Advertisement

ಸೋಂಕಿತರಾದವರ ಮಾನಸಿಕ ಆರೋಗ್ಯ ಹೆಚ್ಚಳದತ್ತ ಆರೋಗ್ಯ ಇಲಾಖೆ ಒಲವು

11:55 PM Feb 08, 2022 | Team Udayavani |

ಬೆಂಗಳೂರು: ಕೋವಿಡ್‌ನಿಂದಾಗಿ ಖಿನ್ನತೆ ಸೇರಿದಂತೆ ಇತರ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತುರ್ತು ಆಪ್ತಸಮಾಲೋಚನೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕೇಂದ್ರ, ಸರಕಾರಿ ಹಾಗೂ ಖಾಸಗಿ ಮೆಡಿಕಲ್‌ ಕಾಲೇಜುಗಳ ಸಹಭಾಗಿತ್ವದಲ್ಲಿ ಆಪ್ತ ಸಮಾಲೋಚನೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.

Advertisement

ಕೋವಿಡ್‌ ಬಳಿಕ ರಾಜ್ಯದಲ್ಲಿ ಮಾಸಿಕ ಆರೋಗ್ಯ ಸಮಸ್ಯೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಇದರಿಂದ ಖಿನ್ನತೆ ಸೇರಿದಂತೆ ಇತರೆ ಮಾನಸಿಕ ಸಮಸ್ಯೆಗಳಿಗೆ ಒಳಗಾಗುವವರ ಸಂಖ್ಯೆ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ತಾಂತ್ರಿಕ ಸಮಿತಿ ನೀಡಿದ ಸಲಹೆ ಅನ್ವಯ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ಮೂರು ವಿಂಗಡನೆ
ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರನ್ನು ಮೂರು ವಿಭಾಗದಲ್ಲಿ ವಿಂಗಡಿಸಿ ಚಿಕಿತ್ಸೆ ನೀಡಲು ನಿರ್ಧರಿಸಲಾಗಿದೆ. ಅದರ ಅನ್ವಯ ಸೋಂಕಿತ ವ್ಯಕ್ತಿಯಲ್ಲಿ ಕಂಡು ಬರುವ ನೋವೋ ಸೈಕಾಲೋಜಿಕಲ್‌ ಸಮಸ್ಯೆ, ಸೋಂಕಿಗೆ ತುತ್ತಾಗುವ ಮೊದಲೇ ಮಾನಸಿಕ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಾಗೂ ಈಗಾಗಲೇ ಮಾನಸಿಕ ಸಮಸ್ಯೆಯೊಂದಿಗೆ ಬಳಲುತ್ತಿದ್ದು, ಸೋಂಕು ದೃಢಗೊಂಡ ಬಳಿಕ ಇತರ ಮಾನಸಿಕ ಅನಾರೋಗ್ಯ ಕಾಣಿಸಿಕೊಂಡವರಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಲಾಗುತ್ತದೆ.

ಆರೋಗ್ಯಾಧಿಕಾರಿಗಳಿಗೆ ಜವಾಬ್ದಾರಿ
ಆಪ್ತ ಸಮಾಲೋಚನೆ ನೀಡಲು ಎಲ್ಲ ಜಿಲ್ಲೆಗಳ ಆರೋಗ್ಯ ಇಲಾಖೆ, ಜಿಲ್ಲೆ, ತಾಲೂಕು ಮಟ್ಟದ ಮಾನಸಿಕ ಆರೋಗ್ಯಾಧಿಕಾರಿಗಳ ಸಮಿತಿ, ಸರಕಾರಿ ಹಾಗೂ ಖಾಸಗಿ ಮೆಡಿಕಲ್‌ ಕಾಲೇಜು ಸಿಬಂದಿ ಸಹಭಾಗಿತ್ವ ನೀಡಲಿದ್ದಾರೆ. ಈ ತಂಡ ಪ್ರತಿನಿತ್ಯ ಯಾರು ಯಾವ ಪ್ರದೇಶದಲ್ಲಿ ಎಷ್ಟು ಮಂದಿಗೆ ಆಪ್ತ ಸಮಾಲೋಚನೆ ಮಾಡಬೇಕು ಎನ್ನುವುದನ್ನು ನಿರ್ಧರಿಸಲಿದೆ. ಮಾನಸಿಕ ಸಮಸ್ಯೆಗೆ ಒಳಗಾದವರನ್ನು ನಿತ್ಯ ಭೇಟಿ ಮಾಡಲಿದೆ. ಇದರ ಸಂಪೂರ್ಣ ಜವಾಬ್ದಾರಿ ಆಯಾ ಜಿಲ್ಲಾ ಆರೋಗ್ಯ, ಮೆಡಿಕಲ್‌ ಕಾಲೇಜು ಹಾಗೂ ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿಗಳ ಮೇಲಿರಲಿದೆ. ಆಪ್ತ ಸಮಾಲೋಚನೆಗೆ ಒಳಗಾದ ವ್ಯಕ್ತಿಯ ಮಾಹಿತಿಯನ್ನು ದಾಖಲೀಕರಣ ಮಾಡಲಾಗುತ್ತದೆ. ಆಸ್ಪತ್ರೆಗಳಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀಡಲಾಗುವ ಎಲ್ಲ ಅಗತ್ಯ ಔಷಧ ಸರಬರಾಜಿಗೆ ಗಮನ ನೀಡಲಾಗುತ್ತಿದೆ.

ತಂತ್ರಜ್ಞಾನದ ಗೀಳು 30 ಪಟ್ಟು ಏರಿಕೆ
ಕೊವೀಡ್‌ ಒಂದನೇ ಹಾಗೂ ಎರಡನೇ ಅಲೆಯ ಸಂದರ್ಭ ಯಾವುದೇ ಕಾರಣವಿಲ್ಲದೆ ಆತಂಕಕ್ಕೆ ಒಳಗಾಗುತ್ತಿದ್ದರು. ವರ್ಕ್‌ ಫ್ರಂ ಹೋಂ ಒತ್ತಡದಿಂದ 25ರಿಂದ 35 ವಯೋಮಾನದವರು ಅತಿಯಾದ ಮದ್ಯ ಸೇವನೆ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಮೂರನೇ ಅಲೆಯಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಟೆಕ್ನಾಲಜಿ ಗೀಳು 30 ಪಟ್ಟು ಏರಿಕೆಯಾಗಿದೆ. ಖನ್ನತೆಯಿಂದ ಬಳಲುತ್ತಿರುವ ಸಂಖ್ಯೆ ಹೆಚ್ಚಾಗಿದೆ ಎಂದು ಮಣಿಪಾಲ ಆಸ್ಪತ್ರೆಯ ಕ್ಲಿನಿಕಲ್‌ ಸೈಕಾಲಜಿಸ್ಟ್‌ ಸತೀಶ್‌ ಕುಮಾರ್‌ ಹೇಳಿದ್ದಾರೆ.

Advertisement

ಸೋಂಕಿತರಿಗೆ ಹೋಂ ಐಸೊಲೇಶನ್‌ ಒಳಗಾದ ಮೊದಲ ಹಾಗೂ 3ನೇ ದಿನ ಟೆಲಿಕಾಲ್‌ ಮೂಲಕ ಸಂಪರ್ಕಿಸಲಾಗುತ್ತಿದ್ದು, ಈ ವೇಳೆಅಗತ್ಯವಿರುವವರಿಗೆ ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. ಇದರ ಹೊರತಾಗಿಯು ಮಾನಸಿಕ ಆರೋಗ್ಯದಿಂದ ಬಳಲುತ್ತಿರುವವರಿಗೆ ನೇರವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಆಪ್ತ ಸಮಾಲೋಚನೆ ಮಾಡಲಾಗುತ್ತದೆ.
-ಡಾ| ರಜನಿ ಪಿ.,
ಉಪನಿರ್ದೇಶಕಿ, ಮಾನಸಿಕ ಆರೋಗ್ಯ ವಿಭಾಗ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next