ಹುಬ್ಬಳ್ಳಿ: ಈ ಹಿಂದೆ ಬಿಜೆಪಿ ಸರಕಾರವಿದ್ದಾಗ ರೈತರ ಪರ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನನ್ನ ರಾಜಕೀಯ ಜೀವನದಲ್ಲಿ ಎಂದು ಕೂಡಾ ಜಾತಿ, ಕುಲ, ಗೋತ್ರ ನೋಡಿ ರಾಜಕಾರಣ ಮಾಡಿಲ್ಲ. ಎಲ್ಲ ವರ್ಗದ ಜನರಿಗೆ ಅನುಕೂಲ ಕಲ್ಪಿಸಿದ್ದೇನೆ. ಕಾಗಿನೆಲೆಯಲ್ಲಿ 50 ಕೋಟಿ ರೂ.ಗಳ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಯಿತು. ವಾಲ್ಷ್ಮೀಕಿ ಜಯಂತಿ ಆಚರಿಸಲಾಯಿತು ಎಂದರಲ್ಲದೇ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಅವರನ್ನು 25 ಸಾವಿರ ಮತಗಳಿಂದ ಗೆಲ್ಲಿಸಬೇಕೆಂದರು.
ಸಂಸದ ಪ್ರಹ್ಲಾದ ಜೋಶಿ ಮಾತನಾಡಿ, ಕುಂದಗೋಳ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ ಹಣದ ಚೀಲ ಹಿಡಿದುಕೊಂಡು ಜನರನ್ನು ಖರೀದಿಸುವ ದುರಹಂಕಾರದಿಂದ ಕ್ಷೇತ್ರಕ್ಕೆ ಬಂದಿದ್ದಾರೆ. ಕ್ಷೇತ್ರದ ಮತದಾರ ಇದಾವುದನ್ನೂ ನೋಡಲ್ಲ. ಇವರನ್ನು ಮನೆಗೆ ಕಳಿಸುತ್ತಾರೆ ಎಂದರು.
ಇದಕ್ಕೂ ಮೊದಲು ಯರಗುಪ್ಪಿ, ಹಿರೇನರ್ತಿ, ತರ್ಲಘಟ್ಟ, ಗುಡಗೇರಿ ಗ್ರಾಮಗಳಲ್ಲಿ ರೋಡ್ ಶೋ ನಡೆಸುವ ಮೂಲಕ ಮತಯಾಚಿಸಲಾಯಿತು.
Advertisement
ಕುಂದಗೋಳ ವಿಧಾನಸಭಾ ಕ್ಷೇತ್ರ ಹಿರೇಹರಕುಣಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಪರ ರೋಡ್ ಶೋ ನಡೆಸಿ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಸರಕಾರ ಇದ್ದಾಗ, ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್, ರೈತರ ಸಾಲ ಮನ್ನಾ, ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವುದು, ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದರು.
Related Articles
Advertisement
ಮಾಜಿ ಸಚಿವ ದಿ| ಸಿ.ಎಸ್.ಶಿವಳ್ಳಿ ಅವರ ಸ್ವಗ್ರಾಮ ಯರಗುಪ್ಪಿಯಲ್ಲಿ ಬಿಜೆಪಿ ಭರ್ಜರಿ ರೋಡ್ ಶೋ ನಡೆಸಿತು. ಯರಗುಪ್ಪಿಗೆ ಆಗಮಿಸಿದ ಯಡಿಯೂರಪ್ಪನವರನ್ನು ಬಿಜೆಪಿ ಮುಖಂಡ ಎಂ.ಆರ್. ಪಾಟೀಲ ಬರಮಾಡಿಕೊಂಡರು. ಬಿಜೆಪಿ ಮುಖಂಡರಾದ ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ಸಿ.ಸಿ.ಪಾಟೀಲ, ಸಂಗಣ್ಣ ಕರಡಿ, ಎಂ.ಆರ್. ಪಾಟೀಲ, ಪಾಲಾಕ್ಷಗೌಡ ಪಾಟೀಲ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಇನ್ನಿತರರಿದ್ದರು.
ವಾಹನಗಳ ತಪಾಸಣೆ
ಕುಂದಗೋಳ ತಾಲೂಕಿನ ಹಿರೇಹರಕುಣಿ ಗ್ರಾಮದಲ್ಲಿ ರವಿವಾರ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಪರ ಮತಯಾಚನೆಗೆ ಆಗಮಿಸಿದ ವಾಹನಗಳನ್ನು ಚುನಾವಣಾ ಅಧಿಕಾರಿಗಳಾದ ಶ್ಯಾಮ ಪಾಂಡುರಂಗಿ ಹಾಗೂ ಜಕ್ಕಲಿ ತಪಾಸಣೆ ನಡೆಸಿದರು.
ಪಲಾವ್ ಹಂಚಿದರು
ಕುಂದಗೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡರ ಪರ ಹಿರೇಹರಕುಣಿ ಗ್ರಾಮದಲ್ಲಿ ನಡೆದ ರೋಡ್ ಶೋ ನಂತರ ಪಾಲ್ಗೊಂಡವರಿಗೆ ಪಲಾವ್ ಹಂಚಿದ್ದು ಕಂಡು ಬಂತು.
ಹಿರೇಹರಕುಣಿಯಲ್ಲಿ ಬಿಎಸ್‌ವೈ ಉಪಹಾರ-ಊಟ
ಮಧ್ಯಾಹ್ನ 12:30ರ ಸುಮಾರಿಗೆ ಯರಗುಪ್ಪಿ ಗ್ರಾಮಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಯರಗುಪ್ಪಿ ಗ್ರಾಮದಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಮತಯಾಚಿಸಿದ ನಂತರ ಬಿಜೆಪಿ ಮುಖಂಡ ಎಂ.ಆರ್.ಪಾಟೀಲರ ನಿವಾಸದಲ್ಲಿ ಉಪಹಾರ ಸೇವಿಸಿದರು. ನಂತರ ಅಲ್ಲಿಂದ ಮಧ್ಯಾಹ್ನ 3:30 ಗಂಟೆಗೆ ಸುಮಾರಿಗೆ ಹಿರೇಹರಕುಣಿ ಗ್ರಾಮದಲ್ಲಿ ಮಂಜುನಾಥ ಈಟಿ ಅವರ ಮನೆಯಲ್ಲಿ ಭೋಜನ ಸವಿದರು.
ಸಿಎಂ ಕುರ್ಚಿ ಕಳೆದುಕೊಳ್ಳುವ ಹೆದರಿಕೆಗೆಅಪ್ಪ-ಮಗ ರೆಸಾರ್ಟ್ ವಾಸ: ಬಿಎಸ್‌ವೈ
ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನದಿಂದ ಇಳಿಸುತ್ತಾರೆಂದು ಬೇಸರಗೊಂಡು ಅಪ್ಪ-ಮಕ್ಕಳು ರೆಸಾರ್ಟ್‌ನಲ್ಲಿಯೇ ಉಳಿದುಕೊಂಡಿದ್ದು, ಕಾಂಗ್ರೆಸ್-ಜೆಡಿಎಸ್‌ನಲ್ಲಿ ಗೊಂದಲಗಳು ಹೆಚ್ಚಾಗಿರುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಕುಂದಗೋಳ ತಾಲೂಕಿನ ಯರಗುಪ್ಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ಗೊಂದಲಗಳು ಹೆಚ್ಚಾಗಿದ್ದು, ಹಲವರು ಮುಖ್ಯಮಂತ್ರಿಗಳನ್ನು ಸ್ಥಾನದಿಂದ ಕೆಳಗಿಳಿಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡುತ್ತಿರುವುದರಿಂದ ಬೇಸರಗೊಂಡಿರುವ ಕುಮಾರಸ್ವಾಮಿ ಅವರು ರೆಸಾರ್ಟ್ ಬಿಟ್ಟು ಹೊರಗೆ ಬರುತ್ತಿಲ್ಲ. ಮೇ 23ರ ಲೋಕಸಭಾ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆ ಫಲಿತಾಂಶ ನಂತರ ರಾಜ್ಯ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗಲಿದೆ. ಅದರ ಅರಿವಿದ್ದೇ ಸಿಎಂ ಕುಮಾರಸ್ವಾಮಿ ಅವರು ಭಯಗೊಂಡು ಮಗನ ಜತೆಗೆ ರೆಸಾರ್ಟ್ ಹೋಗಿದ್ದಾರೆ. ಈಗಾಗಲೇ ಮೈತ್ರಿ ಪಕ್ಷದಲ್ಲಿನ ಭಿನ್ನಾಭಿಪ್ರಾಯ ಮತ್ತು ಗೊಂದಲಗಳು ಸದನದಲ್ಲಿಯೇ ಬಹಿರಂಗಗೊಂಡಿರುವುದು ಜಗಜ್ಜಾಹೀರಾಗಿದೆ ಎಂದರು.
ಸಚಿವ ಡಿ.ಕೆ. ಶಿವಕುಮಾರ ಕುತಂತ್ರ ರಾಜಕಾರಣಕ್ಕೆ ಎಕ್ಸ್‌ಫರ್ಟ್. ಆದರೆ ನಮ್ಮ ಪಕ್ಷದ ಯಾವೊಬ್ಬ ಕಾರ್ಯಕರ್ತರನ್ನು ಹಾಗೂ ಶಾಸಕರನ್ನು ಸೆಳೆಯಲು ಅವರಿಗೆ ಸಾಧ್ಯವಿಲ್ಲ. ಪಕ್ಷದಲ್ಲಿ ನಾವೆಲ್ಲ ಒಗ್ಗಟ್ಟಿನಲ್ಲಿದ್ದೇವೆ. ನಮ್ಮಲ್ಲಿನ ಸಾಮಾನ್ಯ ಕಾರ್ಯಕರ್ತನನ್ನು ಸಹ ಡಿ.ಕೆ. ಶಿವಕುಮಾರ ಸೆಳೆಯಲು ಸಾಧ್ಯವಿಲ್ಲ. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 22ಕ್ಕೂ ಅಧಿಕ ಕ್ಷೇತ್ರಗಳ ಬಿಜೆಪಿ ಗೆಲುವು ಸಾಧಿಸಲಿದೆ. ಹಾಗೆಯೇ, ಉಪ ಚುನಾವಣೆಯಲ್ಲಿಯೂ ಎರಡು ಕ್ಷೇತ್ರದ ಅಭ್ಯರ್ಥಿಗಳು ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ ಭವಿಷ್ಯದ ರಾಜಕೀಯ ಚಿಂತನೆ ಶುರು: ಕಾರಜೋಳ
ಹುಬ್ಬಳ್ಳಿ: ಬೆಂಕಿ ಇಲ್ಲದೆ ಹೊಗೆಯಾಡಲ್ಲ. ಭವಿಷ್ಯದ ದೃಷ್ಟಿಯಿಂದ ಮೇ 23ರ ನಂತರ ಕಾಂಗ್ರೆಸ್-ಜೆಡಿಎಸ್ ಶಾಸಕರು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದು, ಕಾಂಗ್ರೆಸ್‌ನ ಅರ್ಧದಷ್ಟು ಶಾಸಕರು ಇಂತಹ ನಿರ್ಧಾರಕ್ಕೆ ಬಂದರೂ ಅಚ್ಚರಿ ಇಲ್ಲ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಹೊಸ ಬಾಂಬ್ ಸಿಡಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಭವಿಷ್ಯದ ರಾಜಕೀಯ ಚಿಂತನೆ ಶುರುವಾಗಿದೆ. ಅವರಿಗೆ ಈ ಪಕ್ಷಗಳಲ್ಲಿ ಭವಿಷ್ಯವಿಲ್ಲ ಎಂಬುದು ಮನದಟ್ಟು ಆಗುತ್ತಿದೆ ಎಂದರು.
ಆಂತರಿಕ ಕಚ್ಚಾಟ ಹಾಗೂ ಕಡೆಗಣನೆಯಿಂದ ಕಾಂಗ್ರೆಸ್-ಜೆಡಿಎಸ್‌ನ ಅನೇಕ ಶಾಸಕರು ಬೇಸತ್ತಿದ್ದಾರೆ. ನೋಡುತ್ತಾ ಇರಿ ಮೇ 23ರ ನಂತರ ನಿರಾಸೆಯಾಗದ ರೀತಿಯಲ್ಲಿ ಫಲಿತಾಂಶ ನೀಡುತ್ತೇವೆ. ಈ ಬಾರಿ ಗಡುವು ನೀಡುವ ಪ್ರಶ್ನೆಯೇ ಇಲ್ಲ. ಮೈತ್ರಿ ಸರಕಾರ ಪತನಗೊಂಡು ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಹಣ ಹಂಚಿಕೆ ಮೂಲಕ ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಗಳನ್ನು ಗೆಲ್ಲಲು ಕಾಂಗ್ರೆಸ್-ಜೆಡಿಎಸ್ ಮುಂದಾಗಿವೆ. ಫಲಿತಾಂಶ ಅವರಿಗೆ ನಿರಾಸೆ-ಮುಖಭಂಗ ತರುವುದು ಖಚಿತ. ಬರ ಸ್ಥಿತಿ ನಿರ್ವಹಿಸಬೇಕಾದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರೆಸಾರ್ಟ್ ಸೇರಿದ್ದಾರೆಂದು ಟೀಕಿಸಿದರು.
ಬಿಎಸ್‌ವೈ ನೇತೃತ್ವದಲ್ಲಿ ಮುಖಂಡರ ಸಭೆಉಪ ಚುನಾವಣೆ ಗೆಲುವಿಗೆ ಕಾರ್ಯತಂತ್ರ
ಹುಬ್ಬಳ್ಳಿ: ಕುಂದಗೋಳ ವಿಧಾನಸಭೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ರವಿವಾರ ಪಕ್ಷದ ಪ್ರಮುಖರ ಮಹತ್ವದ ಸಭೆ ನಡೆಯಿತು.
ಇಲ್ಲಿನ ಹೊಟೇಲ್ವೊಂದರಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ ಶೆಟ್ಟರ, ಪ್ರಹ್ಲಾದ ಜೋಶಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಸಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಪ್ರದೀಪ ಶೆಟ್ಟರ, ಭಾರತಿ ಪಾಟೀಲ, ಮೋಹನ ಲಿಂಬಿಕಾಯಿ, ಅಶೋಕ ಕಾಟವೆ, ಮಹೇಶ ಟೆಂಗಿನಕಾಯಿ, ಎಂ.ಆರ್.ಪಾಟೀಲ, ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪಕ್ಷದ ಅಭ್ಯರ್ಥಿ ಗೆಲುವಿನ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ, ಪರಿಣಾಮಕಾರಿ ಪ್ರಚಾರ, ಕುಂದಗೋಳ ಕ್ಷೇತ್ರದಲ್ಲಿನ ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್‌ವಾರು ಮುಖಂಡರಿಗೆ ಜವಾಬ್ದಾರಿ ಹಂಚಿಕೆ, ಆಯಾ ಸಮಾಜಗಳ ಮತದಾರರ ಸೆಳೆಯುವ ನಿಟ್ಟಿನಲ್ಲಿ ಸಮಾಜಗಳ ಶಾಸಕರು, ಮಾಜಿ ಸಚಿವರು, ಪ್ರಮುಖರನ್ನು ಪ್ರಚಾರಕ್ಕೆ ನಿಯೋಜನೆ ಕುರಿತಾಗಿ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ.
ಮನೆ, ಮನೆ ಪ್ರಚಾರ, ರೋಡ್ ಶೋಗಳನ್ನು ಇನ್ನಷ್ಟು ಹೆಚ್ಚಿಸುವ ಮೂಲಕ ಪ್ರಚಾರ ತೀವ್ರಗೊಳಿಸಬೇಕು. ಪಕ್ಷದ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಕಾಂಗ್ರೆಸ್-ಜೆಡಿಎಸ್‌ನವರು ನಮ್ಮ ಕಾರ್ಯಕರ್ತರ ಸೆಳೆಯುವ ಯತ್ನಕ್ಕೆ ಅವಕಾಶ ನೀಡದಂತೆ ಸಂಘಟಿತ ಹಾಗೂ ಸಮರ್ಪಕ ಕಾರ್ಯ ನಿರ್ವಹಿಸುವಂತೆ ಯಡಿಯೂರಪ್ಪ ಸೂಚಿಸಿದರು ಎನ್ನಲಾಗಿದೆ. ಇದೇ ಸಂದರ್ಭದಲ್ಲಿ ತಾಪಂ, ಗ್ರಾಪಂನ ಕೆಲ ಸದಸ್ಯರು ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಂಡರು.
ಕಾಂಗ್ರೆಸ್ ಆಮಿಷಗಳಿಗೆ ಬಿಜೆಪಿ ಕಾರ್ಯಕರ್ತರು ಬಲಿಯಾಗಲ್ಲ
ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಾದ ವೇಣುಗೋಪಾಲ, ಡಿ.ಕೆ.ಶಿವಕುಮಾರ ಯಾರೇ ಆಗಲಿ, ಕುಂದಗೋಳ ಕ್ಷೇತ್ರದಲ್ಲಿ ಆಮಿಷಗಳ ಮೂಲಕ ನಮ್ಮ ಯಾವುದೇ ಕಾರ್ಯಕರ್ತರು, ಮುಖಂಡರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿದ್ದೇವೆ. ಸಂಘಟಿತವಾಗಿ ಉಪ ಚುನಾವಣೆ ಎದುರಿಸುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಏನೇ ಸರ್ಕಸ್ ಮಾಡಿದರೂ ನಮ್ಮ ಕಾರ್ಯಕರ್ತರನ್ನು ಮುಟ್ಟಲು ಸಾಧ್ಯವಿಲ್ಲ. ಹಣ ಬಲಕ್ಕೆ ನಮ್ಮ ಕಾರ್ಯಕರ್ತರು ಬಲಿಯಾಗಲ್ಲ ಎಂದರು.
ಕುಂದಗೋಳ ಕ್ಷೇತ್ರದಲ್ಲಿ ಯಾವುದೇ ಗ್ರಾಮದಲ್ಲಿ ನಮಗೆ ಹಿನ್ನಡೆ ಆಗಿಲ್ಲ. ಬಿಜೆಪಿ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಅವರಿಗೆ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಸುಮಾರು 25 ಸಾವಿರ ಮತಗಳ ಅಂತರದಿಂದ ಅವರು ಗೆಲುವು ಸಾಧಿಸಲಿದ್ದಾರೆ. ಹಣ ಬಲದಿಂದ ಗೆಲುವು ಸಾಧಿಸುತ್ತೇವೆಂಬುದು ಕಾಂಗ್ರೆಸ್-ಜೆಡಿಎಸ್‌ನವರ ಭ್ರಮೆ. ಎರಡೂ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದರು.
ಮೇ 23ರ ನಂತರ ಸಮ್ಮಿಶ್ರ ಸರಕಾರದ ಮೈತ್ರಿಕೂಟದಲ್ಲಿ ಭಿನ್ನಮತ ಉಲ್ಬಣಗೊಳ್ಳಲಿದ್ದು, ಹಲವು ಅತೃಪ್ತ ಶಾಸಕರು ತಮ್ಮದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ರಾಜಕೀಯ ಬದಲಾವಣೆ ಹಾಗೂ ನೂತನ ಸರಕಾರ ರಚನೆಗೆ ಎರಡೂ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ಮಹತ್ವದ ಪ್ರಭಾವ ಬೀರಲಿದೆ ಎಂದರು.