Advertisement

ಮಂಗಳೂರಿನ ಅಭಿವೃದ್ಧಿಯ ಓಟಕ್ಕೆ ಕಾಂಗ್ರೆಸ್‌, ಬಿಜೆಪಿ ತಡೆ: ಎಚ್‌ಡಿಕೆ

12:21 PM Apr 18, 2017 | Team Udayavani |

ಮಂಗಳೂರು: ಬೆಂಗಳೂರಿನ ಅನಂತರ ಮಂಗಳೂರು ನಗರ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವ ಧಾವಂತದಲ್ಲಿದೆ. ಆದರೆ ಇಲ್ಲಿರುವ ಕಾಂಗ್ರೆಸ್‌ ಹಾಗೂ ಬಿಜೆಪಿ ಅಭಿವೃದ್ಧಿಯ ಓಟಕ್ಕೆ ತೊಡರುಗಾಲು ಹಾಕುತ್ತಿವೆ. ಕೋಮು ಭಾವನೆ ಕೆರಳಿಸುವ ಮೂಲಕ ಇಲ್ಲಿ ದ್ವೇಷದ ರಾಜಕೀಯ ನಡೆಸುತ್ತಿವೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ನಗರದ ಹೊಟೇಲೊಂದರಲ್ಲಿ ಸೋಮವಾರ ಆಯೋಜಿಸಲಾದ ಜೆಡಿಎಸ್‌ನ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನತಾದಳ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಭಯಮುಕ್ತ ಸಮಾಜ ನಿರ್ಮಾಣ ಮಾಡಲಾಗುವುದು. ಈ
ಮೂಲಕ ಜಿಲ್ಲೆಯಲ್ಲಿ ಹೊಸ ಪರಿವರ್ತನೆ ಸೃಷ್ಟಿಸಲಾಗುವುದು. ಇದಕ್ಕಾಗಿ ಯುವ ಸಮುದಾಯ ಜತೆಯಾಗಬೇಕು ಎಂದು ಕರೆ ನೀಡಿದರು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನಿಷ್ಠ 2-3 ವಿಧಾನಸಭಾ ಕ್ಷೇತ್ರ ಗೆಲ್ಲಲು ಜೆಡಿಎಸ್‌ ಕಾರ್ಯಕರ್ತರು ಶ್ರಮಿಸಬೇಕು. ಈ ಭಾಗದಲ್ಲಿ ಜೆಡಿಎಸ್‌ ಬಗ್ಗೆ ಯುವ ಸಮುದಾಯ ಹೆಚ್ಚಿನ ಆಸಕ್ತಿ ವಹಿಸಿರುವುದು ಇದರ ಮುನ್ಸೂಚನೆ ಎಂದರು. 

ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಿ.ಎಂ.ಫಾರೂಕ್‌ ಅವರನ್ನು ಸಮ್ಮಾನಿಸಲಾಯಿತು. ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಅಮರನಾಥ ಶೆಟ್ಟಿ, ಮೂಡಿಗೆರೆ ಶಾಸಕ ಬಿ.ಬಿ.ನಿಂಗಯ್ಯ, ಕೋರ್‌ ಕಮಿಟಿಯ ಹೈದರ್‌ ಪರ್ತಿಪಾಡಿ, ಅಲ್ಪಸಂಖ್ಯಾಕ
ರಾಜ್ಯ ಉಪಾಧ್ಯಕ್ಷ ಎಂ.ಕೆ. ಖಾದರ್‌, ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ, ಯುವ ಜೆಡಿಎಸ್‌ ಜಿಲ್ಲಾಧ್ಯಕ್ಷ ಅಕ್ಷಿತ್‌ ಸುವರ್ಣ, ಕಾರ್ಪೋರೇಟರ್‌ಗಳಾದ ಅಜೀಜ್‌ ಕುದ್ರೋಳಿ, ರಮೀಜಾ ಬಾನು ಮೊದಲಾದವರು ಉಪಸ್ಥಿತರಿದ್ದರು. 

ಪಕ್ಷದ ಜಿಲ್ಲಾಧ್ಯಕ್ಷ ವಿಟ್ಲ ಮಹಮ್ಮದ್‌ ಕುಂಞಿ ಸ್ವಾಗತಿಸಿದರು. ರಾಜ್ಯ ಕಾರ್ಯದರ್ಶಿ ಎಂ.ಬಿ. ಸದಾಶಿವ ಕಾರ್ಯಕ್ರಮ ನಿರೂಪಿಸಿದರು.

25 ಕೋಟಿ ಉದ್ಯೋಗಕ್ಕೆ ಕುತ್ತು !
ಮೋದಿ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ವರ್ಷಕ್ಕೆ 2.50 ಕೋಟಿ ಜನರಿಗೆ ಉದ್ಯೋಗ ನೀಡಲಾಗುವುದು ಹಾಗೂ 2025ರ ವೇಳೆಗೆ 25 ಕೋಟಿ ಉದ್ಯೋಗ ಸೃಷ್ಟಿಯಾಗುತ್ತದೆ ಎಂದಿದ್ದರು. ಆದರೆ ಹಿರಿಯ ತಜ್ಞರೊಬ್ಬರು ಹೇಳುವ ಪ್ರಕಾರ ಈಗ ಇರುವ 25 ಕೋಟಿ ಜನರ ಉದ್ಯೋಗಕ್ಕೆ ಕುತ್ತು ಬಂದಿದೆಯಂತೆ. ಮೋದಿಯವರು ಹೊರದೇಶಕ್ಕೆ ಹೋಗಿ ಅಲ್ಲಿ ಭಾಷಣ ಮಾಡುತ್ತ ಎಷ್ಟು ಮಾನವ ಸಂಪದ ಬೇಕು ಅಷ್ಟನ್ನು ನಾವು ಕೊಡುತ್ತೇನೆ ಎನ್ನುತ್ತಾರೆ. ಆದರೆ ಎಷ್ಟು ಜನರನ್ನು ಹೊರದೇಶಕ್ಕೆ ಇಲ್ಲಿಯವರೆಗೆ ಕಳುಹಿಸಿದ್ದಾರೆ ಎಂಬುದರ ಲೆಕ್ಕ ಕೊಡಬೇಕು ಎಂದು ಕುಮಾರಸ್ವಾಮಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next