Advertisement

LS Polls: ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ : ಕೆ.ಜಯಪ್ರಕಾಶ್‌ ಹೆಗ್ಡೆ

12:37 PM Apr 13, 2024 | Team Udayavani |

ಕುಂದಾಪುರ: ಈ ಹಿಂದೆ ಬಿಜೆಪಿಯ ಸಂಸದರು ನಾಯಕರ ಹೆಸರನ್ನು ಹೇಳಿ ಎರಡು ಬಾರಿ ಸಂಸದರಾಗಿ ಆಯ್ಕೆಯಾದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಜಿಲ್ಲೆಯಲ್ಲಿ ನಡೆಯದಿರುವುದು ವಿಪರ್ಯಾಸ. ನಾನು ನನ್ನ ಮುಖವನ್ನೇ ಇಟ್ಟುಕೊಂಡು, ನಾನು ಮಾಡಿರುವ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುತ್ತಿದ್ದೇನೆ. ಬೇರೆ ಯಾವುದೇ ನಾಯಕರ ಹೆಸರು ಹೇಳಿಕೊಂಡು ಮತ ಕೇಳುವ ಅನಿವಾರ್ಯತೆ ನನಗಿಲ್ಲ ಎಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದರು.

Advertisement

ಅವರು ಕುಂದಾಪುರ ವಿಧಾನ ಸಭಾ ಕ್ಷೇತ್ರದ ಬೀಜಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನಡೆ ದ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿಯವರು ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳಬಹುದು. ದಾಖಲೆ ನೋಡಿದರೆ ಯಾರು ಕೆಲಸ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಮಾಡಿದ ಕೆಲಸವನ್ನು ಜನರ ಮುಂದಿಟ್ಟುಕೊಂಡು ಮತ ಕೇಳುವುದು ನ್ಯಾಯೋಚಿತ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಜನರನ್ನು ತಲುಪಿದೆ. ಕಾಂಗ್ರೆಸ್‌ ಹಿಂದೆ ಜಾರಿಗೆ ತಂದಿರುವ ಜನೋಪಯೋಗಿ ಯೋಜನೆಗಳು, ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಮುಂದೆ ತರಲಿರುವ ಯೋಜನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಉಡುಪಿಯಲ್ಲಿ ಈ ಬಾರಿ ಅಭಿವೃದ್ಧಿಗಾಗಿ ಬದಲಾವಣೆ ಅನಿ ವಾರ್ಯವಿದೆ. ಹಿಂದೆ ಕೆಲಸ ಮಾಡಿದ್ದಕ್ಕೆ ನಿಮ್ಮ ಮತ ಚಲಾಯಿಸಿ ಎಂದರು.

ಹಿಂದಿನ ಕೆಲಸ ಮತಗಳಾಗಿ ಪರಿವರ್ತನೆಯಾಗುವ ವಿಶ್ವಾಸ ಉಡುಪಿಯನ್ನು ಜಿಲ್ಲೆಯಾಗಿ ಪರಿ ವರ್ತಿಸುವಲ್ಲಿ ಶ್ರಮ ವಹಿಸಿ ಇಲ್ಲಿನ ಜನರಿಗೆ ಅನುಕೂಲವಾಗುವ ಹಾಗೆ ಕೆಲಸ ಮಾಡಿದ್ದೇನೆ. ರಾ. ಹೆದ್ದಾರಿಯ ಸಮಸ್ಯೆಗಳ ಇತ್ಯರ್ಥ, ರೈಲ್ವೇ ಯೋಜನೆಗಳು, ಸಮುದ್ರದ ತಡೆಗೋಡೆ ಸೇರಿ ಅನೇಕ ಯೋಜನೆಗಳನ್ನು ಜಿಲ್ಲೆಗಳಿಗೆ ತಂದಿದ್ದೇನೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಇಷ್ಟರೊಳಗೆ ಮೆಡಿಕಲ್‌ ಕಾಲೇಜು ಆಗಬೇಕಿತ್ತು. ಮುಂದಿನ ದಿನಗಳಲ್ಲಿ ಸರಕಾರಿ ಮೆಡಿಕಲ್‌ ಕಾಲೇಜು, ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ನಿಟ್ಟಿನಲ್ಲಿ ರಾಜ್ಯ ಸರಕಾರದ ಮೂಲಕ ಪ್ರಯತ್ನಿಸಲಾಗುವುದು. ಇದರೊಂದಿಗೆ ಶಿಕ್ಷಣ, ಉದ್ಯೋಗಕ್ಕೂ ಆದ್ಯತೆ ನೀಡಲಾಗುವುದು ಎಂದರು.

Advertisement

ಭಿನ್ನಾಭಿಪ್ರಾಯ ಮೂಡಿಸುವಲ್ಲಿ ಶ್ರೀನಿವಾಸ ಪೂಜಾರಿ ನಿಸ್ಸೀಮರು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಉಡುಪಿಯಲ್ಲಿ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಜಯ ಪ್ರಕಾಶ್‌ ಹೆಗ್ಡೆ ಅವರನ್ನು ಗೆಲ್ಲಿಸಬೇಕೆಂಬ ಭಾವನೆಯಲ್ಲಿ ಜನರಿದ್ದಾರೆ. ನಾಯಕ-ನಾಯಕರ ನಡುವೆ ಚಾಡಿ ಮಾತು ಹೇಳಿಸಿ, ಭಿನ್ನಾಭಿಪ್ರಾಯ ಮೂಡಿಸುವಲ್ಲಿ ಶ್ರೀನಿವಾಸ ಪೂಜಾರಿ ನಿಸ್ಸೀಮರು ಎಂದು ಆರೋಪಿಸಿದ ಅವರು ಜನರೇ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಈ ಸಂದರ್ಭ ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಎಸ್‌. ರಾಜು ಪೂಜಾರಿ, ಪಕ್ಷದ ಮುಖಂಡರಾದ ದಿನೇಶ್‌ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ್‌ ಶೆಟ್ಟಿ, ಪ್ರಕಾಶ್ಚಂದ್ರ ಶೆಟ್ಟಿ ಕಂಬದಕೋಣೆ, ಮದನ್‌ ಕುಮಾರ್‌, ಬಿ. ಹೆರಿಯಣ್ಣ ಚಾತ್ರಬೆಟ್ಟು, ಬಿ. ಶೇಖರ ಚಾತ್ರಬೆಟ್ಟು, ಮುನಾಫ್‌ ಕೋಡಿ ಉಪಸ್ಥಿತರಿದ್ದರು.

ಅಶೋಕ್‌ ಪೂಜಾರಿ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.

ಮೀನುಗಾರ ಸಮಸ್ಯೆಗಳಿಗೆ ಸ್ಪಂದನೆ

ಯೋಚನೆ ಮಾಡಿದಾಗ ಯೋಜನೆಗಳು ಮೂಡುತ್ತವೆ. ನಾನು ಮೀನುಗಾರಿಕೆ ಇಲಾಖೆಯ ಸಚಿವನಾಗಿದ್ದಾಗ ಮೀನುಗಾರರಿಗೆ ಅನುಕೂಲವಾಗುವ ಅನೇಕ ಯೋಜನೆಗಳನ್ನು ತರುವಲ್ಲಿ ಶ್ರಮಿಸಿದ್ದೇನೆ. ಸಚಿವನಾಗಿದ್ದಾಗಲೂ ಸಚಿವನಾಗದೇ ಇದ್ದಾಗಲೂ ಮೀನುಗಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆ ಸಮುದಾಯದ ಸಮಸ್ಯೆಗಳಿಗೆ ಧ್ವನಿಯಾಗುವ ಪ್ರಯತ್ನ ಮಾಡಿದ್ದೇನೆ. ನಾನು ಜಿಲ್ಲೆಗೆ ಕೊಟ್ಟ ಕೊಡುಗೆಗಳನ್ನು ಜನ ನೆನಪಿನಲ್ಲಿಟ್ಟುಕೊಂಡಿದ್ದಾರೆ. ಅದು ಮತಗಳಾಗಿ ಪರಿವರ್ತನೆಯಾಗಲಿದೆ. ಅದುವೆ ನನಗೆ ಈ ಬಾರಿಯ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸ ಮೂಡಿಸಿದೆ ಎಂದು ಜಯಪ್ರಕಾಶ್‌ ಹೆಗ್ಡೆ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next