ಬೆಂಗಳೂರು: ಕೋವಿಡ್ 19 ಸೋಂಕಿತರ ಸಂಪರ್ಕಕ್ಕೆ ಬಂದವರನ್ನು 24 ಗಂಟೆಯಲ್ಲಿ ಪತ್ತೆ ಹಚ್ಚಿ ಕೋವಿಡ್ 19 ಹರಡುವಿಕೆ ವೇಗ ನಿಯಂತ್ರಿಸುವಲ್ಲಿ ಶ್ರಮಿಸಿದ ರಾಜ್ಯದ ಕೋವಿಡ್ 19 ವಾರ್ ರೂಂ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹಿರಿಯ ಐಎಎಸ್ ಅಧಿಕಾರಿ ಮೌನೀಶ್ ಮೌದ್ಗಿಲ್ ನೇತೃತ್ವದಲ್ಲಿ 5 ಜನ ತಂತ್ರಜ್ಞರ ತಂಡ ಯಾವುದೇ ಖಾಸಗಿ ಐಟಿ ಸಂಸ್ಥೆ ಮೊರೆ ಹೋಗದೆ ಕೋವಿಡ್ 19 ಸೋಂಕಿತರ ಸಂಪರ್ಕಿತರ ಪತ್ತೆ ಹಚ್ಚಲು ಕಾಂಟ್ಯಾಕ್ಟ್ ಟ್ರೇಸಿಂಗ್ ಆ್ಯಪ್ ಅಭಿವೃದ್ಧಿ ಪಡಿಸಿ ಅದರ ಮೂಲಕ ಕೋವಿಡ್ 19 ಪಾಸಿಟಿವ್ ರೋಗಿಗಳ ಸಂಪರ್ಕಕ್ಕೆ ಬಂದಿರುವ ವ್ಯಕ್ತಿಗಳನ್ನು 24 ಗಂಟೆಯಲ್ಲಿ ಪತ್ತೆ ಹಚ್ಚುವ ಕೆಲಸ ಮಾಡಿದ್ದಾರೆ.
ಹೇಗೆ ಪತ್ತೆ?: ಕೋವಿಡ್ 19 ಸೋಂಕಿತ ವ್ಯಕ್ತಿಯಿಂದ ತಾನು ಕಳೆದ 48 ಗಂಟೆ ಗಳಲ್ಲಿ ಯಾರೊಂದಿಗೆ ಹತ್ತಿರದಿಂದ ಮಾತನಾಡಿರುವುದು, ಒಂದು ಮೀಟರ್ ಅಂತರದಲ್ಲಿ ಭೇಟಿಯಾಗಿ ಮಾತನಾಡಿರುವುದು, ಕನಿಷ್ಠ 15 ನಿಮಿಷ ಒಬ್ಬರ ಜೊತೆಯಲ್ಲಿ ನಿಂತಿರುವುದು, ಕುಟುಂಬ ಸದಸ್ಯರ ಜೊತೆ ಕಾಲ ಕಳೆದಿರುವ ಹಾಗೂ ಮುಖಕ್ಕೆ ಮುಖ ಕೊಟ್ಟು ಮಾತನಾಡಿರುವ ಬಗ್ಗೆ ಮಾಹಿತಿ ಪಡೆದು ಅವರು ಹೇಳುವ ಮಾಹಿತಿಯನ್ನು ಕಾಂಟ್ಯಾಕ್ಟ್ ಟ್ರೇಸಿಂಗ್ ಆಪ್‌ನಲ್ಲಿ ಅಪ್ ಲೋಡ್ ಮಾಡಿ, ಸಂಪರ್ಕಿತರು ಎಲ್ಲಿಯೇ ಇದ್ದರೂ 24 ಗಂಟೆಯಲ್ಲಿ ಪತ್ತೆ ಹಚ್ಚಲಾಗುತ್ತಿದೆ.
ಇದಕ್ಕಾಗಿ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೌರಾಡಳಿತ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿಬ್ಬಂದಿ ಸೇರಿ ಸುಮಾರು 10 ಸಾವಿರ ಕಾರ್ಯ ಕರ್ತರು ಕಾಂಟ್ಯಾಕ್ಟ್ ಟ್ರೇಸರ್ ಗಳಾಗಿ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ತಂಡ ರಾಜ್ಯದ 1.05 ಕೋಟಿ ಕುಟುಂಬಗಳನ್ನು ಈ ಆ್ಯಪ್ ಮೂಲಕ ಸಂಪರ್ಕಿಸಿ ಸುಮಾರು 1 ಲಕ್ಷಕ್ಕೂ ಹೆಚ್ಚು ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚಿದ್ದಾರೆ. ಈ ವ್ಯವಸ್ಥೆಯನ್ನು ದೇಶದಲ್ಲೆಡೆ ಅಳವಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರವೇ ಇತರ ರಾಜ್ಯಗಳಿಗೆ ನಿರ್ದೇಶನ ನೀಡಿದೆ.
ಕೋವಿಡ್ 19 ಸೋಂಕಿತರಿಂದ ಮಾಹಿತಿ ಪಡೆದು ಕಾಂಟ್ಯಾಕ್ಟ್ ಟ್ರೇಸರ್ ಆ್ಯಪ್ ಮೂಲಕ ಸಂಪರ್ಕಿತರನ್ನು 24 ಗಂಟೆಯಲ್ಲಿ ಪತ್ತೆ ಹಚ್ಚಲಾಗುತ್ತಿದೆ. ದೇಶದ ಯಾವ ರಾಜ್ಯದಲ್ಲಿಯೂ ಈ ವ್ಯವಸ್ಥೆ ಜಾರಿಯಲ್ಲಿ ಇಲ್ಲ. ಇದು ನಮಗೆ ರೋಗಿಗಳ ಸಂಪರ್ಕಿತರನ್ನು ವೇಗವಾಗಿ ಪತ್ತೆ ಹಚ್ಚಲು ಸಹಾಯವಾಗಿದೆ.
-ಮೌನಿಷ್ ಮೌದ್ಗಿಲ್, ಕೋವಿಡ್ 19 ವಾರ್ ರೂಂ ಮುಖ್ಯಸ್ಥ
ಕೋವಿಡ್ 19 ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಇದು ರಾಜ್ಯ ಸರ್ಕಾರ ಕೋವಿಡ್ 19 ನಿಯಂತ್ರಿಸಲು ತಂತ್ರಜ್ಞಾನ ಬಳಸಿಕೊಂಡು ಜಾರಿಗೊಳಿಸಿದ ನೀತಿ ಹಾಗೂ ಉತ್ತಮ ಆಡಳಿತ ಪರಿಣಾಮ. ರಾಜ್ಯದ ಕೋವಿಡ್ 19 ವಾರಿಯರ್ಸ್ ತಂಡಕ್ಕೆ ಅಭಿನಂದನೆಗಳು.
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ
* ಶಂಕರ ಪಾಗೋಜಿ