Advertisement
ಮರುಕ್ಷಣವೇ ಒಂದು ದೆವ್ವ ಹುತ್ತದಿಂದ ಎದ್ದು ಬಡವನ ಬಳಿಗೆ ಬಂದಿತು. ಅದನ್ನು ಕಂಡ ಬಡವ ಭಯದಿಂದ ಓಡಲು ಮುಂದಾದ. ಆಗ ದೆವ್ವವು, ”ಭಯಪಡುವ ಅಗತ್ಯವಿಲ್ಲ. ಉಪಕಾರಿಯಾದ ನಿನಗೆ ಖಂಡಿತ ತೊಂದರೆ ಮಾಡುವುದಿಲ್ಲ. ಎಷ್ಟೋ ಸಮಯದಿಂದ ಬಂಧನದಲ್ಲೇ ಇದ್ದೆ ನೋಡು. ನನ್ನನ್ನು ಅದರಿಂದ ಮುಕ್ತಗೊಳಿಸಿದ ನಿನಗೊಂದು ಧನ್ಯವಾದ ಹೇಳಲು ಬಂದಿದ್ದೇನೆ” ಎಂದಿತು. ಬಡವ ಅಚ್ಚರಿಯಿಂದ, ”ನಾನು ನಿನಗೆ ಅಂತಹ ಉಪಕಾರ ಮಾಡಿದೆನೆ? ನನಗೇನೂ ತಿಳಿಯದಲ್ಲ!” ಎಂದು ಹೇಳಿದ.
Related Articles
Advertisement
ಬಡವನು ಸಂತೋಷದಿಂದ, ”ನೀನು ಸಂಪತ್ತನ್ನು ನೀಡಿ ನನ್ನ ಬಡತನವನ್ನು ನೀಗುತ್ತಿರುವುದಲ್ಲದೆ ಮನೆಯ ಬೆಳಕಾಗಿ ಮಗನೊಬ್ಬ ಜನಿಸುವ ದಾರಿಯನ್ನೂ ತೋರಿಸುತ್ತಿರುವೆ. ಅದಕ್ಕಾಗಿ ನಿನಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದು. ಕೇಳಿಕೋ, ಏನು ಬೇಕಿದ್ದರೂ ಕೊಡುತ್ತೇನೆ” ಎಂದು ಕೇಳಿದ.
”ನೋಡು, ನಾನು ದೆವ್ವದ ಜನ್ಮದಿಂದ ಮುಕ್ತನಾಗಬೇಕಿದ್ದರೆ ಬೇರೊಬ್ಬರು ದೆವ್ವದ ಜನ್ಮವನ್ನು ಸ್ವೀಕರಿಸಲೇಬೇಕು ಎಂದು ದೇವರು ಹೇಳಿದ್ದಾನೆ. ಈಗ ನಿನ್ನನ್ನು ನಾನು ಹಿಡಿದು ಕೊಲ್ಲಬಹುದಾಗಿತ್ತು. ಆದರೆ, ಬಲವಂತದಿಂದ ಹಾಗೆ ಮಾಡಬಾರದು ಎಂದು ದೇವರ ಕಟ್ಟಪ್ಪಣೆಯಿದೆ. ಆದಕಾರಣ ನಾನು ಹೇಳುವ ಉಪಾಯದಿಂದ ನಿನಗೊಬ್ಬ ಮಗ ಜನಿಸಿದರೆ ಅವನನ್ನು ನನಗೆ ಕೊಡಬೇಕು. ಆ ಮಗುವನ್ನು ದೆವ್ವವಾಗಿ ಪರಿವರ್ತಿಸಿದರೆ ನಾನು ಮೊದಲಿನ ಜನ್ಮ ಪಡೆಯುತ್ತೇನೆ, ನನ್ನ ಸಂಪತ್ತನ್ನು ಅನುಭವಿಸುತ್ತ ಸುಖವಾಗಿರುತ್ತೇನೆ. ಈ ಮಾತಿಗೆ ನಿನ್ನ ಸಮ್ಮತಿ ಇದೆಯೆ?” ಎಂದು ದೆವ್ವ ಪ್ರಶ್ನಿಸಿತು.
ಬಡವ ಹೆಚ್ಚು ಯೋಚನೆ ಮಾಡಲಿಲ್ಲ. ಒಂದು ಸಲ ತನ್ನ ಮಗನ ಮುಖವನ್ನಾದರೂ ನೋಡಲು ಅವಕಾಶ ಸಿಕ್ಕಿದರೆ ಸಾಕು ಎಂದುಕೊಂಡ. ಒಂದೇ ಉಸಿರಿಗೆ, ”ಅದಕ್ಕೇನಂತೆ. ಮಗು ಜನಿಸಿದ ಕೂಡಲೇ ನನ್ನ ಮನೆಗೆ ಬಾ. ಮಗುವನ್ನು ನಿನ್ನ ಕೈಗೊಪ್ಪಿಸಿ ಮತ್ತೆ ಮನುಷ್ಯನಾಗಲು ಸಹಾಯ ಮಾಡುತ್ತೇನೆ” ಎಂದು ಭರವಸೆ ನೀಡಿದ. ದೆವ್ವವು ಸನಿಹದಲ್ಲಿದ್ದ ಕಾಡಿನೊಳಗೆ ನುಸುಳಿ ಮರಳಿ ಬಂದಿತು. ಅದರ ಕೈಯಲ್ಲಿ ಒಂದು ಮಾವಿನಹಣ್ಣು ಇತ್ತು. ಅದನ್ನು ಬಡವನ ಕೈಗೆ ಕೊಟ್ಟಿತು. ”ಇದು ಬಹು ವಿಶೇಷವಾದ ಹಣ್ಣು. ಸಾವಿರ ವರ್ಷಗಳಿಗೊಮ್ಮೆ ಒಂದು ಹಣ್ಣು ಸಿಗುತ್ತದೆ. ಈ ಹಣ್ಣನ್ನು ತಿಂದ ಮಹಿಳೆಗೆ ಸಂತಾನವಾಗುತ್ತದೆ. ತೆಗೆದುಕೊಂಡು ಹೋಗಿ ನಿನ್ನ ಹೆಂಡತಿಗೆ ಕೊಡು. ಅವಳಿಗೊಂದು ಮಗು ಜನಿಸುತ್ತದೆ. ಆದರೆ ಮಗುವಿಗಾಗಿ ನಿನ್ನ ಬಳಿಗೆ ನಾನು ಬಂದಾಗ ಮಾತಿಗೆ ತಪ್ಪಬೇಡ. ಮಗುವನ್ನು ಕೊಡದಿದ್ದರೆ ನನ್ನ ಕೋಪಕ್ಕೆಗುರಿಯಾಗಬೇಕಾಗುತ್ತದೆ” ಎಂದು ಎಚ್ಚರಿಸಿತು.
ದೆವ್ವ ನೀಡಿದ ಸಂಪತ್ತಿನ ಮೂಟೆಯನ್ನು ಹೊತ್ತುಕೊಂಡು ಮಾವಿನ ಹಣ್ಣಿನೊಂದಿಗೆ ಬಡವ ಮನೆಗೆ ಬಂದ. ಹಣ್ಣು ತಿಂದು ಅವನ ಹೆಂಡತಿ ಗರ್ಭಿಣಿಯಾದಳು. ಅವನು ಹೊಸ ಮನೆ ಕಟ್ಟಿಸಿದ. ಕೃಷಿ ಭೂಮಿಯನ್ನು ಕೊಂಡುಕೊಂಡು ನಿಶ್ಚಿಂತೆಯಿಂದ ಕಾಲ ಕಳೆಯತೊಡಗಿದ. ನವಮಾಸಗಳು ತುಂಬಿ ಹೆಂಡತಿ ಗಂಡುಮಗುವನ್ನು ಹಡೆದಳು. ಮಗುವನ್ನು ಎತ್ತಿಕೊಂಡು ಬಡವ ಮುದ್ದಾಡುತ್ತಿರುವಾಗಲೇ ದೆವ್ವ ಮನೆಯೊಳಗೆ ಪ್ರವೇಶಿಸಿತು. ಆ ವರೆಗೂ ದೆವ್ವಕ್ಕೆ ಕೊಟ್ಟ ಮಾತು ಬಡವನಿಗೆ ನೆನಪಿರಲಿಲ್ಲ. ಆದರೆ ದೆವ್ವವು ಮಗುವನ್ನು ಎತ್ತಿಕೊಳ್ಳಲು ಕೈಚಾಚಿತು.
ಆಗ ಮಗುವಿನ ತಾಯಿ ಓಡಿಬಂದಳು. ದೆವ್ವಕ್ಕೆ ಕೈಮುಗಿದಳು. ”ಕರುಣಾಳುವೇ, ನಿನ್ನ ಉಪಕಾರದಿಂದ ಬಡತನದ ಬೇಗೆ ಕಳೆದುಕೊಂಡು ನಾವು ಸುಖವಾಗಿದ್ದೇವೆ. ಮಗುವನ್ನು ನಿನಗೊಪ್ಪಿಸುವುದು ನಮ್ಮ ಕರ್ತವ್ಯವೇ ಹೌದು. ಆದರೆ ಈಗ ತಾನೇ ಮಗು ಜನಿಸಿದೆ. ಅದಕ್ಕೆ ಹನಿ ಹಾಲು ಕೂಡ ಕುಡಿಸಿಲ್ಲ. ಒಂದು ವರ್ಷ ಮಗುವಿಗೆ ಹಾಲೂಡಿಸಲು ದಯೆ ತೋರಿ ಅವಕಾಶ ನೀಡು. ಮಗುವಿನ ಮುಂದಿನ ಹುಟ್ಟಿದ ಹಬ್ಬದ ದಿನ ಬಂದರೆ ಮಗುವನ್ನು ನಾನೇ ನಿನ್ನ ಕೈಯಲ್ಲಿಡುತ್ತೇನೆ” ಎಂದು ಪ್ರಾರ್ಥಿಸಿದಳು.
ದೆವ್ವಕ್ಕೆ ಹೆಂಗಸಿನ ಮೇಲೆ ಕರುಣೆ ಬಂತು. ”ಜಿಪುಣನಾಗಿ ದಾನ ಧರ್ಮ ಮರೆತು ದೆವ್ವದ ಜನ್ಮ ಬಂದಿದೆ. ಇನ್ನು ತಾಯಿಯೊಬ್ಬಳ ಮೇಲೆ ಕರುಣೆ ತೋರದ ತಪ್ಪಿಗೆ ಇನ್ನೊಂದು ಕಷ್ಟಕ್ಕೆ ಸಿಲುಕಲು ನನಗೂ ಇಷ್ಟವಿಲ್ಲ. ಮುಂದಿನ ವರ್ಷ ಬರುತ್ತೇನೆ, ಆಗ ಮಗುವನ್ನು ಒಪ್ಪಿಸಲು ತಪ್ಪಬಾರದು” ಎಂದು ಹೇಳಿ ದೆವ್ವವು ಹೊರಟುಹೋಯಿತು. ಮಾರನೆಯ ವರ್ಷ ಬಂದಾಗಲೂ ಅವಳು ಮಗುವನ್ನು ಒಪ್ಪಿಸಲಿಲ್ಲ. ”ಇನ್ನೊಂದು ವರ್ಷ ತಾಳು. ಮಗು ಈಗ ಹೆಜ್ಜೆಯಿಡಲು ಕಲಿಯುತ್ತಿದೆ. ಅದರ ನಡಿಗೆಯನ್ನು ಕಂಡು ಆನಂದಿಸಲು ಒಂದು ವರ್ಷ ಅವಕಾಶ ಕೊಡು” ಎಂದು ಬೇಡಿ ಅದನ್ನೊಪ್ಪಿಸಿದಳು.
ಹೀಗೆ ದೆವ್ವ ಪ್ರತೀ ವರ್ಷವೂ ಬರುತ್ತಿತ್ತು, ದಂಪತಿ ಏನೋ ಒಂದು ನೆವ ಹೇಳಿ ಹಿಂತಿರುಗಿ ಕಳುಹಿಸುತ್ತಿದ್ದರು. ಮಗನಿಗೆ ಹದಿನಾರು ವಯಸ್ಸಾಯಿತು. ಆ ಸಲವೂ ಅವರು ಒಂದು ವರ್ಷ ದಯೆ ತೋರುವಂತೆ ಕೇಳಿದಾಗ ದೆವ್ವವು, ”ಇದು ಕಡೆಯ ಅವಕಾಶ. ಮುಂದಿನ ವರ್ಷ ಬಂದಾಗ ಯಾವುದೇ ರಿಯಾಯಿತಿಯೂ ತೋರದೆ ನಿನ್ನ ಮಗನನ್ನು ಕೊಂದು ಹಾಕುತ್ತೇನೆ” ಎಂದು ಅಬ್ಬರಿಸಿತು. ವರ್ಷ ಸಮೀಪಿಸಿದಾಗ ಇದನ್ನು ನೆನೆದು ದಂಪತಿ ದುಃಖೀಸತೊಡಗಿದರು. ಅವರ ನೆರೆಮನೆಯಲ್ಲಿ ಜಾಣೆಯಾದ ಒಬ್ಬ ಸುಂದರ ಯುವತಿ ಇದ್ದಳು. ಅವಳು ದೆವ್ವದಿಂದ ಪಾರಾಗಲು ಒಂದು ಉಪಾಯ ಹೇಳಿಕೊಟ್ಟಳು.
ದೆವ್ವು ಬಂದ ಕೂಡಲೇ ಬಡವನು ಅದನ್ನು ಸ್ವಾಗತಿಸಿದ. ”ಈ ಸಲ ಮಗನನ್ನು ನಿನಗೆ ಒಪ್ಪಿಸಲು ಸಿದ್ಧನಿದ್ದೇನೆ. ಆದರೆ ಮಗನು ಮನೆಯಿಂದ ಹೊರಡುವ ಮುನ್ನ ಈ ಮೇಣದ ಬತ್ತಿಯು ಉರಿದು ಮುಗಿಯುವ ತನಕ ಇಲ್ಲಿಯೇ ಇರಲು ಅನುಮತಿ ಕೊಡಬಲ್ಲೆಯಾ? ಹಾಗೆಂದು ನನಗೆ ಮಾತು ಕೊಡಬೇಕು” ಎಂದು ಕೇಳಿಕೊಂಡ. ದೆವ್ವವು ಸಂತೋಷದಿಂದ, ”ಆಗಲಿ, ಈ ಮೇಣದ ಬತ್ತಿಯು ಉರಿದು ಮುಗಿಯುವ ವರೆಗೆ ನಿಮ್ಮ ಮನೆಯಲ್ಲಿ ಯಾರಿಗೂ ತೊಂದರೆ ಕೊಡುವುದಿಲ್ಲ” ಎಂದು ಮಾತು ಕೊಟ್ಟಿತು.
ಬಡವ ಮೇಣದ ಬತ್ತಿಯನ್ನು ತೆಗೆದು ಪೆಟ್ಟಿಗೆಯೊಳಗೆ ಇಟ್ಟ. ”ನೀನು ಕಾಯಬಹುದು. ನಾನು ಈ ಮೇಣದ ಬತ್ತಿಯನ್ನು ಎಂದಿಗೂ ಉರಿಸುವುದೇ ಇಲ್ಲ. ಅದು ವರೆಗೆ ನನಗೆ ನೀನು ತೊಂದರೆ ಕೊಡುವಂತಿಲ್ಲ” ಎಂದು ಹೇಳಿದ. ತಾನು ಮೋಸ ಹೋಗಿರುವುದು ದೆವ್ವಕ್ಕೆ ಗೊತ್ತಾಯಿತು. ಅಲ್ಲಿಂದ ಹೊರಟುಹೋಯಿತು. ಉಪಾಯ ಹೇಳಿಕೊಟ್ಟ ಯುವತಿಯನ್ನು ದಂಪತಿ ತಮ್ಮ ಮಗನಿಗೆ ಮದುವೆ ಮಾಡಿ ಸುಖವಾಗಿದ್ದರು.
-ಪ.ರಾಮಕೃಷ್ಣ ಶಾಸ್ತ್ರಿ