Advertisement

ಸೇನಾ ನೇಮಕಾತಿ  ರ‍್ಯಾಲಿ ನೋಡಿ ಸೈನಿಕನಾಗುವ ಆಸೆ ಹುಟ್ಟಿತು! 

10:08 AM Mar 03, 2018 | Team Udayavani |

ಬೆಳ್ತಂಗಡಿ: ‘ಐದು ವರ್ಷಗಳ ಹಿಂದಿನ ಘಟನೆ. ನಾವಾಗ ಶ್ರೀನಗರದ ಕ್ಯಾಂಪಿನಲ್ಲಿದ್ದೆವು. ಒಂದು ಮನೆಗೆ ಉಗ್ರಗಾಮಿಗಳು ನುಗ್ಗಿದ ಮಾಹಿತಿ ಬಂತು. ಉಗ್ರರನ್ನು ಮಟ್ಟಹಾಕಲು ಮನೆ ಸುತ್ತುವರೆದೆವು. ಆ ಮನೆಯ ತಳ ಅಂತಸ್ತಿನಲ್ಲಿ ಉಗ್ರರಿದ್ದರೆ, ಅದರಲ್ಲೇ 70ರ ವೃದ್ಧೆಯೊಬ್ಬರಿದ್ದರು. ಅವರನ್ನು ಪಾರು ಮಾಡಿ, ಎಚ್ಚರಿಕೆ ನಿರ್ಲಕ್ಷಿಸಿದ ಉಗ್ರರಿಗೆ, ತಕ್ಕಶಾಸ್ತಿ ಮಾಡಲು ಅವರಿದ್ದ ಮನೆಯನ್ನೇ ಸ್ಫೋಟಿಸಿ ಹತ್ಯೆಗೈದೆವು’ ಹೀಗೆ ಉಗ್ರನಿಗ್ರಹ ಕಾರ್ಯಾಚರಣೆಯ ಎಳೆಗಳನ್ನು ಬೆಳ್ತಂಗಡಿ ತಾಲೂಕಿನ, ನಡ ಗ್ರಾಮದ ಬೀದಡಿ ಮನೆಯ ಯೋಧ ಎಸಿಪಿ ನಾಯಕ್‌ ಯೋಗೀಶ್‌ ಗೌಡ ಅವರು ಹೇಳುತ್ತಿದ್ದರೆ ಮೈಯೆಲ್ಲ ರೋಮಾಂಚನ!

Advertisement

ಕುಟುಂಬದ ಆಧಾರ
ನಡ ಗ್ರಾಮದ ಬೀಜದಡಿಯ ದಿ| ಅಣ್ಣಯ್ಯ ಗೌಡ – ಚೆನ್ನಮ್ಮ ದಂಪತಿಯ ಇಬ್ಬರು ಗಂಡುಮಕ್ಕಳ ಪೈಕಿ ಯೋಗೀಶ್‌ ಎರಡನೆಯವರು. ಅವರಣ್ಣ 70 ಸೆಂಟ್ಸ್‌ ಜಾಗದಲ್ಲಿ ಕೃಷಿ ಮಾಡಿಕೊಂಡಿದ್ದಾರೆ. ಯೋಗೀಶ್‌ ಅವರು ಮೂರು ವರ್ಷಗಳ ಹಿಂದೆ ಪ್ರೀತಾ ಅವರನ್ನು ಕೈಹಿಡಿದಿದ್ದು, ಪುತ್ರ ಮಿಲನ್‌ ಇದ್ದಾರೆ. ಯೋಗೀಶ್‌ ಅವರೇ ಮನೆಯ ಆಧಾರಸ್ತಂಭ. ಇವರ ಕುಟುಂಬಿಕರಾರೂ ಸೇನೆಯಲ್ಲಿಲ್ಲ. ಕೆಲ ವರ್ಷಗಳ ಹಿಂದೆ ಮೃತ ಪಟ್ಟ ಸೈನಿಕ ಕೃಷ್ಣಪ್ಪ ಗೌಡರು ಇವರ ನೆರೆಯವರು.

ಸೇನಾ ನೇಮಕಾತಿ  ರ‍್ಯಾಲಿಯೇ ಪ್ರೇರಣೆ!
ಇಷ್ಟಕ್ಕೂ ಯೋಗೀಶ್‌ ಅವರು ಸೇನೆಗೆ ಸೇರಲು ಪ್ರೇರಣೆಯಾದದ್ದು ಸೇನಾ ನೇಮಕಾತಿ  ರ‍್ಯಾಲಿ! ಬಡ ಕುಟುಂಬದಿಂದ ಬಂದ ಅವರು ಮೂಡಾಯಿಬೆಟ್ಟುನಲ್ಲಿ ಪ್ರಾಥಮಿಕ , ನಡದಲ್ಲಿ ಪ್ರೌಢಶಿಕ್ಷಣ ಕಲಿತು ಬಳಿಕ ಬದುಕಿನ ಬಂಡಿ ಓಡಿಸಲು ಮಂಗಳೂರಿನಲ್ಲಿ ನೆಸ್ಕೆಫೆ ಕಂಪನಿ ಕೆಲಸಕ್ಕೆ ಸೇರಿದ್ದರು. ಆ ಸಂದರ್ಭ ನೆಹರೂ ಮೈದಾನದಲ್ಲಿ ನಡೆದ ಸೇನಾ ನೇಮಕಾತಿ  ರ‍್ಯಾಲಿಯನ್ನು ಗೆಳೆಯರ ಜತೆ ವೀಕ್ಷಿಸಲು ಹೋಗಿದ್ದರು. ಚಿಗುರು ಮೀಸೆಯ ಯುವಕರು ಓಡಿ, ದೇಹದಂಡನೆ ಮಾಡಿ ಸೇನೆಗೆ ಸೇರಲು ತೋರಿಸುತ್ತಿರುವ ಉತ್ಸಾಹ, ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದವರನ್ನು ಕಂಡು ತಾನೂ ಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂದು ಅಂದುಕೊಂಡರು. ಇದೇ ಯೋಗೀಶ್‌ ಅವರನ್ನು ದೇಶಸೇವೆಯ ಕೈಂಕರ್ಯಕ್ಕೆ ತಂದು ನಿಲ್ಲಿಸಿತು.

ಚೀನ ಗಡಿಯ ಮೈಕೊರೆವ ಚಳಿ !
ದೋಕ್ಲಂನಲ್ಲಿ ಚೀನಾದವರು ಸೇನಾ ಜಮಾವಣೆ ಮಾಡುತ್ತಿದ್ದರು. ಈ ಸಂದರ್ಭ ಯೋಗೀಶ್‌ ಹಾಗೂ ತಂಡ ತುರ್ತಾಗಿ ಅಲ್ಲಿಗೆ ನಿಯೋಜನೆಯಾಗಿತ್ತು. ಆಗ ಅಲ್ಲಿ -20 ಡಿಗ್ರಿ ಸೆಲ್ಸಿಯಸ್‌ ಚಳಿ. ದಿಢೀರ್‌ ಹೋದ ಕಾರಣ ಚಳಿ ತಡೆಯುವ ಬಟ್ಟೆಗಳೂ ಇರಲಿಲ್ಲ. ಬಿಸಿನೀರಿಗೆ ಉಪ್ಪು ಹಾಕಿ ಕೈಕಾಲು ಅದರೊಳಗಿಟ್ಟು ಚಳಿ ನಿವಾರಣೆ ಮಾಡುತ್ತಿದ್ದೆವು. ಪಾದ ಬಿಸಿಯಾಗದಿದ್ದರೆ ನಿದ್ದೆ ಬರುವುದಿಲ್ಲ. ಅಂತಹ ಸಂದರ್ಭ ಮಲಗುವ ಬೆಡ್‌ಕವರ್‌ ಒಳಗಡೆ ಬಿಸಿನೀರ ಬಾಟಲಿ ಇಟ್ಟು ನಿದ್ದೆ ಮಾಡಿದ್ದಿದೆ. ಚಳಿಗೆ ಕೈಬೆರಳು ಕೊಳೆಯುವಂತಾಗುತ್ತದೆ. ಅಲ್ಲಿಂದ ಬಂದ ಮೇಲೆ ಇದಕ್ಕೆಲ್ಲ ಚಿಕಿತ್ಸೆ ಪಡೆದುಕೊಂಡೆವು ಎಂದು ಯೋಗೀಶ್‌ ನೆನಪಿಸಿಕೊಳ್ಳುತ್ತಾರೆ. 

ಪದೋನ್ನತಿ
2003 ಸೆಪ್ಟೆಂಬರ್‌ನಲ್ಲಿ ಸೇನೆಗೆ ಆಯ್ಕೆಯಾದ ಯೋಗೀಶ್‌ 2004ರಲ್ಲಿ ಬೆಂಗಳೂರಲ್ಲಿ ತರಬೇತಿ ಮುಗಿಸಿದರು. ಬಳಿಕ ಅಸ್ಸಾಂ, ಹರಿಯಾಣದ ಕಾಲ್ಕಾ, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶದ ಝಾನ್ಸಿ, ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿ ಸೇವೆ ಸಲ್ಲಿಸಿ ಈಗ ಪಠಾಣ್‌ಕೋಟ್‌ ಗೆ ನಿಯುಕ್ತಿಗೊಂಡಿದ್ದಾರೆ. ಆರಂಭದಲ್ಲಿ ಸೇನೆಗೆ ಸಿಪಾಯಿ ಹುದ್ದೆಗೆ ಸೇರಿದ್ದ ಅವರು 2014ರಲ್ಲಿ ನಾಯಕ್‌ ಹುದ್ದೆ  2017ರಲ್ಲಿ ಎಸಿಪಿ ನಾಯಕ್‌ ಹುದ್ದೆಗೆ ಪದೋನ್ನತಿ ಹೊಂದಿದ್ದಾರೆ. 

Advertisement

ದೇಶಸೇವೆಗೆ ಅಪೂರ್ವ ಅವಕಾಶ
ಸೇನೆ ಎಂದರೆ ಭಯ ಬೇಡ. ಸೇನೆಗೆ ಸೇರುವುದು ಎಂದರೆ ಅದು ದೇಶಸೇವೆಗೆ ದೊರೆಯುವ ಅಪೂರ್ವ ಅವಕಾಶ. ಸಾಕಷ್ಟು ಕಲಿಯಲು, ಜೀವನದಲ್ಲಿ ಏನಾದರೂ ಸಾಧನೆ ಮಾಡಲು, ದೇಶಭಕ್ತಿಯನ್ನು ಆವಾಹಿಸಿಕೊಳ್ಳಲು ಸೇನೆ ಸಹಕಾರಿ.
-ಯೋಗೀಶ್‌ ಗೌಡ

ಸೈನಿಕರೆಂದರೆ ಗೌರವಾಭಿಮಾನ
ನಮ್ಮ ಊರಿನ ಅನೇಕರು ಸೇನೆಯಲ್ಲಿದ್ದಾರೆ. ಅವರಲ್ಲಿ ಬಹುತೇಕರು ಗೆಳೆಯರು. ಕೊರೆವ ಚಳಿಯಲ್ಲಿ ಕಾವಲು ಕಾದು, ನಮ್ಮನ್ನು ಬೆಚ್ಚಗಿಡುವ ಸೈನಿಕರ ಬಗ್ಗೆ ನಮಗೆ ಇನ್ನಷ್ಟು ಗೌರವಾಭಿಮಾನ ಮೂಡುತ್ತದೆ.
-ವಸಂತ್‌ ಹೆಗ್ಡೆ, ಬೆಳ್ತಂಗಡಿ

ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next