ಬೆಂಗಳೂರು: ಮನೆ ಕಳ್ಳತನ, ಬೈಕ್ ಕಳವು ಪ್ರಕರಣಗಳಲ್ಲಿ ಭಾಗಿಯಾಗಿ ಹತ್ತಾರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನೇಪಾಳ ಮೂಲದ ಕುಖ್ಯಾತ ಕಳ್ಳನನ್ನು ಅಶೋಕನಗರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ರಾಮ್ ಬಹದ್ದೂರ್ ತಾಪ (45) ಬಂಧಿತ ಆರೋಪಿ. ಈತನ ಬಂಧನದಿಂದ ವಿಜಯನಗರ, ಸುಬ್ರಮಣ್ಯಪುರ, ಕೊಡಿಗೇಹಳ್ಳಿ ಸೇರಿ ನಾನಾ ಠಾಣೆಗಳಲ್ಲಿ ದಾಖಲಾಗಿದ್ದ ಕಳವು ಪ್ರಕರಣಗಳು ಪತ್ತೆಯಾಗಿವೆ. ರಾಜ್ಯ ಹಾಗೂ ನೆರೆರಾಜ್ಯಗಳಲ್ಲಿ ಕಳವು ಮಾಡುತ್ತಿದ್ದ ಚಿನ್ನಾಭರಣಗಳನ್ನು ನೇಪಾಳದಲ್ಲಿ ಅಡವಿಟ್ಟು ಹಣ ಸಂಪಾದನೆ ಮಾಡುತ್ತಿದ್ದ.
ಈತನಿಗಾಗಿ ಪೊಲೀಸರು ಹುಡುಕಾಡ ನಡೆಸುತ್ತಿದ್ದರು. ಇದೀಗ ಮೆಜೆಸ್ಟಿಕ್‌ನಲ್ಲಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಈತ 2005ರ ನಂತರ ಇದುವರೆಗೂ ಬಂಧನವಾಗಿಲ್ಲ. ಈ ಹಿಂದೆ ಕೃತ್ಯವೆಸಗಿದ್ದ ಸ್ಥಳದಲ್ಲಿ ದೊರೆತ ಬೆರಳಚ್ಚಿನ ಆಧಾರದ ಮೇಲೆ ಆರೋಪಿ ಪತ್ತೆ ಹಚ್ಚಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಗ್ಯಾಸ್ ಕಟರ್ ಮೂಲಕ ಕಳವು: ನೇಪಾಳದಿಂದ ಬೆಂಗಳೂರಿಗೆ ಬರುತ್ತಿದ್ದ ಈತ ಮೊದಲು ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ. ಬಳಿಕ ಇದೇ ಬೈಕಿನಲ್ಲಿ ಹಗಲು ಹೊತ್ತಿನಲ್ಲಿ ಸುತ್ತಾಡುತ್ತಾ ಮನೆಗಳನ್ನು ಗುರುತು ಮಾಡಿಕೊಳ್ಳುತ್ತಿದ್ದ.ನಂತರ ಗ್ಯಾಸ್ ಕಟರ್ ಬಳಸಿ ಮನೆಗಳಿಗೆ ಚಿನ್ನಾಭರಣ ಕಳವು ಮಾಡುತ್ತಿದ್ದ.
ಸೆಕ್ಯೂರಿಟಿ ಗಾರ್ಡ್‌ಗಳ ಸಹಾಯ: ಆರೋಪಿ ಕರ್ನಾಟಕ ಮಾತ್ರವಲ್ಲದೇ ಚೆನ್ನೈ, ಕೇರಳದಲ್ಲಿಯೂ ಸಹ ಕಳ್ಳತನ ಮಾಡುತ್ತಿದ್ದ. ಪ್ರತಿ ಬಾರಿ ನಗರಕ್ಕೆ ಬಂದಾಗ, ಇಲ್ಲಿನ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್‌ಗಳನ್ನು ಪರಿಚಯಿಸಿಕೊಂಡು ಅವರು ಭದ್ರತೆಗಿದ್ದ ಮನೆ ಹಾಗೂ ಕಂಪೆನಿಗಳ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದ. ನಂತರ ಕಳವು ಮಾಡುತ್ತಿದ್ದ.