ಕೆ.ಆರ್.ನಗರ: ಎರಡು ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯು ಹದಗೆಟ್ಟಿದ್ದು, ಉಪಯೋಗಕ್ಕೆ ಬಾರದಂತಹ ಸ್ಥಿತಿ ನಿರ್ಮಾಣವಾಗಿದ್ದರೂ ಇದನ್ನು ಅಭಿವೃದ್ಧಿ ಪಡಿಸಲು ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ನಿರ್ಲಕ್ಷ್ಯವಹಿಸಿದ್ದಾರೆ.
ಕೆ.ಆರ್.ನಗರ ತಾಲೂಕಿನಿಂದ ಪಿರಿಯಾ ಪಟ್ಟಣ ತಾಲೂಕಿಗೆ ಸಂಪರ್ಕ ಕಲ್ಪಿಸುವ ಹೊಸಕೋಟೆ-ಕೆಲ್ಲೂರು ರಸ್ತೆ ಸುಮಾರು2 ಕಿ.ಮೀ. ಉದ್ದವಿದ್ದು, ಈ ರಸ್ತೆ ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿ ಪ್ರಯಾಣಿಕರು ಹಾಗೂ ವಾಹನ ಸವಾರರು ನರಕಯಾತನೆ ಅನುಭವಿಸುವಂತಾಗಿದೆ.
ಈ ರಸ್ತೆಯು ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲೂಕಿಗೆ ಸಂಬಂಧಿಸಿದ್ದಾಗಿದ್ದು, ಎರಡೂ ತಾಲೂಕಿನ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನ ಹರಿಸುತ್ತಿಲ್ಲ. ಈ ರಸ್ತೆ ತಮಗೆ ಸಂಬಂಧಿಸಿದ್ದಲ್ಲ ಎಂದು ಅಂತರ ಕಾಯ್ದುಕೊಳ್ಳುತ್ತಿರುವುದರಿಂದ ಈ ಅವ್ಯವಸ್ಥೆ ಉಂಟಾಗಿದೆ. ಇವರುಗಳ ಈ ಧೋರಣೆಯಿಂದ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ. ಇದರಿಂದ ಎರಡೂ ತಾಲೂಕಿನ ವಾಹನ ಸವಾರರು ರೋಸಿ ಹೋಗಿದ್ದಾರೆ. ತಾಲೂಕಿನ ಹೊಸಕೋಟೆ, ನಿಜಗನಹಳ್ಳಿ, ಮಾವತ್ತೂರು ಸೇರಿದಂತೆ ಇನ್ನೂ ಹತ್ತು ಹಲವು ಗ್ರಾಮಗಳ ಜನತೆ ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಲು ಈ ರಸ್ತೆಯನ್ನೇ ಬಹುತೇಕವಾಗಿ ಅವಲಂಬಿಸಿದ್ದಾರೆ.
ಆದರೆ, ರಸ್ತೆ ತೀರಾ ಹದಗೆಟ್ಟಿದ್ದು, ಎಲ್ಲಿ ನೋಡಿದರೂ ಗುಂಡಿಗಳು ಬಿದ್ದಿರುವುದು ಕಂಡು ಬರುತ್ತದೆ. ಈ ಅವ್ಯವಸ್ಥೆಗೆ ಪ್ರತಿದಿನ ಸಾರ್ವಜನಿಕರು ಹಿಡಿಶಾಪ ಹಾಕುವುದು ಸಾಮಾನ್ಯವಾಗಿದೆ. ರಸ್ತೆಯಲ್ಲಿ ಕೆಲವು ಕಡೆ ಡಾಂಬರು ಇಲ್ಲದಂತೆ ಕಿತ್ತು ಬಂದು ಕಲ್ಲುಮಯ ರಸ್ತೆಯಾಗಿ ಮಾರ್ಪಟ್ಟಿರುವುದರಿಂದ ಹಗಲಿನ ವೇಳೆ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಮಾಡಬೇಕಿದೆ. ರಾತ್ರಿ ವೇಳೆ ಸ್ವಲ್ಪ ಮೈ ಮರೆತರೂ ಅಪಘಾತ ತಪ್ಪಿದ್ದಲ್ಲ. ಕಾಲಕಾಲಕ್ಕೆ ಇಲಾಖೆಯ ಅಭಿಯಂತರರು ಈ ರಸ್ತೆ ಹದಗೆಟ್ಟ ಸಂದರ್ಭದಲ್ಲಿ ದುರಸ್ತಿಪಡಿಸಲು ಸಕಾಲದಲ್ಲಿ ಗಮನಹರಿಸದ ಪರಿಣಾಮ ರಸ್ತೆ ಇಂತಹ ದುಸ್ಥಿತಿ ತಲುಪಿದೆ. ಕೂಡಲೇ ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಹದಗೆಟ್ಟಿರುವ ಕೆ.ಆರ್.ನಗರ ತಾಲೂಕಿನಿಂದ ಪಿರಿಯಾಪಟ್ಟಣ ತಾಲೂಕಿಗೆ ಸಂಪರ್ಕ ಕಲ್ಪಿಸುವ ಹೊಸಕೋಟೆ-ಕೆಲ್ಲೂರು ರಸ್ತೆಗೆ ಅಭಿವೃದ್ಧಿಪಡಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
-ಗೇರದಡ ನಾಗಣ್ಣ