Advertisement

ಅಜ್ಜನ ಜಾತ್ರೆಗೆ ಭಕ್ತ ಮಹಾ ಸಾಗರ

03:53 PM Jan 04, 2018 | |

ಕೊಪ್ಪಳ: ಕೊಪ್ಪಳದಲ್ಲಿ ಬುಧವಾರ ಸಂಜೆ ಸೂರ್ಯನು ಇಳಿಜಾರಿನತ್ತ ಸಾಗುವ ಹೊತ್ತಿಗೆ ಹೊತ್ತಿಗೆ ಗವಿಸಿದ್ದೇಶ್ವರ ಮಹಾ ರಥೋತ್ಸವ ಲಕ್ಷ ಲಕ್ಷ ಭಕ್ತ ಸಾಗರದ ಮಧ್ಯೆ ಸಾಂಗವಾಗಿ ಸಾಗಿತು. ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ರಥೋತ್ಸವಕ್ಕೆ ಚಾಲನೆ ನೀಡಿ ಲಕ್ಷಾಂತರ ಭಕ್ತ ಸಾಗರ ನೋಡಿ ಮೂಕ ವಿಸ್ಮಿತರಾಗಿ ಅಜ್ಜನ ಮಹಾ ಮಹಿಮೆ ಬಗ್ಗೆ ಕೊಂಡಾಡಿದರು.

Advertisement

ಬಳಿಕ ಮಾತನಾಡಿದ ಅವರು, ಕಳೆದ ನಾಲ್ಕು ವರ್ಷಗಳಿಂದ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ ಅವರು ನನ್ನನ್ನು ಗವಿಸಿದ್ದೇಶ್ವರ ಜಾತ್ರೆಗೆ ಆಹ್ವಾನ ನೀಡುತ್ತಿದ್ದರು. ಆದರೆ ಇಂದು ಆ ಘಳಿಗೆ ಕೂಡಿಬಂದಿದೆ. ಇದು ಸ್ವರ್ಗದಲ್ಲಿ ನಡೆಯುವಂತ ಮಹೋತ್ಸವ ಎಂದೆನಿಸುತ್ತದೆ. ನನ್ನ 80 ವರ್ಷದ ಜೀವನದಲ್ಲಿಯೇ ಇಂತಹ ಲಕ್ಷಾಂತರ ಭಕ್ತ ಸಾಗರದ ಮಧ್ಯೆ ಸಾಗುವ ರಥೋತ್ಸವವನ್ನು ನೋಡಿಲ್ಲ ಇದು ನನ್ನ ಪುಣ್ಯವೇ ಸರಿ ಎಂದರು.

ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಮಾತನಾಡಿ ಕತ್ತಲೆಯನ್ನು ಕೋಣೆಯಲ್ಲಿ ಕೂಡಿಟ್ಟರೆ ಹೋಗಲ್ಲ. ಕಟ್ಟಿಗೆಯಿಂದ ಹೊಡೆದೋಡಿಸಿದರೂ ಹೋಗಲ್ಲ. ಆದರೆ ಒಂದು ದೀಪ ಬೆಳಗುವ ಮೂಲಕ ಎಂತಹ ಕತ್ತಲೆಯನ್ನಾದರೂ ಓಡಿಸಬಹುದು. ಮನುಷ್ಯನ ಬದುಕಿನಲ್ಲಿ ಕತ್ತಲೆಯನ್ನೂ ದೂರವಾಗಿಸಿ, ಜೀವನ ಬೆಳಗಿಸುವ ಕೆಲಸ ಮಾಡಬೇಕು. ಜಗತ್ತಿನಲ್ಲಿ ಒಳ್ಳೆಯದು ಹಾಗೂ ಕೆಟ್ಟದ್ದು ಎರಡೂ ಇವೆ. ಕೆಟ್ಟದ್ದನ್ನೇ ದೂಷಿಸುತ್ತಾ ಕುಳಿತರೆ ಯಾವುದೇ ಬೆಳವಣಿಗೆ ಕಾಣಲ್ಲ. ಬದಲಿಗೆ ಒಳ್ಳೆಯ ಮಾತನ್ನಾಡುವ ಮೂಲಕ ಒಳ್ಳೆಯ ಕೆಲಸ ಮಾಡುವ ಮೂಲಕ ಜಗತ್ತನ್ನು ಉದ್ದಾರ ಮಾಡಬಹುದಾಗಿದೆ. ನಮ್ಮ ಜೀವನದಲ್ಲಿ ಉತ್ತಮ
ವಿಚಾರ ಅಳವಡಿಸಿಕೊಳ್ಳಬೇಕು ಎಂದರು.

ನಮ್ಮ ಜೀವನ ಪವಿತ್ರವಾಗಲು ಕಾಶಿಗೆ ಹೋಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ನಮ್ಮ ದೇಹದ ಮೈಲಿಗೆ ಹೋಗುವುದೇ
ವಿನಃ ನಮ್ಮ ಮನಸ್ಸಿನ ಮೈಲಿಗೆ ಹೋಗುವುದಿಲ್ಲ. ನಮ್ಮ ಜೀವನ ಪವಿತ್ರವಾಗಲು ಇನ್ನೊಬ್ಬರ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ಳಬೇಕು ಹಾಗೂ ಇನ್ನೊಬ್ಬರ ಮನೆ ಮುರಿದು ಮೋಸ ಮಾಡುವ ಕೆಲಸವನ್ನು ಕೈ ಬಿಟ್ಟರೆ ನಮ್ಮ ಜೀವನ ಸಾರ್ಥಕವಾಗಲಿದೆ ಎಂದು ನುಡಿದರು.

ಲಕ್ಷಾಂತರ ಭಕ್ತರ ಉದ್ಘೋಷ
ಪ್ರತಿ ವರ್ಷದಂತೆ ಈ ವರ್ಷವೂ ಸಹ ಲಕ್ಷಾಂತರ ಭಕ್ತರು ಅಜ್ಜನ ಜಾತ್ರೆಯ ಮಹಾರಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಸಂಜೆ ಯಾಗುತ್ತಿದ್ದಂತೆ ಶ್ರೀ ಗವಿಸಿದ್ಧೇಶ್ವರ ಮಹಾರಾಜ್‌ ಕೀ ಜೈ ಎನ್ನುವ ಉದ್ಘೋಷದೊಂದಿಗೆ ತೇರನ್ನು ಪಾದಗಟ್ಟೆಯವರೆಗೆ ಭಕ್ತಿ ಭಾವದಿಂದ ಎಳೆದರು.

Advertisement

ಗವಿಸಿದ್ಧೇಶ್ವರ ಪ್ರೌಢಶಾಲೆ, ವಸತಿ ಗೃಹ, ಕಾಲೇಜಿನ ಆವರಣದಲ್ಲಿ ಮಹಿಳೆಯರು, ಮಕ್ಕಳು ಜಮಾಯಿಸಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಮೇಲೂ ಜನಜಂಗುಳಿ ಇತ್ತು. ತೇರು ಪಾದಗಟ್ಟೆ ಯವರೆಗೆ ಹೊರಡುತ್ತಿದ್ದಂತೆ ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮುಂಜಾಗ್ರತಾ ಕ್ರಮವಾಗಿ ಮಠದ ಸುತ್ತಮುತ್ತ 1 ಕಿ.ಮೀ.ವರೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next