Advertisement

ಶಾಲಾರಂಭದ ದಿನವೇ ಶಿಕ್ಷಣ ಇಲಾಖೆ ನಿರುತ್ಸಾಹ

06:14 PM Aug 24, 2021 | Team Udayavani |

ಸಿಂಧನೂರು: ಕೋವಿಡ್‌ ಹೊಡೆತದಿಂದ ತತ್ತರಿಸಿದ ಇಲಾಖೆಯನ್ನು ಮತ್ತೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಯಾವುದೇ ಪೂರ್ವ ತಯಾರಿ ಕಂಡು ಬಾರದ ಹಿನ್ನೆಲೆಯಲ್ಲಿ ಶಾಲಾರಂಭದ ದಿನ ಮಾರ್ಗಸೂಚಿ ಪಾಲನೆ ಚಿತ್ರ ಸಂಗ್ರಹಕ್ಕೆ ಸೀಮಿತವಾಯಿತು.

Advertisement

ಕೋವಿಡ್‌ ನಿಯಮ ಪಾಲನೆಗೆ ಒತ್ತು ನೀಡಿದ್ದಾಗಿ ಹೇಳಲು ಪ್ರಯತ್ನಿಸಿದ ಇಲಾಖೆ ಶಾಲಾರಂಭ ಅಚ್ಚುಕಟ್ಟಾಗಿ ನಿಭಾಯಿಸದಿರುವುದು
ಬಹಿರಂಗವಾಯಿತು. ಮಕ್ಕಳ ಸಂಭ್ರಮ ಇಮ್ಮಡಿಗೊಳಿಸುವ ರಚನಾತ್ಮಕ ಕಾರ್ಯಕ್ರಮಗಳಿಂದ ಅಧಿಕಾರಿಗಳು ವಿಮುಖವಾದಂತೆ ಕಂಡು ಬಂತು. ಬಹುತೇಕ ಕಡೆಯಲ್ಲಿ ಮಕ್ಕಳೇ ಉತ್ಸಾಹದಿಂದ ಶಾಲಾ ಬ್ಯಾಗ್‌ ಹೆಗಲಿಗೇರಿಸಿಕೊಂಡು ಸ್ವಯಂ ಪ್ರೇರಿತರಾಗಿ ಬಂದರೆ, ಅವರ ಫೋಟೋ ಸಂಗ್ರಹಿಸುವುದಕ್ಕೆ ನೋಡಲ್‌ ಸಿಬ್ಬಂದಿ ಉತ್ಸಾಹ ತೋರಿದರು.

ಒಂದೇ ಕಡೆ ಚಿತ್ತ: ಶಾಲಾರಂಭದ ದಿನದ ಹಿನ್ನೆಲೆಯಲ್ಲಿ ಇಲ್ಲಿನ ಆದರ್ಶ ವಿದ್ಯಾಲಯದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದತ್ತಲೇ ಅಧಿಕಾರಿಗಳು ಗಮನ ನೆಟ್ಟರು. ಇಡೀ ತಾಲೂಕಿನ 109 ಪ್ರೌಢಶಾಲೆಗಳಲ್ಲಿ ಸ್ವಾಗತ ಸಮಾರಂಭ ಆಯೋಜಿಸುವ ಪ್ರಯತ್ನ ಮಾಡಲಿಲ್ಲ. ಅಲ್ಲಿಗೆ ನೋಡಲ್‌ ಸಿಬ್ಬಂದಿ ಕಳುಹಿಸಿ, ಒಂದಿಷ್ಟು ಕೋವಿಡ್‌ ಮಾರ್ಗಸೂಚಿ ಪಾಲನೆ ಚಿತ್ರ ಮಾತ್ರ ಸಂಗ್ರಹಿಸಿದರು. ಶಾಲಾರಂಭ ಎಂದಾಕ್ಷಣವೇ, ಮುಖ್ಯಗುರುಗಳು, ಶಿಕ್ಷಕರನ್ನು ಹುರಿದುಂಬಿಸಿ ಶಾಲೆಗೆ ಕಳುಹಿಸಿ, ಅಲ್ಲಿ ಮಕ್ಕಳಿಗಾಗಿ ಸಂಭ್ರಮದ ವಾತಾವರಣ
ಏರ್ಪಡಿಸುವ ಇಚ್ಛಾಶಕ್ತಿ ಶಿಕ್ಷಣ ಇಲಾಖೆ ತೋರಿಲ್ಲವೆಂಬುದು ಬಯಲಾಯಿತು.

ಇದನ್ನೂ ಓದಿ:ಗುರುವಿನ ಮನೆಗೆ ಹೋದ ಚಿನ್ನದ ಹುಡುಗ ಛೋಪ್ರಾ ..!

ಹಾಜರಾತಿ ಶೇ.30ರಷ್ಟು: ಪಿಯು ಕಾಲೇಜು ಹಾಗೂ ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹಾಗೂ ಹಾಜರಾತಿ ಸಂಖ್ಯೆ ಕುರಿತು ಮಾಹಿತಿ ಸಂಗ್ರಹಿಸಿದಾಗ ಶೇ.30 ಮಾತ್ರ ಹಾಜರಾತಿ ದೊರೆಯಿತು. ಖಾಸಗಿ ಶಿಕ್ಷಣ ಸಂಸ್ಥೆಗಳು ಮಾತ್ರ ಒಂದು ಹೆಜ್ಜೆ ಮುಂದಿಟ್ಟಿದ್ದವು. ಸರ್ವೋದಯ
ಶಾಲೆಯಲ್ಲಿ 123 ಮಕ್ಕಳ ದಾಖಲಾತಿ ಇದ್ದರೆ, 61 ಮಕ್ಕಳು ಹಾಜರಾಗಿದ್ದರು. ಇಂದಿರಾಪ್ರಿಯದರ್ಶಿನಿ ಶಾಲೆಯಲ್ಲಿ 63 ಮಕ್ಕಳ ಪೈಕಿ 25 ಹಾಜರಾತಿಯಿತ್ತು. ರೆಡ್ಡಿ ಅನುದಾನಿತ ಪ್ರೌಢಶಾಲೆಯಲ್ಲಿ 200ರಲ್ಲಿ 69 ಮಕ್ಕಳು ಬಂದಿದ್ದರು. ಸರ್ಕಾರಿ ಪ್ರೌಢಶಾಲೆಗಳಲ್ಲಂತು ಮಂಕು ಕವಿದಿತ್ತು. 200 ವಿದ್ಯಾರ್ಥಿಗಳಿದ್ದರೆ, ಕೆಲವರನ್ನು ಮಾತ್ರ ಸ್ವಾಗತಿಸಿ, ಶಾಲಾರಂಭ ಮಾಡಲಾಯಿತು. ತಾಲೂಕಿನ ಯಾವುದೇ ಪಿಯುಕಾಲೇಜು ಇಲ್ಲವೇ ಪ್ರೌಢಶಾಲೆಗಳಲ್ಲಿ ಶೇ.50 ಮಕ್ಕಳನ್ನು ಸೇರಿಸುವುದಕ್ಕೂ ಶಿಕ್ಷಣ ಇಲಾಖೆ ಯಶಸ್ವಿಯಾಗಲಿಲ್ಲ. ಬೇಕಾದರೆ ಬರಲಿ ಎಂಬ ಧೋರಣೆ ತಳೆದ ಪರಿಣಾಮ ಮಾಹಿತಿ ಗೊತ್ತಾದ ಕೆಲವೇ ವಿದ್ಯಾರ್ಥಿಗಳು ಮಾತ್ರ ಬಹುತೇಕ ಕಡೆ ಶಾಲಾರಂಭದ ದಿನಕ್ಕೆ ಸಾಕ್ಷಿಯಾದರು.

Advertisement

ವಿದ್ಯಾರ್ಥಿಗಳ ಹಾಜರಾತಿಯೂ ಕ್ಷೀಣ
ಸಿಂಧನೂರು ತಾಲೂಕಿನಲ್ಲಿ ಅನುದಾನಿತ, ಸರ್ಕಾರಿ ಸೇರಿದಂತೆ 109 ಪ್ರೌಢಶಾಲೆಗಳಿವೆ. ಏಳು ಪ್ರೌಢಶಾಲೆಗಳು ಶೂನ್ಯ ದಾಖಲಾತಿ ಹೊಂದಿವೆ.  9ನೇ ತರಗತಿಗೆ ದಾಖಲಾತಿ ಹೊಂದಿರುವ 6,665 ಮಕ್ಕಳ ಪೈಕಿ 2,379 ಮಕ್ಕಳು ಹಾಜರಾಗಿದ್ದರಿಂದ ಶೇ.35.50 ಯಶಸ್ಸು ಲಭಿಸಿದೆ. 10ನೇ ತರಗತಿಗೆ 6,532 ಮಕ್ಕಳು ಪ್ರವೇಶ ಪಡೆದಿದ್ದರೆ, 2,528 ಮಕ್ಕಳು ಹಾಜರಾಗಿ ಶೇ.38 ಶಾಲಾರಂಭಕ್ಕೆ ಸಾಕ್ಷಿಯಾಗಿದ್ದಾರೆ.

ರಜೆಯಲ್ಲಿ ಶಿಕ್ಷಕರು
ಪ್ರತಿ ಸರ್ಕಾರಿ ಶಾಲೆಯಲ್ಲಿ 8 ರಿಂದ 10 ಶಿಕ್ಷಕರಿದ್ದರು. ಅವರನ್ನು ಸ್ವಾಗತ ಸಮಾರಂಭಕ್ಕೆ ಸಜ್ಜುಗೊಳಿಸಲು ಶಿಕ್ಷಣ ಇಲಾಖೆ ಪ್ರಯತ್ನಮಾಡಲಿಲ್ಲ. ಬಹುತೇಕ ಕಡೆ ಸ್ವತಃ ಶಿಕ್ಷಕರೇ ಶಾಲಾರಂಭದ ದಿನ ರಜೆ ಮೇಲಿರುವುದು ಕಂಡು ಬಂತು. ಶಿಕ್ಷಣ ಇಲಾಖೆ ಸಿಬ್ಬಂದಿ ಕೋವಿಡ್‌ ಮೂಡ್‌ನ‌ಲ್ಲಿದ್ದ ಪರಿಣಾಮ ಮಕ್ಕಳಿಗೂ ಸರಿಯಾದ ಮಾಹಿತಿ ದೊರೆಯದ್ದರಿಂದ ಅವರು ಶಾಲೆಯಿಂದ ದೂರ ಉಳಿಯಬೇಕಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್‌ ಕೂಡ ಯಾವುದೇ ಮೊಬೈಲ್‌ ಕರೆ ಸ್ವೀಕರಿಸದೇ ಹೋದರು.

ಪ್ರಾರಂಭದ ದಿನವಾದ ಹಿನ್ನೆಲೆಯಲ್ಲಿ ಪಾಲಕರು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದಾರೆ. ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಮುಂಜಾಗ್ರತೆ ಕ್ರಮ ವಹಿಸಲಾಗುತ್ತಿದೆ.
-ಕೃಷ್ಣಪ್ಪ.ವೈ,
ಸಮನ್ವಯಾ ಧಿಕಾರಿಗಳು, ಶಿಕ್ಷಣ
ಇಲಾಖೆ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next