Advertisement

ಖಾಸಗಿ ಪದವಿ ಕಾಲೇಜುಗಳ ಶುಲ್ಕ ಹೆಚ್ಚಳಕ್ಕೆ ಶಿಕ್ಷಣ ಇಲಾಖೆ ಸಮ್ಮತಿ

06:45 AM Jul 28, 2018 | Team Udayavani |

ಬೆಂಗಳೂರು: “ಖಾಸಗಿ ಪದವಿ ಕಾಲೇಜುಗಳು 3 ವರ್ಷದಿಂದ ಶುಲ್ಕ ಹೆಚ್ಚಳ ಮಾಡಿಲ್ಲ. ಹೀಗಾಗಿ, ಈ ವರ್ಷ ಶೇ.30ರಷ್ಟು ಶುಲ್ಕ ಹೆಚ್ಚಳ ಮಾಡಿ ಎಂದು ಮನವಿ ಸಲ್ಲಿಸಿದ್ದವು. ಆದರೆ, ಅವರ ಜತೆ ಮಾತುಕತೆ ನಡೆಸಿ ಶೇ.8ರಷ್ಟು ಹೆಚ್ಚಿಸಲು ಒಪ್ಪಿಸಿದ್ದೇನೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ರಾಜ್ಯದ 102 ಪದವಿ ಕಾಲೇಜುಗಳಲ್ಲಿ ಕಟ್ಟಡವೇ ಇಲ್ಲ. ಕೆಲವು ಕಡೆ ಮೂಲಸೌಕರ್ಯಗಳ ಕೊರತೆಯಿದೆ. 

ಹೀಗಾಗಿ, ರಾಜ್ಯ ಸರ್ಕಾರ 250 ಕೋಟಿ ರೂ. ವಿಶೇಷ ಅನುದಾನ ನೀಡಿದ್ದು, 750 ಕೋಟಿ ರೂ.ವರೆಗೂ ವೆಚ್ಚ ಮಾಡಲು ಅವಕಾಶ ಕಲ್ಪಿಸಿದೆ. ಜತೆಗೆ ನಬಾರ್ಡ್‌ನಿಂದ 300 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ವಿಶ್ವಬ್ಯಾಂಕ್‌ ನೆರವು ಪಡೆಯಲಾಗುವುದು. ಖಾಸಗಿ ಸಂಸ್ಥೆಗಳ ಸಹಭಾಗಿತ್ವವನ್ನೂ ಪಡೆಯಲಾಗುವುದು.ವರ್ಷದಲ್ಲಿ ಕಟ್ಟಡ ಸಮೇತ ಮೂಲಸೌಕರ್ಯ ಕಲ್ಪಿಸಲಾಗುವುದು’ ಎಂದು ಹೇಳಿದರು.

ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆ ನಮ್ಮ ಮೊದಲ ಆದ್ಯತೆ. ಈ ನಿಟ್ಟಿನಲ್ಲಿ ಆಗಸ್ಟ್‌ 1 ರಿಂದ 3 ರವರೆಗೆ ಸಭೆ ನಿಗದಿಪಡಿಸಲಾಗಿದೆ. ಆ. 1ರಂದು ಉನ್ನತ ಶಿಕ್ಷಣ ಪರಿಷತ್‌ ಸಭೆ, 2ರಂದು ಕುಲಪತಿ, ಕುಲಸಚಿವರ ಸಭೆ, 3ರಂದು ಇಲಾಖೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಆ ಸಭೆಗಳಲ್ಲಿ ಸಮಗ್ರ ಮಾಹಿತಿ ಪಡೆದು ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಇತ್ತೀಚೆಗೆ ಮೈಸೂರಿನ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿದ್ದಾಗ ಜಂಟಿ ನಿರ್ದೇಶಕರು ಹಾಗೂ ಪ್ರಾಂಶುಪಾಲರ ನಡುವೆ ಹೊಂದಾಣಿಕೆ ಇಲ್ಲದಿರುವುದು ಕಂಡು ಬೇಸರವಾಯಿತು. ಇಲಾಖೆ ಅಧಿಕಾರಿಗಳಿಗೆ ಅಲ್ಲಿನ ಪರಿಸ್ಥಿತಿ ತೋರಿಸಿದೆ. ಅಲ್ಲಿ 9 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಬಹುತೇಕ ಗ್ರಾಮೀಣ ಪ್ರದೇಶದವರೇ ಹೆಚ್ಚು. ನಾಲ್ಕು ಮುಕ್ಕಾಲು ಎಕರೆ ಜಮೀನಿದ್ದು, ಕಲಾ, ವಿಜ್ಞಾನ, ವಾಣಿಜ್ಯ ವಿಭಾಗಕ್ಕೆ ಪ್ರತ್ಯೇಕ ಬ್ಲಾಕ್‌ ಹಾಗೂ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

Advertisement

ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಶೌಚಾಲಯ ಅವ್ಯವಸ್ಥೆ, ಆಡಿಟೋರಿಯಂ ಅಗತ್ಯತೆ ಕುರಿತು ಬೇಡಿಕೆ ಇಟ್ಟಿದ್ದಾರೆ. ಅಲ್ಲಿ ಬೋಧಕ ವರ್ಗ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು. ರಾಜ್ಯದಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಲ್ಯಾಪ್‌ಟಾಪ್‌ ವಿತರಣೆ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಎಲ್ಲರಿಗೂ ನೀಡುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದರು.

ರಾಜಕೀಯ ನೇಮಕಾತಿ ಕಡಿಮೆ
ವಿವಿಗಳ ಕುಲಪತಿ ನೇಮಕಾತಿ ಹಾಗೂ ಸಿಂಡಿ ಕೇಟ್‌ ಸದಸ್ಯರ ನೇಮಕಾತಿ ವಿಚಾರದಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತೇನೆ. ಸಿಂಡಿಕೇಟ್‌ ಸದಸ್ಯರ ವಿಚಾರದಲ್ಲಿ ರಾಜಕೀಯ ವಲಯದಿಂದ ನೇಮಕಾತಿ ಮಾಡುವ ಅನಿವಾರ್ಯತೆ ಎದುರಾದರೂ ಶಿಕ್ಷಣ ತಜ್ಞರಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ಮುಕ್ತ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿ ವಿಧಾನ ಪರಿಷತ್‌ನಿಂದ ಸಂದೇಶ್‌ ನಾಗರಾಜ್‌ ಹಾಗೂ ಪುಟ್ಟಣ್ಣ ಅವರನ್ನು ನೇಮಿಸಿ ನಂತರ ಸಂದೇಶ್‌ ನಾಗರಾಜ್‌ ಹೆಸರು ಕೈ ಬಿಟ್ಟು ಅಪ್ಪಾಜಿಗೌಡ ಹೆಸರು ಸೇರಿಸಲಾಗಿತ್ತು. ನಂತರ ನಿಯಮಾವಳಿಯಲ್ಲಿ ಅವಕಾಶ ಇಲ್ಲ ಎಂದು ಮತ್ತೆ ಸಂದೇಶ್‌ ನಾಗರಾಜ್‌ ಅವರನ್ನೇ ಮುಂದುವರಿಸಿದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಆ ಬಗ್ಗೆ ನನಗೆ ಮಾಹಿತಿಯೇ ಇರಲಿಲ್ಲ. ನೇಮಕದ ನಂತರ ನನ್ನ ಗಮನಕ್ಕೆ ತರಲಾಯಿತು ಎಂದು ಹೇಳಿದರು.

ಕಲಾ ವಿಭಾಗಕ್ಕೆ ಕೌಶಲ್ಯಾಭಿವೃದ್ಧಿ ಕೋರ್ಸ್‌ ಸೇರ್ಪಡೆಗೊಳಿಸಲು ತೀರ್ಮಾನಿಸಲಾಗಿದೆ. ಕೌಶಲ್ಯಾಭಿವೃದ್ಧಿ ಕೋರ್ಸ್‌ ಹೇಗಿರಬೇಕು ಎಂದು ಇನ್‌ ಫೋಸಿಸ್‌ ಹಾಗೂ ವಿಪ್ರೋದಂತಹ ಸಂಸ್ಥೆಗಳು ಹಾಗೂ ಶಿಕ್ಷಣ ತಜ್ಞರ ಜತೆ ಚರ್ಚಿಸಿ ತೀರ್ಮಾನಿಸಲಾಗುವುದು.
– ಜಿ.ಟಿ.ದೇವೇಗೌಡ, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next