Advertisement
ದೇಶದಲ್ಲೇ ಕಲಾವಿದರಿಗೆ ಅತಿ ಹೆಚ್ಚು ಅನುದಾನ ನೀಡುವ ರಾಜ್ಯ ಎಂಬ ಖ್ಯಾತಿ ಹೊಂದಿರುವ ಕರ್ನಾಟಕ ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೀಗ ಇಂಥದ್ದೊಂದು ದಿಟ್ಟ ನಿರ್ಧಾರಕ್ಕೆ ಬಂದಿದೆ. ಇನ್ನು, ಕಲಾ ಪ್ರದರ್ಶನ ಮಾಡುವ ಕಲಾ ತಂಡಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣವಾಗಿ ಕಲಾತಂಡಗಳ ಪಟ್ಟಿಯಲ್ಲಿರಲು ಅರ್ಹತೆ ಪಡೆಯಬೇಕು. ಇದನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ.
ಸರ್ಕಾರದಿಂದ ನಡೆಯುವ 27ಕ್ಕೂ ಹೆಚ್ಚು ಗಣ್ಯರ ಜಯಂತಿ ಮತ್ತು ಸ್ಥಳೀಯ ಆಸಕ್ತಿದಾಯಕ ಕಾರ್ಯಕ್ರಮಗಳಿಗೆ ವಿವಿಧ ಕಲಾತಂಡಗಳನ್ನು ಇಲಾಖೆ ಆಹ್ವಾನಿಸುತ್ತ ಬಂದಿದೆ. ಇಲ್ಲಿ ಆಯಾ ಜಿಲ್ಲೆಗಳಲ್ಲಿನ ಕೆಲವೇ ಕೆಲವು ಕಲಾ ತಂಡಗಳು ಕಾರ್ಯಕ್ರಮ ಕೊಡುತ್ತಿದ್ದವು. ಕಲಾವಿದರ ಮಾಫಿಯಾ ಇಲ್ಲಿ ಕೆಲಸ ಮಾಡುತ್ತಿತ್ತು. ಕೆಲವು ಜಿಲ್ಲೆಗಳಲ್ಲಂತೂ ಕಲಾ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದೂ ಉಂಟು. ಇದನ್ನು ಮನಗಂಡ ಸರ್ಕಾರ 30 ಜಿಲ್ಲೆಗಳಲ್ಲೂ ಅರ್ಹತೆ ಪಡೆದವರಿಗಷ್ಟೇ ಕಾರ್ಯಕ್ರಮ ನೀಡಲು ಯೋಜಿಸಿದೆ.
Related Articles
ಸದ್ಯಕ್ಕೆ ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ, ವಾರ್ತಾ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ ಪ್ರತಿನಿಧಿಗಳನ್ನು ಒಳಗೊಂಡ ಕಲಾತಂಡಗಳ ಆಯ್ಕೆ ಸಮಿತಿ ರಚಿಸಲಾಗುತ್ತದೆ. ಈ ಸಮಿತಿ ಆಯಾ ಜಿಲ್ಲೆಗಳ ವ್ಯಾಪ್ತಿಯ ಕಲಾತಂಡಗಳನ್ನು ಗುರುತಿಸಿ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಿದೆ. ನಂತರ ವಿವಿಧ ಕಲಾ ಪ್ರಕಾರದ ತಂಡಗಳು ಮತ್ತು ಕಲಾವಿದರು ಸಂದರ್ಶನಕ್ಕೆ ಹಾಜರಾಗಬೇಕು. ಆಯ್ಕೆಯಾದ ತಂಡಗಳನ್ನು ಕ್ರಮ ಸಂಖ್ಯೆಗೆ ಅನುಗುಣವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಿ, ಕನ್ನಡ ಸಂಸ್ಕೃತಿ ಇಲಾಖೆ ಕಚೇರಿಯಲ್ಲೂ ದಾಖಲಿಸಲಾಗುತ್ತದೆ. ಪಟ್ಟಿ ಸೇರಿದ ಉತ್ತಮ ತಂಡಗಳಿಗೆ ಆವರ್ತದ (ರೂಸ್ಟರ್)ಆಧಾರದ ಮೇಲೆ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಈ ಅಧಿಕಾರವನ್ನು ಸಹಾಯಕ ನಿರ್ದೇಶಕರಿಗೆ ನೀಡಲಾಗಿದೆ.
Advertisement
ಆಕಾಶವಾಣಿ ಮಾದರಿಈ ತನಕ ಧನಸಹಾಯ ಪಡೆಯಲು ಯಾವುದೇ ಕಟ್ಟಳೆಗಳು ಇರಲಿಲ್ಲ. ನೇರವಾಗಿ ಕಾರ್ಯಕ್ರಮದ ವರದಿ ಕೊಟ್ಟು ಅನುದಾನ ಪಡೆಯಬಹುದಾಗಿತ್ತು. ಕೇಂದ್ರ ಪ್ರಸಾರ ಭಾರತಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಇದೇ ಮಾದರಿ ಇದೆ. ಆಯಾ ಕಲಾ ಪ್ರಕಾರದ ತಂಡಗಳ ಸದಸ್ಯರ ಧ್ವನಿ ಪರೀಕ್ಷೆ ಮಾಡಿ, ನುರಿತ ತಜ್ಞರು ಕಲಾ ತಂಡಗಳ ಪ್ರದರ್ಶನ ನೋಡಲಾಗುತ್ತದೆ. ಅರ್ಹತೆ ಪಡೆದ ನಂತರವೇ ಆಕಾಶವಾಣಿ, ದೂರದರ್ಶನ ಕಲಾವಿದರ ಪಟ್ಟಿಯಲ್ಲಿ ಆ ಕಲಾವಿದರು ಸೇರ್ಪಡೆಯಾಗುತ್ತಾರೆ. ಆಕಾಶವಾಣಿಯಲ್ಲಿ ಉತ್ತಮ ಸಾಧನೆಗೆ ತಕ್ಕಂತೆ ಕಲಾವಿದರಿಗೆ ಎ,ಬಿ,ಸಿ, ಗ್ರೇಡ್‌ಗಳನ್ನು ಕೂಡ ನೀಡಲಾಗುತ್ತದೆ. ನಿರ್ಲಕ್ಷಿಸಿದರೆ ಪಟ್ಟಿಯಿಂದ ಔಟ್
ಕಲಾ ತಂಡಗಳ ಮುಖ್ಯಸ್ಥರಿಗೆ ಅಧಿಕೃತವಾಗಿ ವೈಯಕ್ತಿಕ ವಿವರ ನೀಡಲು ಕೋರಲಾಗಿದೆ. ಅಲ್ಲಿ ಆ ಕಲಾತಂಡಗಳ ಮುಖ್ಯಸ್ಥರು ತಮ್ಮ ಸ್ವ ವಿವರದ ಜೊತೆಗೆ ತಮ್ಮ ಸಂಗಡಿಗರ ವಿವರವನ್ನೂ ನೀಡಬೇಕು. ತಂಡದಲ್ಲಿ ಇಲ್ಲದಿರುವ ಕಲಾವಿದರನ್ನು ಬಳಸಿಕೊಂಡರೆ ಧನಸಹಾಯಕ್ಕೆ ಕತ್ತರಿ ಬೀಳಲಿದೆ. ಅಷ್ಟೇ ಅಲ್ಲ, ಇಲಾಖೆ ನಿಗದಿ ಪಡಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಹೋದರೆ ಆ ಕಲಾವಿದರ ಹೆಸರನ್ನು ಪಟ್ಟಿಯಿಂದ ಕೈ ಬಿಡುವ ಅಧಿಕಾರವನ್ನು ಸಹಾಯಕ ನಿರ್ದೇಶಕರಿಗೆ ನೀಡಲಾಗಿದೆ. ನೂತನ ಕಲಾತಂಡಗಳ ಆಯ್ಕೆಗೆ ಸರ್ಕಾರದಿಂದ ಆದೇಶ ಬಂದಿರುವುದು ನಿಜ. ಇದರಿಂದ ಸಮಾನವಾಗಿ ಎಲ್ಲಾ ಕಲಾವಿದರ ಕಲೆ ಪ್ರದರ್ಶನಕ್ಕೆ ಅವಕಾಶ ನೀಡಲು ಸಾಧ್ಯವಾಗುತ್ತದೆ.
– ಸಿದ್ದಲಿಂಗೇಶ ರಂಗಣ್ಣವರ, ಸಹಾಯಕ ನಿರ್ದೇಶಕ, ಧಾರವಾಡ. – ಬಸವರಾಜ ಹೊಂಗಲ್