ಗೌರಿಬಿದನೂರು: ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಆರು ದಶಕ ದೇಶದಲ್ಲಿ ಆಡಳಿತ ನಡೆಸಿದೆ. ಆದರೆ ಅಭಿವೃದ್ಧಿ ಮಾತ್ರ ಶೂನ್ಯ, ಪ್ರಧಾನಿ ನರೇಂದ್ರ ಮೋದಿ ಅವರು 5 ವರ್ಷಗಳ ಆಡಳಿತದಲ್ಲಿ ದೇಶವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಿದೆ ಎಂದು ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿಶೆಟ್ಟಿ ಹೇಳಿದರು.
ನಗರದ ಶ್ರೀ ರಾಮಲಿಂಗೇಶ್ವರ ದೇವಾಲಯದ ಆವರಣದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಬಿಜೆಪಿ ಮಹಿಳಾ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ದೇಶದ ಕಟ್ಟಕಡೆಯ ವ್ಯಕ್ತಿಗೂ ಸಹ ಸಾಮಾಜಿಕ ನ್ಯಾಯವನ್ನು ಮೋದಿ ಸರ್ಕಾರ ಕೊಡಲಿದೆ. ಬಿಜೆಪಿ ಮಹಿಳೆಯರನ್ನು ಗೌರವಿಸುವ ಪಕ್ಷವಾಗಿದ್ದು,ಮಹತ್ವದ ರಕ್ಷಣಾ ಇಲಾಖೆಯ ಹೊಣೆಯನ್ನು ಮಹಿಳೆಗೆ ಕೊಟ್ಟಿರುವುದೇ ಸಾಕ್ಷಿಯಾಗಿದೆ ಎಂದರು.
ವೋಟ್ ಬ್ಯಾಂಕ್ ರಾಜಕಾರಣ: ಬಿಜೆಪಿ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿಲ್ಲ, ಜನರ ಮಧ್ಯದಲ್ಲಿ ಬೆರೆತು ಬೆಳೆದು ಬಂದಿರುವ ಪಕ್ಷವಾಗಿದ್ದು, ತನ್ನದೇ ಆದ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಬಂದಿದೆ ಎಂದು ಹೇಳಿದರು.
ಕಣ್ಣೀರು ಒರೆಸುವ ಸಿಎಂ ಬೇಕು: ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಕಣ್ಣೀರು ಸುರಿಸಿಕೊಂಡು ಜನರನ್ನು ಮರಳು ಮಾಡುತ್ತಿದ್ದಾರೆ. ನಮಗೆ ಕಣ್ಣೀರು ಸುರಿಸುವ ಸಿಎಂ ಬೇಡ, ಕಣ್ಣೀರು ಒರೆಸುವ ಸಿಎಂ ಬೇಕು ಎಂದರು.
ಎತ್ತಿನಹೊಳೆ ಭಾಷಣಕ್ಕಷ್ಟೆ: ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಕ್ಷೇತ್ರ ಇದಾಗಿದ್ದು ಇಂತಹ ಪುಣ್ಯಭೂಮಿಯಲ್ಲಿ ನಾವಿದ್ದೇವೆ ಎಂದು ಹೇಳಿದರು. ಸಂಸದ ವೀರಪ್ಪಮೊಯ್ಲಿಯವರು ಎರಡು ಲೋಕಸಭಾ ಚುನಾವಣೆಯಲ್ಲೂ ಸಹ ಎತ್ತಿನಹೊಳೆ ಯೋಜನೆಯನ್ನು ಮುಂದಿಟ್ಟುಕೊಂಡು ಗೆಲುವು ಸಾಧಿಸಿದರು. ಆದರೆ ಕ್ಷೇತ್ರದ ಅಭಿವೃದ್ಧಿಯೂ ಇಲ್ಲ, ಎತ್ತಿನಹೊಳೆ ನೀರು ಸಹ ಹರಿಯಲಿಲ್ಲ ಎಂದು ಲೇವಡಿ ಮಾಡಿದರು.
ಹಿರಿಯೂರು ಶಾಸಕಿ ಪೂರ್ಣಿಮಾ ಮಾತನಾಡಿದರು. ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಎನ್.ಎಂ.ರವಿನಾರಾಯಣರೆಡ್ಡಿ, ಬಿಜೆಪಿ ತಾಲೂಕು ಅಧ್ಯಕ್ಷ ವೇಮಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರ್ಮಾಲಾ, ಮುಖಂಡರಾದ ಜಯಲಕ್ಷ್ಮಮ್ಮ, ಮಂಜುಳಾ ಸುರೇಶ್, ಆರ್.ಮುನಿಲಕ್ಷ್ಮಮ್ಮ, ಶೋಭಾ, ಚೈತ್ರಾ, ಗಂಗಲಕ್ಷ್ಮಮ್ಮ, ಸವಿತಾ, ಮೋಹನ್, ನಾರಾಯಣರೆಡ್ಡಿ, ಜಯಣ್ಣ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.