುವ ದೈವಾರಾಧನೆಯ ಸೇವೆಯನ್ನು ತಪ್ಪಿಸಬಾರದು ಮತ್ತು ಸೀಮೆಯೊಡೆಯನೊಂದಿಗಿನ ಅಚಲ ನಂಬಿಕೆಯೇ ಇದಕ್ಕೆ ಮೂಲ ಕಾರಣವಾಗಿದೆ ಎನ್ನುತ್ತಾರವರು.
ದೈವಾರಾಧಾಕನಾಗಿ…ಪೂಕರೆ ಉತ್ಸವದಂದು ಶ್ರೀ ದೇವರನ್ನು ಸ್ವಾಗತಿಸಿ ಉತ್ಸವದಲ್ಲಿ ಕೊಂಡೊಯ್ಯುವ ಎತ್ತಿನ ಮುಖವಾಡ ಧರಿಸುವ ಎರುಕುಳ ದೈವ ಹಾಗೂ ದೇವಾಲಯದ ಹೊರಾಂಗಣದಲ್ಲಿ ನೆಲೆಸಿರುವ ಅಂಗಣತ್ತಾಯ ದೈವಗಳು ಪ್ರಮುಖ ಕ್ಷೇತ್ರದ ದೈವಗಳಾಗಿ ಗೌರವಿಸಲ್ಪಡುತ್ತವೆ. ಎರುಕುಳ ದೈವದ ಸೇವೆ ಪೂಕರೆ ಉತ್ಸವದ ಸಂದರ್ಭ ನಡೆದರೆ ಅಂಙಣತ್ತಾಯ ದೈವದ ಸೇವೆ ಜಾತ್ರೆಯ ಸಂದರ್ಭ ನಡೆಯುತ್ತದೆ. ಈ ಎರಡೂ ದೈವಗಳ ದೈವಾರಾಧಕರಾಗಿ ಸೇವೆ ಅರುಣ್ ಸಾಲ್ಮರ ಸೇವೆ ನೀಡುತ್ತಿದ್ದಾರೆ. ಸೈನಿಕನ ಸೇವೆ
ಪುತ್ತೂರಿನ ಉಳ್ಳಾಯನ ಚಾಕರಿಗಾಗಿ ತೆಂಕಿಲದ ಕುಟುಂಬವೊಂದರ ದೇಶದ ರಕ್ಷಣಾ ವಿಭಾಗದಲ್ಲಿರುವ ಮೂರು ಮಂದಿ ಜಾತ್ರೆಯ ಸಂದರ್ಭದಲ್ಲಿ ತಪ್ಪದೇ ಹಾಜರಾಗುವ ಕುರಿತು “ಉದಯವಾಣಿ’ ಸುದಿನದಲ್ಲಿ 2017ರ ಎ. 17 ರಂದು ವರದಿ ಪ್ರಕಟಿಸಲಾಗಿತ್ತು. ಇಂತಹ ಹಲವು ಮಂದಿ ತಾವು ಯಾವುದೇ ವೃತ್ತಿಯನ್ನು ಮಹಾಲಿಂಗೇಶ್ವರ ಸೇವೆಯನ್ನು ಮರೆಯದೆ ನಡೆಸುತ್ತಿರುವುದು ನೆನಪಿಸುವಂತದ್ದು. ದಾರಿ ತೋರಿದ ದೇವರು
ಮಹಾಲಿಂಗೇಶ್ವರ ದೇವಾಲ ಯದಲ್ಲಿ ನಮ್ಮ ಹಿರಿಯರ ಕಾಲದಿಂದಲೂ ದೈವಾರಾಧಕರ ಸೇವೆ ಮಾಡುತ್ತಿದ್ದೇವೆ. ನನ್ನ ಬದುಕಿ ನಲ್ಲಿ ಬೆಳಕಿನ ದಾರಿ ತೋರಿಸಿದ ಮಹಾಲಿಂಗೇಶ್ವರ ದೇವರು ನನ್ನನ್ನು ಸೇವೆಗಾಗಿ ಕರೆಸಿಕೊಂಡಿದ್ದಾನೆ. ಸೀಮೆಯೊಡೆಯನ ಸೇವೆಯನ್ನು ಮಾಡುವುದು ಭಕ್ತಿಯ ಕೆಲಸ ಎಂದು ನಾನು ನಂಬುತ್ತೇನೆ.
– ಅರುಣ್ ಸಾಲ್ಮರ
ದೈವಾರಾಧಕ, ಪುತ್ತೂರು.