ಬೆಂಗಳೂರು: “ಕೋರ್ಟ್‌ನ ಕಾರ್ಯ ನಿರ್ವಹಣೆಯಲ್ಲಿ ಗುಪ್ತಚರ ಇಲಾಖೆಯ ಹಸ್ತಕ್ಷೇಪವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸರ್ಕಾರ ಇಂತಹದ್ದನ್ನು ಸಮರ್ಥಿಸಿಕೊಂಡರೆ ನ್ಯಾಯಾಲಯದಿಂದ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಎಚ್ಚರಿಕೆ ನೀಡಿದೆ. ಅಲ್ಲದೆ, ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ಸಮಗ್ರ ತನಿಖೆ ನಡೆಸಿ, ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ರಾಜ್ಯ ಪೊಲೀಸ್ ಮಹಾನಿರ್ದೇ ಶಕರಿಗೆ ಹೈಕೋರ್ಟ್ ಆದೇಶ ನೀಡಿದೆ. ಪ್ರಕರಣದ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿದೆ.
ರಾಜ್ಯದಲ್ಲಿನ ಬರ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗೋಶಾಲೆ ತೆರೆಯುವ, ಮೇವು ಪೂರೈಸುವ ಹಾಗೂ ಜಾನುವಾರುಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದ ಎ.ಮಲ್ಲಿಕಾರ್ಜುನ ಹಾಗೂ ಹೈಕೋರ್ಟ್ ಕಾನೂನು ಸೇವಾ ಸಮಿತಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ್ ಹಾಗೂ ನ್ಯಾ.ಮೊಹಮ್ಮದ್ ನವಾಜ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಸರ್ಕಾರಕ್ಕೆ ಈ ಎಚ್ಚರಿಕೆ ನೀಡಿತು.
ವಿಚಾರಣೆ ವೇಳೆ ಅರ್ಜಿದಾರ ಎ.ಮಲ್ಲಿಕಾರ್ಜುನ ಅವರು ಮಧ್ಯಂತರ ಅರ್ಜಿ ಸಲ್ಲಿಸಿ, ತಾವು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಬೇಹುಗಾರಿಕೆ ನಡೆಸುತ್ತಿರುವ ಗುಪ್ತಚರ ಇಲಾಖೆಯ ಅಧಿಕಾರಿಗಳು, ತಮಗೆ ಫೋನ್ ಕರೆ ಮಾಡಿ ಮಾಹಿತಿ ಕೇಳುತ್ತಿದ್ದಾರೆ ಎಂದು ಆರೋಪಿಸಿದರು. ಈ ಕುರಿತ ಮೊಬೈಲ್ ಸಂಭಾಷಣೆಯ ಸಿಡಿ, ಮೊಬೈಲ್ ಸಂಖ್ಯೆ ಹಾಗೂ ಇತರ ದಾಖಲೆಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಪೀಠ, ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದವರನ್ನು ಗುಪ್ತಚರ ಇಲಾಖೆಯ ಅಧಿಕಾರಿಗಳು ವಿಚಾರಿಸುವುದು ಶುದ್ಧ ತಪ್ಪು. ಅದರ ಅವಶ್ಯಕತೆ ಅವರಿಗೇನಿದೆ. ಮಾಹಿತಿ ಬೇಕಿದ್ದರೆ ಸರ್ಕಾರದ ಅಧಿಕಾರಿಗಳಿಂದ ಪಡೆದುಕೊಳ್ಳಲಿ. ಅದನ್ನು ಬಿಟ್ಟು ಅರ್ಜಿದಾರರನ್ನು ಕೇಳುವುದು ಸರಿಯಲ್ಲ. ಇದು ಕೋರ್ಟ್‌ನ ಕಾರ್ಯ ನಿರ್ವಹಣೆಯಲ್ಲಿ ನೇರ ಹಸ್ತಕ್ಷೇಪ ಮಾಡಿದಂತೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಹೇಳಿತು.
ಈ ವೇಳೆ, ಸರ್ಕಾರದ ಪರ ವಕೀಲರು ಮೊಬೈಲ್ ಸಂಭಾಷಣೆ ಪರಿಶೀಲಿಸಿದ ಬಳಿಕ ತನಿಖೆ ಬಗ್ಗೆ ಪರಿಶೀಲಿಸಿಬಹುದು. ಅಲ್ಲಿಯವರೆಗೆ ಈ ವಿಷಯವನ್ನು ತಡೆ ಹಿಡಿಯಬೇಕು ಎಂದು ಮನವಿ ಮಾಡಿದರು. ಇದಕ್ಕೆ ಕೋಪಗೊಂಡ ಮುಖ್ಯ ನ್ಯಾಯಮೂರ್ತಿಗಳು, ಸರ್ಕಾರ ಇಂತಹದ್ದನ್ನು ಸಮರ್ಥಿಸಿಕೊಳ್ಳುವುದಾದರೆ ನ್ಯಾಯಾಲಯದಿಂದ ಭಾರಿ ಪರಿಣಾಮ ಎದುರಿಸಬೇಕಾಗುತ್ತದೆ. ತನಿಖೆ ನಡೆದು ಸತ್ಯಾಂಶ ಹೊರ ಬರಲಿ. ಒಂದೊಮ್ಮೆ ಅರ್ಜಿದಾರರ ಆರೋಪಗಳು ನಿಜವಾದರೆ ಅದು ಬಹಳ ಗಂಭೀರ ವಿಚಾರ. ಆಕಸ್ಮಾತ್ ಸುಳ್ಳಾದರೆ ಅದು ಇನ್ನಷ್ಟು ಗಂಭೀರ ವಿಚಾರವಾಗಲಿದೆ ಎಂದರು.