Advertisement

ಕುಂದಗೋಳದ ಅಭಿವೃದ್ಧಿ ಕಾಂಗ್ರೆಸ್‌ನಿಂದಷ್ಟೇ ಸಾಧ್ಯ

11:34 AM May 13, 2019 | pallavi |

ಹುಬ್ಬಳ್ಳಿ: ಶಾಶ್ವತ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಸಾಧ್ಯ. ಕ್ಷೇತ್ರದ ಜನತೆ ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರನ್ನು ಗೆಲ್ಲಿಸಲು ನಿಶ್ಚಯಿಸಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷಎಚ್.ಕೆ. ಪಾಟೀಲ ಹೇಳಿದರು.

Advertisement

ಪಶುಪತಿಹಾಳದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷಮಾಡಿದ ರಕ್ತ ರಹಿತ ಮೌನಕ್ರಾಂತಿಯನ್ನು ಶಿವಳ್ಳಿ ತಮ್ಮ ಕ್ಷೇತ್ರದಲ್ಲಿ ಮಾಡಿದ್ದಾರೆ. ಬಡವರ ಹಾಗೂ ಸಾಮಾನ್ಯ ಜನರ ಶಾಸಕರಾಗಿ ಆಡಳಿತ ಮಾಡಿದ್ದಾರೆ. ಕ್ಷೇತ್ರದ ಜನತೆಯ ಸಣ್ಣ ಸಮಸ್ಯೆಗೂ ಸ್ಪಂದಿಸಿದ್ದಾರೆ. ಕ್ಷೇತ್ರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರಿಂದ ಜನರು ಅವರ ಋಣ ತೀರಿಸಲು ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲಿಸುವ ಪಣ ತೊಟ್ಟಿದ್ದಾರೆ ಎಂದರು.

ನ್ಯಾಯ ಯೋಜನೆ: ರಾಹುಲ್ ಗಾಂಧಿಯವರು ನ್ಯಾಯ ಯೋಜನೆ ಮೂಲಕ ಬಡತನಕ್ಕಿಂತ ಕೆಳಗಿನ ರೇಖೆಯೊಳಗಿರುವ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಮುಂದಾಗಿದ್ದಾರೆ. ಇಂತಹ ಯೋಜನೆಯನ್ನು ಬಿಜೆಪಿಯರು ಟೀಕೆ ಮಾಡುವ ಮೂಲಕ ಬಡ ಕುಟುಂಬಗಳನ್ನು ಅಗೌರವಿಸುತ್ತಿದ್ದಾರೆ. ಸಿದ್ದರಾಮಯ್ಯ ಸರಕಾರ 8 ಸಾವಿರ ಕೋಟಿ ರೂ. ಹಾಗೂ ಇಂದಿನ ಮೈತ್ರಿ ಸರಕಾರ 40 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದೆ. ಇಂತಹ ಒಂದಾದರೂ ಯೋಜನೆ ಬಿಜೆಪಿಯವರು ತಮ್ಮ ಅವಧಿಯಲ್ಲಿ ಜನಸಾಮಾನ್ಯರಿಗೆ ನೀಡಿದ್ದಾರೆಯೇ ಎಂಬುದವುದರ ಕುರಿತು ಜನರು ಯೋಚಿಸಬೇಕು ಎಂದು ಹೇಳಿದರು. ಬಸವರಾಜ ಮಳೀಮಠ, ಎ.ಬಿ. ಗಣೇಶ ಇನ್ನಿತರರಿದ್ದರು.

ಮುಖಂಡರೊಂದಿಗೆ ಸಭೆ
ಹುಬ್ಬಳ್ಳಿ:
ಕುಂದಗೋಳ ಚುನಾವಣೆಗೆ ಸಂಬಂಧಿಸಿ ಅಲ್ಪಸಂಖ್ಯಾತ ಹಾಗೂ ಇನ್ನಿತರೆ ಸಮುದಾಯದ ಮುಖಂಡರು ಹಾಗೂ ಕ್ಷೇತ್ರದ ಕಾಂಗ್ರೆಸ್‌-ಜೆಡಿಎಸ್‌ ಮುಖಂಡರೊಂದಿಗೆ ಸಚಿವ ಜಮೀರಅಹ್ಮದ್‌ ಖಾನ್‌ ಮಾತುಕತೆ ನಡೆಸಿದರು. ಗೋಕುಲ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಕುಂದಗೋಳ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ಹಜರತ್‌ಅಲಿ ಜೋಡಮನಿ, ನದಾಫ, ಕುತಬುದ್ದೀನ ಬೆಳಗಲಿ ಅವರನ್ನು ಕರೆಯಿಸಿ ಮಾತುಕತೆ ನಡೆಸಿದರು. ಸಮಾಜದಲ್ಲಿನ ಮತಗಳು ಹಂಚಿಕೆಯಾಗಿ ಹೋದರೆ ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗುತ್ತದೆ. ಸಮಾಜದ ಯಾವುದೇ ಅಭ್ಯರ್ಥಿ ಸ್ಪರ್ಧಿಸಿದರು ಪರವಾಗಿಲ್ಲ. ಆದರೆ ಮತಗಳು ಹರಿದು ಹಂಚಿಕೆ ಆಗದಂತೆ ನೋಡಿಕೊಳ್ಳಬೇಕು. ಸಮಾಜದ ಮತದಾರರಿಗೆ ಮನವರಿಕೆ ಮಾಡಿ, ಕಾಂಗ್ರೆಸ್‌ ಅಭ್ಯರ್ಥಿಗೆ ಮತಗಳನ್ನು ಹಾಕಿಸಿ. ಬಹುಮತದಿಂದ ಆರಿಸಿ ತನ್ನಿ ಎಂದು ಸೂಚಿಸಿದರು ಎನ್ನಲಾಗಿದೆ.

ಬಿಜೆಪಿಯಿಂದ ಗೊಂದಲ ಸೃಷ್ಟಿ
ಹುಬ್ಬಳ್ಳಿ: ಮೈತ್ರಿ ಅಭ್ಯರ್ಥಿ ಕುಸುಮಾವತಿ ಗೆಲ್ಲುವುದು ಖಚಿತ. ಶಾಸಕರಾಗಿ ಉತ್ತಮ ಆಡಳಿತದ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಹೇಳಿದರು.

Advertisement

ಪಶುಪತಿಹಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಮೈತ್ರಿ ಅಭ್ಯರ್ಥಿ ವಿರುದ್ಧ ಮಾತನಾಡುವುದಕ್ಕೆ ಯಾವುದೇ ಅಂಶಗಳಿಲ್ಲ. ಹೀಗಾಗಿ ಕುಸುಮಾವತಿ ಗೆದ್ದರೆ, ಕುಂದಗೋಳದಲ್ಲಿ ಐವರು ಶಾಸಕರಾಗುತ್ತಾರೆ ಎನ್ನುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕುಸುಮಾವತಿ ಶಾಸಕರಾದರೆ ಇಡೀ ಕ್ಷೇತ್ರದ ಬಡವರು ಶಾಸಕರಾಗುತ್ತಾರೆ. ಕ್ಷೇತ್ರದಲ್ಲಿ ಯಾವುದೇ ದುರಾಡಳಿತಕ್ಕೆ ಆಸ್ಪದ ಕೊಡುವುದಿಲ್ಲ. ಈ ಬಗ್ಗೆ ಜನರು ಆತಂಕಪಡುವ ಪ್ರಶ್ನೆಯಿಲ್ಲ ಎಂದು ಸ್ಪಷ್ಟಪಡಿಸಿದರು.

ಸಿ.ಎಸ್‌. ಶಿವಳ್ಳಿ ಅವನ್ನು ಸಚಿವರನ್ನಾಗಿ ಮಾಡದಿದ್ದರೂ ಪಕ್ಷಬಿಡುತ್ತಿರಲಿಲ್ಲ. ಜನರಲ್ಲಿ ಗೊಂದಲ ಮೂಡಿಸುವುದೇ ಬಿಜೆಪಿ ನಾಯಕರ ಕೆಲಸ. ಮೈತ್ರಿ ಸರಕಾರದಲ್ಲಿ ಒಬ್ಬ ಸಚಿವರನ್ನು ಕೈಬಿಟ್ಟು ಅವರಿಗೆ ಸಚಿವ ಸ್ಥಾನ ನೀಡಲಾಯಿತು ಎಂದರು.

ಬಿಎಸ್‌ವೈ ಸಿಎಂ ಆಗುವ ಹಗಲುಕನಸು: ಜಮೀರ

ಹುಬ್ಬಳ್ಳಿ: ಯಡಿಯೂರಪ್ಪ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆ. ಅದರ ಕನವರಿಕೆಯಲ್ಲಿ ಮಧ್ಯರಾತ್ರಿ ಎದ್ದು ಕೂರುತ್ತಿದ್ದಾರಂತೆ ಎಂದು ಸಚಿವರ ಜಮೀರಅಹ್ಮದ ಖಾನ್‌ ಹೇಳಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಬಿಜೆಪಿಯಲ್ಲಿನ ಎಲ್ಲ 104 ಶಾಸಕರು ಮೂಲತಃ ಬಿಜೆಪಿಯವರಲ್ಲ. ಅವರಲ್ಲಿನ 60-70 ಜನರು ಕಾಂಗ್ರೆಸ್‌, ಜೆಡಿಎಸ್‌ನಿಂದ ಬಂದವರು. ಅಸಮಾಧಾನಗೊಂಡವರು ನಮ್ಮ ಸಂಪರ್ಕದಲ್ಲಿದ್ದಾರೆ. ಆದರೆ ಅವರನ್ನು ಸೇರ್ಪಡೆ ಮಾಡಿಕೊಳ್ಳುವುದು ನಮಗೆ ಬೇಕಿಲ್ಲ ಎಂದರು. ಕರ್ನಾಟಕದಲ್ಲಿ ಬಿಜೆಪಿಯವರಿಗೆ ನೆಲೆಯಿಲ್ಲ. ಎಚ್.ಡಿ. ಕುಮಾರಸ್ವಾಮಿ 2008ರಲ್ಲಿ ಬಿಜೆಪಿಗೆ ಅಧಿಕಾರ ಬಿಟ್ಟು ಕೊಡಲಿಲ್ಲ. ಅವತ್ತು ಬಿಜೆಪಿಗೆ ಅಧಿಕಾರ ನೀಡಿದ್ದರೆ ಇಷ್ಟೊತ್ತಿಗೆ ರಾಜ್ಯದಲ್ಲಿ ಬಿಜೆಪಿ ನಿರ್ನಾಮವಾಗಿರುತ್ತಿತ್ತು ಎಂದು ಹೇಳಿದರು.ಶಾಸಕ ರೇಣುಕಾಚಾರ್ಯ ಯಾವಾಗಲೂ ಜೋಕರ್‌. ಅವರಿಗೆ ಕುಂದಗೋಳದಲ್ಲಿ ವೈಯಕ್ತಿಕವಾಗಿ ಯಾವ ಶಕ್ತಿಯಿದೆ. ಅವರಿಗೆ ಪಕ್ಷದ ಅಭ್ಯರ್ಥಿ ಪರ 500 ಮತ ಹಾಕಿಸುವ ಶಕ್ತಿ ಇದೆಯಾ? ಎಂದು ಪ್ರಶ್ನಿಸಿದರು.
ಕುಂದಗೋಳ ಅಭಿವೃದ್ಧಿಗೆ ಪ್ರಾಮಾಣಿಕ ಯತ್ನ
ಹುಬ್ಬಳ್ಳಿ:
ಕುಂದಗೋಳ ಕ್ಷೇತ್ರದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಮೈತ್ರಿ ಸರಕಾರದಿಂದ ಪ್ರಾಮಾಣಿಕವಾಗಿ ಮಾಡಲಾಗುವುದು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

ವರೂರ, ಛಬ್ಬಿ, ಅರಳಿಕಟ್ಟಿ, ಇನಾಂಕೊಪ್ಪ, ದ್ಯಾವನೂರ, ಬಿಳೆಬಾಳ ಸೇರಿದಂತೆ ವಿವಿಧೆಡೆ ಮೈತಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರ ಮತಯಾಚನೆ ಮಾಡಿದ ಅವರು, ಕುಂದಗೋಳ ಕ್ಷೇತ್ರದಲ್ಲಿ ಕುಡಿಯುವ ನೀರಿನ ಬಹುಮುಖ್ಯ ಸಮಸ್ಯೆಯಿದೆ. ಇದನ್ನು ಮೈತ್ರಿ ಸರಕಾರವು ಮೊದಲ ಆದ್ಯತೆ ಮೇರೆಗೆ ಬಗೆಹರಿಸುವ ಕಾರ್ಯ ಮಾಡಲಿದೆ. ಈಗಾಗಲೇ ದಿ| ಸಿ.ಎಸ್‌. ಶಿವಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ಇವರಿಗೆ ಕ್ಷೇತ್ರದ ಜನರು ಐದು ವರ್ಷಕ್ಕಾಗಿ ಆಶೀರ್ವಾದ ಮಾಡಿದ್ದರು. ಆದರೆ ದುರದೃಷ್ಟವಶಾತ್‌ ಅವರು ನಮ್ಮನ್ನೆಲ್ಲ ಅಗಲಿದರು. ಈಗ ಅವರ ಪತ್ನಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಅವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಗುರುನಾಥ ಚಲವಾದಿ, ಶಿವಾನಂದ ಮುಡೆನ್ನವರ, ಶಂಕರಪ್ಪ ಚಲವಾದಿ, ಶರೀಫ ಕಾಳೆ, ಚನ್ನಬಸಪ್ಪ ಕಾಳೆ, ಪರಮೇಶ ಕಾಳೆ, ಮಲ್ಲಿಕಾರ್ಜುನ ಯಾತಗೇರಿ, ರವಿ ಬಳ್ಳಾರಿ, ಕುಮಾರ ಕುಂದನಹಳ್ಳಿ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next