Advertisement

803 ಜನರ ಸಂಕಲ್ಪ , 290 ಯುವಕರು ವರದಕ್ಷಿಣೆ ನಕಾರ

07:45 AM Jan 12, 2018 | Team Udayavani |

ಉಡುಪಿ: ಪೇಜಾವರ ಶ್ರೀಗಳ ಪರ್ಯಾಯ ಅವಧಿಯಲ್ಲಿ ಒಟ್ಟು 803 ಜನರು ದುಶ್ಚಟ ಮುಕ್ತರಾಗುವ ಸಂಕಲ್ಪ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಿ ಅದರಲ್ಲಿ ವಿವಿಧ ದುಶ್ಚಟಗಳಿಂದ ಮುಕ್ತರಾಗಲು ಸಂಕಲ್ಪ ಪತ್ರವನ್ನು ಹಾಕಲು ತಿಳಿಸಿದ್ದರು. ಸಂಕಲ್ಪ ಪತ್ರವನ್ನು ಮಠದಿಂದ ಪಡೆದು ಅದರಲ್ಲಿ ತಮಗಿರುವ ದುಶ್ಚಟಗಳನ್ನು ಗುರುತು ಮಾಡಿ ಕೊನೆಯಲ್ಲಿ ಸಹಿ ಮಾಡಬೇಕು. ತಮ್ಮ ಹೆಸರು, ವಿಳಾಸ (ಇಚ್ಛೆಯಿದ್ದಲ್ಲಿ ಮಾತ್ರ)ಬರೆಯಬೇಕೆಂದಿತ್ತು. 

Advertisement

ಎರಡು ವರ್ಷಗಳಲ್ಲಿ ಹುಂಡಿಗೆ 803 ಮಂದಿ ತಾವು ದುಶ್ಚಟ ಮುಕ್ತರಾಗುವ ಸಂಕಲ್ಪ$ಮಾಡಿ ಪ್ರತಿಜ್ಞೆ ಮಾಡಿದ್ದಾರೆ. ಅದರ ಹೊರತಾಗಿ ತಮಿಳುನಾಡಿನ ಕಾಲೇಜೊಂದರ 140 ಮಂದಿ ವಿದ್ಯಾರ್ಥಿಗಳೂ ಸೇರಿದಂತೆ 290 ತರುಣರು ತಾವು ವರದಕ್ಷಿಣೆ ಸ್ವೀಕರಿ ಸುವುದಿಲ್ಲ ಎಂದು ಸಂಕಲ್ಪಿಸಿದ್ದಾರೆ. ಇನ್ನು ಕೆಲವು (30ಕ್ಕೂ ಅಧಿಕ) ಪುಟಾಣಿ ಮಕ್ಕಳು ತಮ್ಮ ಹೆತ್ತವರಿಂದ ಈ ಹುಂಡಿಯ ಬಗ್ಗೆ ಮಾಹಿತಿ ಪಡೆದು ಸಂಕಲ್ಪಿಸಿದ್ದಾರೆ.  ತಮಗೆ ಹೋಮ್‌ ವರ್ಕ್‌ ಮಾಡಲು ಉದಾಸೀನ, ವಿಪರೀತ ಟಿವಿ ನೋಡುವ, ಬೆಳಗ್ಗೆ ತಡವಾಗಿ ಏಳುವ, ಅಪ್ಪಅಮ್ಮನಿಗೆ ಬೈಯುವ, ಪಿಝಾ ತಿನ್ನುವ ಮೊದಲಾದ ಹವ್ಯಾಸಗಳನ್ನು ಹೊಂದಿರುವುದಾಗಿಯೂ ಅವುಗಳಿಂದ ಹೊರ ಬರುವ ಸಂಕಲ್ಪ ಮಾಡಿರುವುದಾಗಿಯೂ ಈ ಮಕ್ಕಳು ಬರೆದುಕೊಂಡಿದ್ದಾರೆ.

ಇನ್ನೂ ತಮಾಷೆಯೆಂದರೆ, ಅನೇಕ ಮಂದಿ ತಮ್ಮ ಯಜಮಾನ ರಿಗೆ ಅಥವಾ ತಮ್ಮ ಮನೆಯಲ್ಲಿ ಕೆಲವರು ದುಶ್ಚಟಗಳನ್ನು ಹೊಂದಿರುವು ದಾಗಿಯೂ ಅದನ್ನು ಬಿಡಲು ತಾವು ಸಂಕಲ್ಪಿಸುವುದಾಗಿಯೂ ಅರಿಕೆ ಮಾಡಿಕೊಂಡಿದ್ದಾರೆ.  ಹುಂಡಿಯಲ್ಲಿ ಕನ್ನಡ, ತಮಿಳು, ಇಂಗ್ಲಿಷ್‌, ತೆಲುಗು, ಮಲಯಾಳ ಮೊದಲಾದ ಭಾಷೆ ಗಳಲ್ಲಿಯೂ ಬರೆದಿದ್ದಾರೆ. ಅಂದರೆ ಹೊರರಾಜ್ಯದ ಮಂದಿಯೂ ದುಶ್ಚಟಗಳಿಂದ ಮುಕ್ತ ರಾಗುವ ಸಂಕಲ್ಪ ಮಾಡಿರುವುದು ತಿಳಿದು ಬರುತ್ತದೆ. ದೇವಸ್ಥಾನಗಳು, ಮಠ ಮಂದಿರಗಳಲ್ಲಿ ಇಂಥ ಪ್ರಯತ್ನ ಮಾಡಿದರೆ ಇನ್ನಷ್ಟು ಯಶಸ್ಸು ಸಿಗಬಹುದು ಎಂಬುದು ಸ್ವಾಮೀಜಿ ಆಶಯವಾಗಿದೆ. ಶ್ರೀಗಳ ಹಿಂದಿನ ಪರ್ಯಾಯದಲ್ಲೂ ಇಂಥ ಪ್ರಯತ್ನ ನಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next