ಬೆಂಗಳೂರು: “ರೈಲು ನಿಲ್ದಾಣದಲ್ಲಿ ಪತ್ತೆಯಾಗಿರುವ ವಸ್ತು ಸ್ಫೋಟಕವಲ್ಲ. ಹೀಗಾಗಿ, ಪ್ರಯಾಣಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ರೈಲ್ವೆ ಪೊಲೀಸ್ ಅಧೀಕ್ಷಕ ಡಾ.ಭೀಮಾಶಂಕರ್ ಗುಳೇದ್ ತಿಳಿಸಿದರು.
ಸ್ಫೋಟಕ ಪತ್ತೆ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದ ಪ್ಲಾಟ್‌ಪಾರಂನಲ್ಲಿ ಪತ್ತೆಯಾಗಿರುವ ವಸ್ತುವಿನ ಮೇಲ್ಮೆ„ ಗ್ರೆನೇಡ್ ಮಾದರಿಯಲ್ಲಿದ್ದು, ಆರಂಭದಲ್ಲಿ ಒಂದಷ್ಟು ಅನುಮಾನ ಮೂಡಿ ಭದ್ರತಾ ಕ್ರಮ ಕೈಗೊಂಡೆವು. ಆದರೆ, ಪ್ರಾಥಮಿಕ ತನಿಖೆಯಿಂದ ಆ ವಸ್ತು ಸ್ಫೋಟಕವಲ್ಲ ಎಂದು ತಿಳಿದುಬಂದಿದೆ ಎಂದು ಸ್ಪಷ್ಟಪಡಿಸಿದರು.
ಬೆಳಗ್ಗೆ 8.50ರ ಸಮಯದಲ್ಲಿ ನಿಲ್ದಾಣದ 1ನೇ ಪ್ಲಾಟ್‌ಫಾರಂನ ರೈಲ್ವೆ ಹಳಿ ಪಕ್ಕ ಗ್ರೆನೇಡ್ ಮಾದರಿಯ ಸಂಶಯಾಸ್ಪದ ವಸ್ತು ಕಾಣಿಸಿಕೊಂಡಿದೆ ಎಂದು ಮಾಹಿತಿ ಬಂತು. ತಕ್ಷಣ ಆರ್‌ಪಿಎಫ್ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ಸ್ಥಳಕ್ಕೆ ತೆರಳಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ಪ್ರಯಾಣಿಕರನ್ನು ದೂರಕ್ಕೆ ಕಳುಹಿಸಲಾಯಿತು. ಜತೆಗೆ ಪಾಟ್ನಾಗೆ ಹೊರಡಲು ಸಿದ್ಧವಾಗಿದ್ದ ರೈಲಿನ (ಸಂಘಮಿತ್ರ ಎಕ್ಸ್‌ಪ್ರೆಸ್) 8 ಬೋಗಿಗಳನ್ನು ಖಾಲಿ ಮಾಡಿಸಿ ಪರೀಕ್ಷೆ ನಡೆಸಲಾಯಿತು.
ಕೂಡಲೇ ರಾಜ್ಯ ಬಾಂಬ್‌ನಿಷ್ಕ್ರಿಯ ದಳವನ್ನು ಕರೆಸಿ ಆ ವಸ್ತುವನ್ನು ಸುರಕ್ಷಿತವಾಗಿ ಪ್ಲಾಟ್‌ಫಾರಂನಿಂದ ಹೊರಗೆ ತಂದು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಯಿತು. ಇನ್ನು ಆರ್‌ಪಿಎಫ್ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸರ ತಂಡಗಳು ನಿಲ್ದಾಣದ ಶೌಚಾಲಯ, ಅಂಗಡಿ ಮಳಿಗೆಗಳು ಸೇರಿದಂತೆ ಸಂಪೂರ್ಣ ನಿಲ್ದಾಣವನ್ನು ತಪಾಸಣೆ ಮಾಡಲಾಯಿತು. ಆನಂತರವೇ ರೈಲುಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಯಿತು ಎಂದರು.
8 ವಿಶೇಷ ತಂಡ ರಚನೆ: ಘಟನೆ ಕುರಿತಂತೆ ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲಾ ರೈಲ್ವೆ ನಿಲ್ದಾಣದಲ್ಲಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಲಾಗಿದೆ. ಇನ್ನು ಪತ್ತೆಯಾಗಿರುವ ವಸ್ತುವಿನ ಕುರಿತು ವಿಚಾರಣೆ ನಡೆಸಲು ಆರ್‌ಪಿಎಫ್ ಅಧಿಕಾರಿಗಳು, ರಾಜ್ಯ ಗುಪ್ತದಳ ಅಧಿಕಾರಿಗಳು, ಆಂತರಿಕ ಭದ್ರತಾ ಅಧಿಕಾರಿಗಳು ಹಾಗೂ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳನ್ನು ಸೇರಿಸಿಕೊಂಡು 150 ಮಂದಿಯ 8 ತಂಡ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಆರ್‌ಪಿಎಫ್ ವಿಭಾಗೀಯ ಭದ್ರತಾ ಆಯುಕ್ತೆ ದೇಬಾಶ್ಮಿತಾ ಚಟೋಪಾಧ್ಯಾಯ ಬ್ಯಾನರ್ಜಿ ಮಾತನಾಡಿ, ನಿಲ್ದಾಣದ ಭದ್ರತೆ ಹೆಚ್ಚಿಸಲು ಹೊಸದಾಗಿ 150 ಸಿಸಿ ಕ್ಯಾಮೆರಾ ಹಾಗೂ ಬ್ಯಾಗ್ ಸ್ಕ್ಯಾನರ್, ಫೇಸ್ ಡಿಟೆಕ್ಟರ್ ಅನ್ನು ಎಲ್ಲಾ ದ್ವಾರಗಳಲ್ಲೂ ಅಳವಡಿಸಲು ಕ್ರಮಕೈಗೊಳ್ಳಲಾಗುತ್ತಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ನಿಲ್ದಾಣದ ಭದ್ರತೆ ಹೆಚ್ಚಿಸಲಾಗುವುದು ಎಂದರು.