ಹನುಮ ಜಯಂತಿ ಕಾರ್ಯಕ್ರಮದ ಹಿನ್ನೆಲೆಯವಲ್ಲಿ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಎಲ್ಲೆಂದರಲ್ಲಿ ಭಕ್ತಿ ಗಾನಗಳು ಕೇಳಿ ಬರುತ್ತಿದ್ದವು. ಶ್ರೀಕೃಷ್ಣನ ಮುಂದಿನ ಮಂಟಪ, ಕನಕ ಮಂಟಪ ಹಾಗೂ ರಾಜಾಂಗಣದಲ್ಲೂ ಭಕ್ತಿ ಗಾನಗಳದ್ದೇ ಸದ್ದು. ಬೇರೆ ಬೇರೆ ತಂಡಗಳು ಈ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದವು. ಇದರಿಂದಾಗಿ ಇಡೀ ಪರಿಸರದ ಭಕ್ತಿ ಭಾವವು ಹೊಸ ಕಳೆಗಟ್ಟಿತ್ತು.
ಶ್ರೀಕೃಷ್ಣನ ಎದುರಿರುವ ಮಂಟಪ(ಚಂದ್ರ ಶಾಲೆ)ದಲ್ಲಿ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ ಮತ್ತು ತಂಡದಿಂದ ನಿರಂತರವಾಗಿ 4 ತಾಸುಗಳ ಕಾಲ ಭಕ್ತಿ ಗಾನ ಸುಧೆ ಹರಿದು ಬಂದಿತ್ತು. ಇವರದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದು ಪ್ರಮುಖ ಭಕ್ತಿ ಗಾನ ತಂಡವಾಗಿದ್ದು, ಪ್ರತಿಯೊಂದು ಹಾಡು ಕೂಡ ಶ್ರೋತೃಗಳನ್ನು ತನ್ಮಯಗೊಳಿಸಿದ್ದುದು ವಿಶೇಷ. ಇಡೀ ದಿನದ ಪ್ರಮುಖ ಕಾರ್ಯಕ್ರಮವಾಗಿದ್ದ ಇದರಲ್ಲಿ ಸಂಗೀತ ಮತ್ತು ಭಕ್ತಿರಸ ಮೇಳೈಸಿತ್ತು.
ಶ್ರೀ ಶ್ರೀಕೃಷ್ಣ ಮುಖ್ಯ ಪ್ರಾಣ ಸೇವಾ ಸಮಿತಿ ಪ್ರಾಯೋಜ ಕತ್ವದಲ್ಲಿ ಜರಗಿದ್ದ ಈ ಕಾರ್ಯಕ್ರಮವು “ಗಜವದನ ಬೇಡುವೆ’ ಹಾಡಿನ ಮೂಲಕ ಆರಂಭವಾಗಿ “ಕೃಷ್ಣ ಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ’, “ಸುಂದರ ಮೂರ್ತಿ ಮುಖ್ಯ ಪ್ರಾಣ’, “ಲಕ್ಷ್ಮೀ ಕಾಂತ ಬಾರೋ’, “ಕುಣಿ ದಾಡೋ ಕೃಷ್ಣ’, “ಬಂದ ನೋಡಿ ಕೃಷ್ಣ’, “ಕೃಷ್ಣಾ ನೀ ಬೇಗನೆ ಬಾರೋ’, “ಎಷ್ಟು ಸಾಹಸವಂತ ’, ”ಭಾಗ್ಯದ ಲಕ್ಷ್ಮೀ ಬಾರಮ್ಮಾ’, “ಧೀರ ಹನುಮ’, “ಜಯ ವಾಯು ಹನುಮಂತ’, “ಗೋವಿಂದಾ ನಿನ್ನ ನಾಮವೇ ಚಂದ’, “ಆದದ್ದೆಲ್ಲ ಒಳಿತೇ ಆಯಿತು’, “ಪ್ರಣ ಮಾ ಮ್ಯಹಂ ಶ್ರೀ ಗೌರಿ ಸುತಂ’, “ನಂಬಿದೆ ನಿನ್ನ ಪಾದವ’, “ಬಂದಾ ನೋಡಿ’, “ನೀರೆ ತೋರೆಲೆ’, “ಕೃಷ್ಣಾ ನೀ ಬೇಗನೆ ಬಾರೋ’, “ರಾಮ ಗೋವಿಂದ ಹರೆ’, “ಅಧರಂ ಮಧು ರಂ’ ಮುಂತಾದ ಹಾಡುಗಳು ಪ್ರೇಕ್ಷಕರನ್ನು ಸೆಳೆದು ನಿಲ್ಲಿಸಿದವು. ಇದು ಈ ತಂಡದ 403ನೇ ಕಾರ್ಯಕ್ರಮವಾಗಿತ್ತು. ಹನುಮ ಜಯಂತಿ ದಿನ ಶ್ರೀಕೃಷ್ಣನ ಸನ್ನಿಧಿಯಲ್ಲಿ ಪ್ರಸ್ತುತಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯ ಪ್ರಾಣನ ಭಕ್ತಿಗೀತೆಗಳದ್ದೇ ಸಿಂಹ ಪಾಲು ಪಡೆದುಕೊಂಡಿತ್ತು. ನಿಗದಿತ ಸಮಯದಲ್ಲೇ, ಅಂದರೆ ಪೂರ್ವಾಹ್ನ 11.30ಕ್ಕೆ ಆರಂಭವಾದ ಭಕ್ತಿ ಗಾನ ಸುಧೆಯು ಸುಮಾರು 4 ತಾಸುಗಳ ಕಾಲ ಅವಿರತವಾಗಿ ಸಾಗಿತ್ತು. ಕೃಷ್ಣನ ದರ್ಶನಕ್ಕೆ ಬಂದಿದ್ದ ಭಕ್ತರೆಲ್ಲರೂ ಈ ತಂಡದ ಸುಶ್ರಾವ್ಯ ಮತ್ತು ಭಕ್ತಿಲೋಕದಲ್ಲಿ ತೇಲಾಡುವಂತೆ ಮಾಡುವಂಥ ಹಾಡುಗಳನ್ನು ಆಲಿಸುತ್ತಾ ತನ್ಮಯರಾಗಿದ್ದರು. ತಂಡವು ಪ್ರಸ್ತುತಪಡಿಸಿದ ಎಲ್ಲ ಹಾಡುಗಳೂ ಶ್ರೋತೃಗಳಿಂದ ಮೆಚ್ಚುಗೆಗಳಿಸಿದ್ದವು. ಶ್ರೀಕೃಷ್ಣ ಮತ್ತು ಹನುಮಂತನ ಕಥಾನ ಕವೂ ಇಲ್ಲಿ ಹಾಡಿನ ರೂಪದಲ್ಲಿ ಪ್ರಸ್ತುತಗೊಂಡಿದ್ದರಿಂದ ಪುರಾಣ ಕಥಾಶ್ರವಣವೂ ಆದಂತಿತ್ತು. ಸುಮಾರು 80 ವರ್ಷ ದಾಟಿರುವ ವೃದ್ಧರೊಬ್ಬರು ಹಾಡು ಆಲಿಸುತ್ತಾ ಕುಣಿಯುತ್ತಿದ್ದರು. ಇದು ಆ ಕಾರ್ಯಕ್ರಮವು ಶ್ರೋತೃಗಳನ್ನು ಎಷ್ಟು ಸೆಳೆದು ನಿಲ್ಲಿಸಿದೆ ಎಂಬುದಕ್ಕೆ ಉತ್ತಮ ಸಾಕ್ಷಿ. ಕೃಷ್ಣನಿಗೆ ಪ್ರಿಯವಾಗಿರುವ ಮತ್ತು ಸಂಗೀತಕ್ಕೂ ಪೂರಕವಾಗಿರುವ ಕೊಳಲು ವಾದನವೂ ಇದ್ದುದರಿಂದ ಕರ್ಣಾನಂದ ಇಮ್ಮಡಿಗೊಂಡಿತ್ತು.
ಹಾಡುಗಾರಿಕೆಯನ್ನು ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯ, ವಿ| ಸುಧೀರ್ ಕೊಡವೂರು ಮತ್ತು ಕೃಷ್ಣ ಆಚಾರ್ಯ ಅವರು ನಡೆಸಿಕೊಟ್ಟರು. ಇಂಪಾದ ಭಕ್ತಿಗಾನಕ್ಕೆ ಪೂರಕವಾಗಿ ವಯೊಲಿನ್‌ನಲ್ಲಿ ಶರ್ಮಿಳಾ ಕೆ. ರಾವ್, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ, ಮೃದಂಗದಲ್ಲಿ ಬಾಲಚಂದ್ರ ಭಾಗವತ್, ತಬ್ಲಾದಲ್ಲಿ ವಿ| ಮಾಧವ ಆಚಾರ್ಯ ಸಹಕರಿಸಿದರು.
ಪುತ್ತಿಗೆ ಪದ್ಮನಾಭ ರೈ