Advertisement

ಕಲ್ಯಾಣ ನಾಡಲ್ಲಿ ಪಶು ಇಲಾಖೆ ಖಾಲಿ ಖಾಲಿ

05:50 PM Sep 08, 2021 | Team Udayavani |

ರಾಯಚೂರು: ಹೈದರಾಬಾದ್‌ ಕರ್ನಾಟಕ ಭಾಗದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣ ಮಾಡಿದ ಸರ್ಕಾರ, ಈ ಭಾಗದ ಬಲವರ್ಧನೆಗೆ ಮಾತ್ರ ನಿರೀಕ್ಷಿತ ಕೆಲಸ ಕಾರ್ಯ ಮಾಡುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದ ನಾಲ್ಕು ಜಿಲ್ಲೆಗಳ ಪಶು ಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯಲ್ಲಿ ಶೇ.50 ಹುದ್ದೆಗಳು ಇಂದಿಗೂ ಖಾಲಿಯಾಗಿವೆ.

Advertisement

ಹೇಳಿ ಕೇಳಿ ಈ ಭಾಗ ಬಯಲುಸೀಮೆ, ನೀರಾವರಿ ಒಳಗೊಂಡ ಪ್ರದೇಶ. ಇಲ್ಲಿ ಕೃಷಿ ಆಧಾರಿತ ಚಟುವಟಿಕೆಗಳು ಹೆಚ್ಚು. ಇಂಥ ಕಡೆ ಪಶು ಸಂಗೋಪನೆ ಸೇರಿದಂತೆ ಸರ್ಕಾರದ ಯೋಜನೆ ಪರಿಣಾಮಕಾರಿಯಾಗಿ ಜಾರಿ ಮಾಡುವ ಹೊಣೆಯೂ ಇಲಾಖೆ ಮೇಲಿರುತ್ತದೆ. ಆದರೆ, ಅಂಥ ಕೆಲಸ ಮಾಡಲು ಇಲಾಖೆಯಲ್ಲಿ ಸಿಬ್ಬಂದಿ ಇಲ್ಲವೆಂದರೆ ಏನು ಮಾಡಲು ಸಾಧ್ಯ.

ಕಲ್ಯಾಣ ಕರ್ನಾಟಕ ಭಾಗದ ಬೀದರ ಮತ್ತು ಕಲಬುರಗಿ ಜಿಲ್ಲೆಯಲ್ಲಿ ಮಾತ್ರ ಬಹುತೇಕ ಪೂರ್ಣ ಪ್ರಮಾಣದ ಸಿಬ್ಬಂದಿ ಇದ್ದಾರೆ. ಉಳಿದಂತೆ ರಾಯಚೂರು, ಯಾದಗಿರಿ, ಕೊಪ್ಪಳ, ಬಳ್ಳಾರಿ ಜಿಲ್ಲೆಯಲ್ಲಿ ಶೇ.50 ಮಾತ್ರ ಸಿಬ್ಬಂದಿ ಇದ್ದು, ಅವರಿಂದಲೇ ಸೇವೆ ಪಡೆಯಲಾಗುತ್ತಿದೆ. ವಿಶೇಷ ಸ್ಥಾನಮಾನದಡಿ ಈಗಾಗಲೇ ಪಶು ವೈದ್ಯರು ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಆಕ್ಷೇಪಣೆ ಸಲ್ಲಿಕೆಯಾದ ಕಾರಣ ಆದೇಶ ಪ್ರತಿ ನೀಡದೆ ತಡೆ ಹಿಡಿಯಲಾಗಿದೆ ಎಂದು ತಿಳಿಸುತ್ತಾರೆ ಇಲಾಖೆ ಸಿಬ್ಬಂದಿ.

ರಾಯಚೂರಲ್ಲಿ 253 ಹುದ್ದೆ ಖಾಲಿ: ರಾಯಚೂರು ಜಿಲ್ಲೆಯ ಪಶು ಇಲಾಖೆಯಲ್ಲಿ 448 ಮಂಜೂರಾದ ಹುದ್ದೆಗಳಿದ್ದು, ಅದರಲ್ಲಿ ಕೇವಲ 195 ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂದರೆ ಬರೋಬ್ಬರಿ 253 ಹುದ್ದೆಗಳು ಖಾಲಿ ಇವೆ. ಜಿಲ್ಲೆಯಲ್ಲಿ 3.57 ಲಕ್ಷ ದನ ಕರುಗಳಿದ್ದರೆ, 9.40 ಲಕ್ಷ ಕುರಿ, ಮೇಕೆಗಳಿಗೆ 107 ಪಶು ಆರೋಗ್ಯ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಎರಡು ಉಪ ನಿರ್ದೇಶಕರ ಹುದ್ದೆಗಳಿದ್ದು, ಅದರಲ್ಲಿ ಒಂದು ಖಾಲಿ ಇದೆ. 6 ಮುಖ್ಯ ಪಶು ವೈದ್ಯಾಧಿಕಾರಿಗಳಲ್ಲಿ 2 ಹುದ್ದೆ ಖಾಲಿ ಇವೆ.

84 ಪಶು ವೈದ್ಯಾಧಿಕಾರಿ ಹುದ್ದೆಗಳಲ್ಲಿ 49 ಖಾಲಿ ಇವೆ. 23 ಜಾನುವಾರು ಅಧಿಕಾರಿಗಳಲ್ಲಿ 12 ಹುದ್ದೆ ಖಾಲಿ ಇವೆ. ಇನ್ನೂ 32 ಹಿರಿಯ ಇನ್ಸ್‌ಪೆಕ್ಟರ್‌ ಹುದ್ದೆಗಳಲ್ಲಿ 3 ಮಾತ್ರ ಖಾಲಿ ಇದ್ದರೆ, 47 ಇನ್ಸ್‌ಪೆಕ್ಟರ್‌ ಹುದ್ದೆಗಳಲ್ಲಿ 9 ಖಾಲಿ ಇವೆ. 43 ಪಶು ವೈದ್ಯ ಸಹಾಯಕ ಹುದ್ದೆಗಳಲ್ಲಿ 27 ಖಾಲಿ ಇವೆ. ಇನ್ನೂ 184 ಡಿ ಗ್ರೂಪ್‌ ಹುದ್ದೆಗಳಲ್ಲಿ 142 ಖಾಲಿ ಇವೆ. ಸದ್ಯಕ್ಕೆ 72 ಹುದ್ದೆ ಗುತ್ತಿಗೆ ಆಧಾರದಡಿ ನಿರ್ವಹಿಸಲಾಗುತ್ತಿದೆ.

Advertisement

ಜಂಟಿ ಕಚೇರಿ ಸ್ಥಳಾಂತರ ವಿವಾದ
ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಶು ಇಲಾಖೆಯವಿಭಾಗೀಯಕಚೇರಿರಾಯಚೂರಿನಲ್ಲಿ ಸ್ಥಾಪಿಸಲಾಗಿದೆ. ಆದರೆ, ಈಗ ಈ ಕಚೇರಿಯನ್ನು ಕಲಬುರಗಿ ಜಿಲ್ಲೆಗೆ ಸ್ಥಳಾಂತರಿಸಲಾಗುತ್ತಿದೆ ಎಂಬ ಗುಮಾನಿ ಇದೆ. ಆದರೆ, ಈ ನಿರ್ಧಾರ ಎಷ್ಟರ ಮಟ್ಟಿಗೆ ಸತ್ಯ ಎನ್ನುವ ಬಗ್ಗೆ ಇಲಾಖೆ ಅಧಿಕಾರಿಗಳ ಬಗ್ಗೆಯೇ ಮಾಹಿತಿ ಇಲ್ಲ. ಈ ನಿರ್ಧಾರಕ್ಕೆ ಈಗಾಗಲೇ ವಿರೋಧ ಕೂಡ ವ್ಯಕ್ತವಾಗುತ್ತಿದೆ. ಅದಕ್ಕೆ ಕಾರಣವೂ ಇದೆ.

ರಾಯಚೂರು ಜಿಲ್ಲೆಗೆ ಕಲ್ಯಾಣ ಕರ್ನಾಟಕ ಭಾಗದ ಹೃದಯ ಭಾಗದಲ್ಲಿದೆ. ಬಳ್ಳಾರಿ, ಕೊಪ್ಪಳ, ಯಾದಗಿರಿ ಜಿಲ್ಲೆಗಳಿಗೆ ಹೆಚ್ಚು ಕಡಿಮೆ ಒಂದೇ ಅಂತರದ ದೂರದಲ್ಲಿದೆ. ಕಲಬುರಗಿ ಜಿಲ್ಲೆಗೂ ಹೋಗಿ ಬರಲು ರೈಲುಗಳ ಸೌಲಭ್ಯವಿದೆ. ಬೀದರ ಜಿಲ್ಲೆಗೆ ಮಾತ್ರ ದೂರವಿದೆ. ಒಂದು ವೇಳೆ ಕಲಬುರಗಿ ಜಿಲ್ಲೆಗೆ ಸ್ಥಳಾಂತರ ಮಾಡಿದರೆ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗೆ ತುಂಬಾ ದೂರವಾಗಲಿದೆ.

ಈ ಕಾರಣಕ್ಕೆ ಈ ಕಚೇರಿ ರಾಯಚೂರಿನಲ್ಲಿ ಉಳಿಯುವುದು ಸೂಕ್ತ ಎಂಬುದು ಜಿಲ್ಲೆಯ ಜನರ ವಾದ. ಇನ್ನೂ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ನಲ್ಲಿ ವೀರ್ಯ ಉತ್ಪಾದನಾ ಮತ್ತು ವಿತರಣಾ ಕೇಂದ್ರ, ಕುರಿಕುಪ್ಪೆ ಕೇಂದ್ರಗಳಿವೆ. ಬಳ್ಳಾರಿಯಲ್ಲಿ ರೈತರ ಮತ್ತು ಸಿಬ್ಬಂದಿ ತರಬೇತಿ ಕೇಂದ್ರವಿದ್ದು, ಇಲಾಖೆ ವ್ಯವಹಾರಗಳಿದ್ದು, ಅನುಕೂಲವಿದೆ. ಒಂದು ವೇಳೆ ಸ್ಥಳಾಂತರ ಮಾಡಿದ್ದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.

ಸಚಿವರಿಗೆ ಬೇಕಿದೆ ಇಚಾಶಕ್ತಿ 
ವಿಪರ್ಯಾಸ ಎಂದರೆ  ಪಶುಇಲಾಖೆ ಸಚಿವ ಪ್ರಭುಚವ್ಹಾಣ ಕೂಡ ಕಲ್ಯಾಣ ಕರ್ನಾಟಕ ಜಿಲ್ಲೆಯವರು. ಅವರೇ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕ ಭಾಗದಲ್ಲೇ ಸಿಬ್ಬಂದಿ ಕೊರತೆ ಕಾಡುತ್ತಿದೆ. ಕಾಕತಾಳಿಯವೋ, ತವರು ಜಿಲ್ಲೆಯ ಮೇಲಿನ ವ್ಯಾಮೋಹವೋ ಬೀದರ ಜಿಲ್ಲೆಯಲ್ಲಿ ಮಾತ್ರ ಪಶು ಇಲಾಖೆ ಪೂರ್ಣಪ್ರಮಾಣದ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ವಿಭಾಗೀಯ ಕೇಂದ್ರ ಎಂಬ ಕಾರಣಕ್ಕೆ ಕಲಬುರಗಿಗೂ ಸಿಬ್ಬಂದಿ ಕೊರತೆ ಇಲ್ಲ. ಆದರೆ, ಕುಂತಿ ಮಕ್ಕಳಿಗೆ ಪಾಲಿಲ್ಲ ಎನ್ನುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿದ್ದರೂ‌ ಉಳಿದ ಜಿಲ್ಲೆಗಳಿಗೂ ಮಾತ್ರ ಸಚಿವರ ಕೃಪೆ ಇಲ್ಲ. ಇನ್ನಾದರೂ ಈ ಭಾಗ ಎದುರಿಸುತ್ತಿರುವ ಸಮಸ್ಯೆ
ನಿವಾರಣೆಗೆ ಸಚಿವರು ಇಚ್ಛಾಶಕ್ತಿ ತೋರಬೇಕಿದೆ.

ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಪೈಕಿ ನಾಲ್ಕು ಜಿಲ್ಲೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಶೇ.50ಕ್ಕಿಂತ ಕಡಿಮೆ ಸಿಬ್ಬಂದಿ ಇರುವುದು ನಿಜ. 371ಜೆ ವಿಶೇಷ ಸ್ಥಾನಮಾನದಡಿ ಪಶು ವೈದ್ಯರು ಸೇರಿ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆದಿದೆ. ಆದೇಶ ನೀಡುವುದೊಂದೇ ಬಾಕಿ. ಬಹುಶಃ ಜಿಲ್ಲೆಗೆ 15-20 ವೈದ್ಯರನ್ನು ನೀಡುವ ನಿರೀಕ್ಷೆ ಇದೆ. ಪಶು ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸ್ಥಳಾಂತರದ ಕುರಿತು ನಮಗೆ ಸರ್ಕಾರದ ಯಾವುದೇ ಆದೇಶವಾಗಲಿ,
ಸುತ್ತೋಲೆಯಾಗಲಿ ಬಂದಿಲ್ಲ.
ಡಾ| ಶಿವಣ್ಣ,
ಜಂಟಿ ನಿರ್ದೇಶಕ, ಪಶು ಇಲಾಖೆ

*ಸಿದ್ಧಯ್ಯಸ್ವಾಮಿ ಕುಕುನೂರು

Advertisement

Udayavani is now on Telegram. Click here to join our channel and stay updated with the latest news.

Next