Advertisement

ಓರೆ ಬೆಳಕು ಮೂಡಿಸುವ ಮುಪ್ಪಿನ ರೇಖೆಗಳ ಆಳ …..

06:13 PM Mar 09, 2020 | Sriram |

ಅಪರಿಚಿತ ಮಹಿಳೆಯಾದರೆ, ಆಕೆಯೊಂದಿಗೆ ನಾಲ್ಕಾರು ಮಾತಾಡಿ, ನಿಧಾನವಾಗಿ ವಿಷಯಕ್ಕೆ ಬರುವುದು ಉಚಿತ. ಆಕೆಯ ಬದುಕು ಕಾರ್ಪಣ್ಯದಲ್ಲಿ ತೇಲುತ್ತಿದ್ದರೆ, ಛಾಯಾಗ್ರಾಹಕ ತೆಗೆಯಬಲ್ಲ ಛಾಯಾಚಿತ್ರ ಕೂಡಾ ಅದೇ ಭಾವನೆಗಳನ್ನು ಸೂಸುವಂತಿರಬೇಕು. ಆಕೆಯನ್ನು ಉಪಾಯವಾಗಿ ಸ್ವಲ್ಪ ನಗಿಸಿ, ಮಧುರವಾದ ಬೆಳಕಿನಲ್ಲಿ ಸೆರೆಹಿಡಿದರೆ, ಆಕೆಯ ವ್ಯಕ್ತಿತ್ವಕ್ಕೆ ವಿರುದ್ಧವಾದ ಚಿತ್ರ ಅದಾಗಿಬಿಡಬಹುದು.

Advertisement

ದಿನನಿತ್ಯದ ಸಂತಸ ಅಥವಾ ಸಂಕಟಗಳನ್ನೆಲ್ಲಾ ಜೀರ್ಣಿಸಿಕೊಂಡು, ಮುಖದ ಮೇಲೆ ಅವನ್ನು ಅಂದಂದೇ ಒಂದು ರೇಖೆಯಾಗಿಸಿ, ಮುಂದೆ ಬರುವ ಇನ್ನಷ್ಟನ್ನು ಆ ರೇಖೆಗಳ ಆಳಕ್ಕೆ ಇಳಿಸಿ ಸದಾ ಹಸನ್ಮುಖೀಯಾಗಿರುವ ಮಹಿಳೆಯರಿಗೇನು ನಮ್ಮಲ್ಲಿ ಕಮ್ಮಿ ಇಲ್ಲ. ಆ ಮಹಿಳೆಯ ಕಾಯಕಕ್ಕೂ, ಮುಖದಮೇಲಣ ರೇಖೆಗಳಿಗೂ ನಿವೃತ್ತಿಯೆಂಬುದೇ ಇಲ್ಲ. ಸುಖವನ್ನೇ ಕಾಣದವರು, ಸುಕ್ಕಾದ ಮುಖದ ತ್ವಚೆಯಿಂದ ದುಃಖತಪ್ತರಾಗಿ ಕಾಣಿಸುವುದೂ ಸಹಜವೇ.

ಛಾಯಾಗ್ರಾಹಕರಿಗೆ ಆ ರೀತಿಯ ಮುದುಕಿಯರನ್ನು ಕಂಡಾಗ, ಕ್ಯಾಮೆರಾದಲ್ಲಿ ಸೆರೆಹಿಡಿಯ ಬೇಕು ಅನ್ನಿಸದಿರದು. ಆಗ ಗಮನಿಸಲೇಬೇಕಾದ ಕೆಲವು ವಿಷಯಗಳನ್ನು ಅವಲೋಕಿಸೋಣ. ಮಹಿಳೆ ಪರಿಚಿತಳಾಗಿದ್ದರೆ, “ಫೋಟೋ ತೆಗೀಲಾ’ ಎಂದು ಕೇಳಿ, ಆಕೆ ಸಮ್ಮತಿಸಿದಾಗ ಮುಂದುವರಿಯುವುದು ಸುಲಭ. ಆಕೆಯ ಬದುಕಿನ ಹಿನ್ನೆಲೆ ಗೊತ್ತಿದ್ದರೆ, ಮುಖದ ಮೇಲಣ ರೇಖೆಗಳ ಹಿನ್ನೆಲೆಯೂ ತಿಳಿದಂತೆಯೇ ತಾನೆ? ಅಪರಿಚಿತ ಮಹಿಳೆಯಾದರೆ, ಆಕೆಯೊಂದಿಗೆ ನಾಲ್ಕಾರು ಮಾತಾಡಿ, ನಿಧಾನವಾಗಿ ವಿಷಯಕ್ಕೆ ಬರುವುದು ಉಚಿತ.

ಆಕೆಯ ಬದುಕು ಕಾರ್ಪಣ್ಯದಲ್ಲಿ ತೇಲುತ್ತಿದ್ದರೆ, ಛಾಯಾಗ್ರಾಹಕ ತೆಗೆಯಬಲ್ಲ ಛಾಯಾಚಿತ್ರ ಕೂಡಾ ಅದೇ ಭಾವನೆಗಳನ್ನು ಸೂಸುವಂತಿರಬೇಕು. ಆಕೆಯನ್ನು ಉಪಾಯವಾಗಿ ಸ್ವಲ್ಪ ನಗಿಸಿ, ಮಧುರವಾದ ಬೆಳಕಿನಲ್ಲಿ ಸೆರೆಹಿಡಿದರೆ, ಆಕೆಯ ವ್ಯಕ್ತಿತ್ವಕ್ಕೆ ವಿರುದ್ಧವಾದ ಚಿತ್ರ ಅದಾಗಿಬಿಡಬಹುದು. ಅದೇ, ಮಹಿಳೆಯೊಬ್ಬಳು ಸಂತಸದ ಬದುಕನ್ನು ಸವೆಸಿ, ಈಗ ಶಾಂತವಾದ ಜೀವನವನ್ನು ನಡೆಸಿಕೊಂಡು ಬರುತ್ತಿದ್ದಾಳೆ ಎಂಬ ಚಿತ್ರಣ ಮೂಡಬೇಕಿದ್ದರೆ ಮಾತ್ರ, ಆಕೆ ಹಸನ್ಮುಖೀಯಾಗಿರುವಂತೆ ಸಮಯ ಸಾಧಿಸಿ, ಮುಖದ ಮೇಲೆ ಎದುರಿಂದ ಪ್ರಕಾಶವಾದ ಬೆಳಕು ಬೀಳದಂತೆ ಎಚ್ಚರವಹಿಸಿ, ಪ್ರಧಾನ ಬೆಳಕು( Key Light ) 30 ಡಿಗ್ರಿ ಅಡ್ಡವಾಗಿ, ಆಕೆಯ ಮುಖಕ್ಕಿಂತ ಸ್ವಲ್ಪ ಮೇಲಳತೆಯಿಂದ ಓರೆಯಾಗಿ ಬಂದು ಬೀಳುವಂತೆ ನಿಯೋಜಿಸಿಕೊಳ್ಳುವುದು ಮುಖ್ಯ. ಆಗ ಮುಖದ ರೇಖೆಗಳ ರಚನಾ ವಿನ್ಯಾಸ ( Texture) ಸು#ಟವಾಗಿ ಕಾಣಿಸುತ್ತವೆ. ಆ ರೇಖೆಗಳ ಮೂರು ಆಯಾಮದ ( Three D ) ಆಳವನ್ನು ಕಾಣಿಸುವುದಾದರೆ, ಮುಖದ ಮತ್ತೂಂದು ಬದಿಯಿಂದ ಸ್ವಲ್ಪ ಕಡಿಮೆ ಪ್ರಮಾಣದ ಬೆಳಕು ಕೂಡಾ ಬಂದು ಪೂರಕವಾಗಿ ಬೀಳುವಂತೆ ನೋಡಿಕೊಳ್ಳಬೇಕು. ಆಕೆಯ ಹರ್ಷಚಿತ್ತವಾದ ಭಾವನೆಯನ್ನು ಚಿತ್ರ ನಿರೂಪಿಸಬೇಕಾಗಿರುವುದರಿಂದ, ಮುಖ್ಯ ಬೆಳಕಿನ ಆಚೆಬದಿಯ ಮುಖ, ಮೈ ಕೈ ಭಾಗಗಳು ಮತ್ತು ಚಿತ್ರದ ಹಿನ್ನೆಲೆ, ಗಾಢವಾದ ನೆರಳಿನಲ್ಲಿ ಕಡು ಕಪ್ಪಾಗಿರಬಾರದು. ಅಂತೆಯೇ, ಸಂತೋಷ ಸೂಸುವ ಭಾವನಾತ್ಮಕ ನಿರೂಪಣೆಗೆ ಪೂರಕ ಪ್ರಕಾಶ(Fill in Light ) ಮತ್ತು ಹಿನ್ನೆಲೆಯಮೇಲೆ ಕೂಡಾ ಬೀಳುವ ಬೆಳಕು (BackGround Lighting ) ಸಹಕಾರಿ. ಎರಡು ಬೆಳಕಿನ ಸನ್ನಿವೇಶಗಳಲ್ಲಿ ಸೆರೆಹಿಡಿದ ಈ ಬಗೆಯ ಹರ್ಷಚಿತ್ತರಾದ ಮಹಿಳೆಯರ ಚಿತ್ರಗಳನ್ನು ಇಲ್ಲಿ ನೋಡೋಣ. ಮೊದಲನೆಯದು, ವಿಶ್ವಮಾನ್ಯ ಕಲಾತ್ಮಕ ಛಾಯಾಚಿತ್ರಕಾರ ಶಿವಮೊಗ್ಗ ಜಿಲ್ಲೆಅಮಚಿ ಊರಿನ ಎ.ಜಿ.ಲಕ್ಷ್ಮೀನಾರಾಯಣ ಅವರು ತಮ್ಮ ಮನೆಯ ಒಳಾಂಗಣದಲ್ಲೇ ಮೇಲೆ ಸೂಚಿಸಿದ ಬೆಳಕಿನ ವ್ಯವಸ್ಥೆ ಮಾಡಿ, ಮನೆ ಕೆಲಸಮಾಡುವ ಇಳಿವಯಸ್ಸಿನ ಮಹಿಳೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿರುವುದು.

ಸದಾ ಸಂತೋಷದ ಮುಖಚರ್ಯೆ ಹಾಗೂ ಆಶಾಭರಿತ ಬದುಕು ಸಾಗಿಸುತ್ತಾ ಬಂದ ಆಕೆಯ ಬಗ್ಗೆ ಚನ್ನಾಗಿಯೇ ಬಲ್ಲವರಾದ ಲಕ್ಷ್ಮೀನಾರಾಯಣ ಅವರು, ಒಂದು ಬದಿಯಿಂದ ಓರೆಯಾಗಿ ಬೀಳುವಂತೆ ಸೂರ್ಯನ ಬೆಳಕಿನ ವ್ಯವಸ್ಥೆ ಮಾಡಿಕೊಂಡು, ಮತ್ತೂಂದು ಬದಿಯಿಂದ ಪ್ರತಿಫ‌ಲನ ಇಟ್ಟು , ಕಡು ನೆರಳಿನ ಭಾಗಗಳನ್ನು, ರೇಖೆಗಳ ಕಾಂತಿಭೇದವನ್ನು ( Contrast ) ಹತೋಟಿಗೆ ತಂದು, ಆಕೆಯ ಚಿತ್ರವನ್ನು ಚಂದಗಾಣಿಸಿದ್ದಾರೆ.

Advertisement

ಇನ್ನೊಂದು, ಲಂಬಾಣಿಯ ಚಿತ್ರ. ಇದು, ನಾನು ಹಂಪಿಯ ಬಳಿ ಬೆಳಗ್ಗೆ ರಸ್ತೆ ಬದಿಯಲ್ಲಿ ತೆಗೆದದ್ದು. ಆಕೆ ವಸ್ತುಗಳನ್ನು ಹರಡಿ ಮಾರುತ್ತಿದ್ದಳು. ಮರವೊಂದರ ಕೊಂಬೆ ಆಕೆಗೆ ನೆರಳು ನೀಡಿತ್ತು. ಆಕೆಯ ಹಿಂದೆ ಕಟ್ಟಡದ ಕಂದು ಬಣ್ಣದ ಗೋಡೆ ಇತ್ತು. ಆಚೀಚೆ ಬದಿಯಲ್ಲಿ ಇನ್ಯಾರೋ ಅಂಗಡಿ ಇಟ್ಟಿದ್ದು , ಆ ಭಾಗಗಳು ಬಿಸಿಲಿನ ಝಳಕ್ಕೆ ಮೈಯೊಡ್ಡಿದ್ದಲ್ಲದೇ, ಅಲ್ಲಿಂದ ಪ್ರತಿಫ‌ಲಿಸಿದ ಸ್ವಲ್ಪ ಬೆಳಕು ಆ ಲಂಬಾಣಿಯ ಇಕ್ಕೆಡೆಗಳನ್ನೂ ಓರೆಯಾಗಿ ಪ್ರಕಾಶಗೊಳಿಸುತ್ತಿತ್ತು. ಇದು ಆಕೆಯ ಮುಖದ ಮೇಲಿನ ಸುಕ್ಕುಗಳು ಸ್ಪುಟವಾಗಿ ಕಾಣಿಸಲು ಸಹಕಾರಿಯಾಯಿತು.

-ಕೆ.ಎಸ್‌.ರಾಜಾರಾಮ್‌

Advertisement

Udayavani is now on Telegram. Click here to join our channel and stay updated with the latest news.

Next