ಕುಂದಗೋಳ: ಬಡವರಿಗೆ ಮನೆ ನಿರ್ಮಿಸಿ ಆಶ್ರಯ ನೀಡುವ ಮೂಲಕ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದು, ಕೆಲವರು ಚುನಾವಣೆ ಹತ್ತಿರವಾಗುತ್ತಿದ್ದಂತೆ ಮನೆಗಳನ್ನು ಕೆಡವಿ ಮನಸ್ಸುಗಳನ್ನು ಒಡೆದು ರಾಜಕಾರಣ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಶಾಸಕ ಸಿ.ಎಸ್. ಶಿವಳ್ಳಿ ಕಿಡಿಕಾರಿದರು.
ಪಟ್ಟಣದ ಕೋರ್ಟ್ ಸರ್ಕಲ್ ನಲ್ಲಿ ಜೈ ಕರ್ನಾಟಕ ಟಿಪ್ಪು ಸುಲ್ತಾನ್ ಯಂಗ್ ಕಮಿಟಿ ಹಾಗೂ ಅಂಜುಮನ್ ಕಮಿಟಿಯವರು ಹಮ್ಮಿಕೊಂಡಿದ್ದ ಟಿಪ್ಪು ಸುಲ್ತಾನ್ ಉತ್ಸವ ಹಾಗೂ ಡಾ| ಎಪಿಜೆ ಅಬ್ದುಲ್ ಜನ್ಮದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದೇಶಕ್ಕೆ ಟಿಪ್ಪು ಸುಲ್ತಾನ್ ಕೊಡುಗೆ ಅಪಾರವಾಗಿದೆ.
ಟಿಪ್ಪು ಸ್ಮಾರಕ ನಿರ್ಮಾಣ ತಡೆ ಹೋರಾಟದ ನೆಪದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ನಿಜ ಹಾವುಗಳನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿದ್ದೇನೆ. ಇಂತಹ ಕೊಳಕು ಹಾವುಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕಾರ್ಯಕರ್ತರಿಗೆ ಯಾವುದೇ ಹಾವು ಮುಟ್ಟದಂತೆ ದಿನದ 24 ಗಂಟೆ ಕಾಲ ಗರುಡನಂತೆ ಕಾಯುತ್ತೇನೆ.
ಇಂದಿನಿಂದಲೇ ನಾನು ರಾಜಕೀಯ ರಣತಂತ್ರವನ್ನು ಸವಾಲಾಗಿ ಸ್ವೀಕರಿಸಿ ಪ್ರತಿ ಮನೆ ಬಾಗಿಲು ತಲುಪಿ ಅವರ ಮನಸ್ಸಿನಲ್ಲಿ ಉಳಿದು ಅವರು ನೀಡುವ ತೀರ್ಪಿಗೆ ತಲೆ ಬಾಗುತ್ತೇನೆ ಎಂದರು. ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎ.ಎಂ. ಹಿಂಡಸಗೇರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಈ ಕಾರ್ಯ ಹಮ್ಮಿಕೊಂಡಿರುವುದು ತಾಕತ್ತನ್ನು ತೋರಿಸುತ್ತದೆ.
ಹುಬ್ಬಳ್ಳಿಯಲ್ಲಿ ಮಾಡದ ಕಾರ್ಯ ನೀವು ಮಾಡುತ್ತಿರುವುದು ಶ್ಲಾಘನೀಯ. ಈ ದೇಶಕ್ಕೆ ಕಾಂಗ್ರೆಸ್ ಪಕ್ಷದ ಸೇವೆ ಅಪಾರವಾಗಿದ್ದು, ನಾವು ಮಾಡಿದರೆ ದೇಶದ್ರೋಹ ಅವರು ಮಾಡಿದರೆ ದೇಶ ಪ್ರೇಮ ಎಂದು ಬಿಂಬಿಸುತ್ತಾರೆ. ನಾವು ಈ ದೇಶದಲ್ಲಿಯೇ ಪ್ರಾಣ ತ್ಯಾಗ ಮಾಡುತ್ತೇವೆ ಎಂದು ಹೇಳಿದರು.
ಶ್ರೀನಿವಾಸ ಮಾನೆ, ರಿಜ್ವಾನ್ ಅರ್ಷದ್, ಅನಿಲಕುಮಾರ ಪಾಟೀಲ, ಎಚ್.ವಿ. ಮಾಡಳ್ಳಿ ಮಾತನಾಡಿದರು. ಮೌಲಾನಾ ಸೈಯದ ನಿಸಾರಹ್ಮದ ಚಘನ ಸಾನ್ನಿಧ್ಯ ವಹಿಸಿದ್ದರು. ಪಪಂ ಅಧ್ಯಕ್ಷ ಅಜೀಜ ಕ್ಯಾಲಕೊಂಡ, ಜಿಪಂ ಸದಸ್ಯ ಉಮೇಶ ಹೇಬಸೂರ ಹಾಗೂ ಅರವಿಂದ ಕಟಗಿ, ಅಲ್ತಾಫ ಹಳ್ಳೂರ,
-ಬಸವರಾಜ ವಟವಟಿ, ಮಲ್ಲಿಕಾರ್ಜುನ ಕಿರೇಸೂರ, ಮೆಹಬೂಬ ಬೇಫಾರಿ, ದಯಾನಂದ ಕುಂದೂರ, ಎ.ಬಿ. ಉಪ್ಪಿನ, ವೆಂಕನಗೌಡ ಪೊಲೀಸ್ ಪಾಟೀಲ, ಸಕ್ರು ಲಮಾಣಿ, ಸಿದ್ದಪ್ಪ ಚೂರಿ, ರಾಯೆಸಾಬ ಕಳ್ಳಮನಿ, ಸಲೀಂ ಕ್ಯಾಲಕೊಂಡ, ಖಯಿಮ ನಾಲಬಂದ, ಹಮೀದ ಕೊಪ್ಪದ, ಸಿದ್ದಪ್ಪ ಹುಣಸಣ್ಣವರ ಇತರರಿದ್ದರು.