Advertisement

ಗ್ರಾಮ ಸೇವಕರ ಹುದ್ದೆ ಖಾಲಿ ಖಾಲಿ!

05:39 PM Feb 15, 2022 | Shwetha M |

ಹೂವಿನಹಿಪ್ಪರಗಿ: ರೈತರಿಗಾಗಿ ಸರ್ಕಾರ ಜಾರಿ ಮಾಡಿದ ಕೃಷಿ ಇಲಾಖೆ ವಿವಿಧ ಯೋಜನೆ ಅನುಷ್ಠಾನದ ಮೇಲುಸ್ತುವಾರಿ ಹೊತ್ತು ಕಾರ್ಯನಿವಹಿಸುವ ಹಾಗೂ ರೈತರಿಗೆ ನೇರವಾಗಿ ಸಂಪರ್ಕದಲ್ಲಿರುವ ಸಹಾಯಕ ಕೃಷಿ ಅಧಿಕಾರಿ (ಗ್ರಾಮ ಸೇವಕ) ಇಲ್ಲದೇ ಹೂವಿನಹಿಪ್ಪರಗಿ ಹೋಬಳಿ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

Advertisement

ಬಸವನಬಾಗೇವಾಡಿ ತಾಲೂಕಿನಲ್ಲಿ ಹೂವಿನಹಿಪ್ಪರಗಿ ಹೋಬಳಿ ಅತಿ ದೊಡ್ಡದಿದೆ. ಸದರ ಹೋಬಳಿ ವ್ಯಾಪ್ತಿಯಲ್ಲಿ ಎಂಟು ಗ್ರಾಪಂನ 23 ಗ್ರಾಮಗಳನ್ನು ಒಳಗೊಂಡಿದೆ. ಹೂವಿನಹಿಪ್ಪರಗಿ ರೈತ ಸಂಪರ್ಕ ಕಾರ್ಯಾಲಯಕ್ಕೆ ದಿನಾಲು ನೂರಾರು ರೈತರು ಸರ್ಕಾರಿ ಸೌಲಭ್ಯ ಪಡೆಯಲು ಬರುತ್ತಾರೆ. ಗ್ರಾಮ ಸೇವಕರು ಇಲ್ಲದ್ದು ಕಂಡು ರೈತರು ಬರಿಗೈಯಿಂದ ಬಂದ ದಾರಿ ಹಿಡಿಯುವಂತಾಗಿದೆ. ಇಲ್ಲಿ ಕಾರ್ಯನಿರ್ವಸುತ್ತಿದ್ದ ಸಹಾಯಕ ಕೃಷಿ ಅಧಿಕಾರಿಗಳು ಒಬ್ಬರ ನಂತರ ಒಬ್ಬರಂತೆ ನಿವೃತ್ತರಾಗಿದ್ದಾರೆ.

ಕಳೆದ ಒಂದೆರಡು ವರ್ಷದಿಂದ ಇಲಾಖೆಯಲ್ಲಿ ಅಧಿಕಾರಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಇಂದು ಯಾರೂ ಇಲ್ಲದ ಸ್ಥಿತಿ ಬಂದಿದೆ. ರೈತರಿಗೆ ಇಷ್ಟೊಂದು ತೊಂದರೆಯಿದ್ದರೂ ಕೂಡಾ ಸರ್ಕಾರ ಹಾಗೂ ಸ್ಥಳೀಯ ಜನ ಪತಿನಿಧಿಗಳು ಕಂಡು ಕಾಣದಂತೆ ಇರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕೈಗೂಡದ ರೈತ ಮಿತ್ರ ಹುದ್ದೆ

ಸರ್ಕಾರ ನೂತನವಾಗಿ ಸೃಷ್ಟಿಸಲಿರುವ ಗ್ರಾಪಂಗೆ ಸ್ಥಳೀಯ ಹಂತದಲ್ಲಿ ರೈತರಿಗೆ ಅನಕೂಲದ ದೃಷ್ಟಿಯಿಂದ ತಾತ್ಕಾಲಿಕ ರೈತ ಮಿತ್ರ ಹುದ್ದೆಯನ್ನು ಸೃಷ್ಟಿಸಬೇಕು ಎಂಬ ಯೋಜನೆಯೂ ಸರ್ಕಾರದ ಮಟ್ಟದಲ್ಲಿದೆ. ಆದರೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆಯಬೇಕು ಅಂದರೆ ಮಾತ್ರ ರೈತ ಮಿತ್ರ, ರೈತರಿಗೆ ಮಿತ್ರನಾಗಿ ವರ್ತಿಸಿ ರೈತರ ಕೆಲಸಗಳು ಸ್ಥಳೀಯ ಮಟ್ಟದಲ್ಲಿ ಈಡೇರಲು ಸಾಧ್ಯ. ಅದು ಏನೇ ಆಗಲಿ ಸರ್ಕಾರ ಮತ್ತು ಕೃಷಿ ಇಲಾಖೆ ಆದಷ್ಟು ಬೇಗನೆ ಕೃಷಿ ಇಲಾಖೆಯಲ್ಲಿರುವ ಖಾಲಿ ಹುದ್ದೆಯನ್ನು ಭರ್ತಿ ಮಾಡಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.

Advertisement

ಪ್ರಸ್ತುತವಾಗಿ ಕಾರ್ಯಾನಿರ್ವಹಿಸುವ ಸಹಾಯಕ ಕೃಷಿ ಅಧಿಕಾರಿಗಳಿಗೆ ಬಡ್ತಿ ನೀಡಿ ಅವರನ್ನು ಕೃಷಿ ಅಧಿಕಾರಿಗಳೆಂದು ನೇಮಕ ಮಾಡಿ ಬೇರೆ ಕಡೆಗೆ ವರ್ಗಾಯಿಸಲಾಗಿದೆ. ಕೆಲ ಅಧಿಕಾರಿಗಳು ಸೇವೆಯಿಂದ ನಿವೃತ್ತಿಯಾಗಿದ್ದರಿಂದ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆ ಖಾಲಿಯಿವೆ. ಸರ್ಕಾರ ಹೊಸದಾಗಿ ನೇಮಕ ಮಾಡಬೇಕು. ಇಲ್ಲವೇ ಬೇರೆ ಕಡೆಯಿಂದ ವರ್ಗಾವಣೆ ಮಾಡಿದರೆ ಇಲ್ಲಿ ಈ ಕೊರತೆ ನೀಗಿಸಬಹುದು. ಎಂ.ಎಚ್‌. -ಯರಝರಿ, ಕೃಷಿ ಅಧಿಕಾರಿ, ಬಸವನಬಾಗೇವಾಡಿ

ಕೃಷಿ ಸಹಾಯಕ ಅಧಿಕಾರಿಗಳ ಹುದ್ದೆಗಳು ಖಾಲಿಯಿದ್ದು ಸರ್ಕಾರದ ಗಮನಕ್ಕಿದೆ. ಈ ವಿಷಯವಾಗಿ ಸಚಿವರ ಸಭೆಯಲ್ಲಿ ಹಲವು ಬಾರಿ ಚರ್ಚೆಗೆ ಬಂದಿದೆ. ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದು ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಿದ ನಂತರವೇ ಇದು ಸರಿಯಾಗಲಿದೆ. -ರಾಜಶೇಖರ ವಿಲಿಯಮ್ಸ್‌, ಜಿಲ್ಲಾ ಕೃಷಿ ಅಧಿಕಾರಿ, ವಿಜಯಪುರ

ಕೃಷಿ ಇಲಾಖೆ ರೈತ ವಿರೋಧಿಯಂತೆ ವರ್ತಿಸುತ್ತಿದೆ. ಬೆಳೆ ಹಾನಿಯಾದ ಹಲವು ದಿನಗಳು ಕಳೆದು ಅದರ ಬಗ್ಗೆ ವರದಿಯಾದರು ಈವರೆಗೆ ಸರ್ಕಾರ ಹಾಗೂ ಜನ ಪತ್ರಿನಿಧಿಗಳು ತಲೆ ಕೆಡಿಸಿಕೊಂಡಿಲ್ಲ. ದ್ರಾಕ್ಷಿ ಸೇರಿ ಇತರೆ ಬೆಳೆಗಳ ವಿಮೆ ಮಂಜೂರು ಮಾಡಿ ರೈತರ ಹಿತ ಕಾಪಾಡಬೇಕು. ಕೃಷಿ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಶೀಘ್ರ ನೇಮಕ ಮಾಡಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು. -ರಾಜುಗೌಡ ಪಾಟೀಲ, ಜೆಡಿಎಸ್‌ ಧುರೀಣ, ದೇವರಹಿಪ್ಪರಗಿ ಕ್ಷೇತ್ರ

-ದಯಾನಂದ ಬಾಗೇವಾಡಿ

Advertisement

Udayavani is now on Telegram. Click here to join our channel and stay updated with the latest news.

Next