Advertisement

ಸಿಎಂಗೆ ಹಿಡಿದ ಭೂತ ಬಿಡಿಸಬೇಕು: ದೊಡ್ಡರಂಗೇಗೌಡ

12:44 AM May 06, 2019 | Lakshmi GovindaRaj |

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿ ಆರಂಭಿಸುವ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಭೂತಹಿಡಿದಿದೆ. ಅದನ್ನು ಬಿಡಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಕವಿ ದೊಡ್ಡರಂಗೇಗೌಡ ಹೇಳಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು 105ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಕನ್ನಡ ಸಾಹಿತ್ಯ ಪರಿಷತು ¤-ನಾಡಿನ ಸಾಂಸ್ಕೃತಿಕ ಸಂಪತ್ತು’ ಎಂಬ ವಿಷಯವಾಗಿ ಮಾತನಾಡಿದ ಅವರು, ಕನ್ನಡ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ವಿಚಾರವಾಗಿ ಮುಖ್ಯಮಂತ್ರಿಗಳು ಸರಿಯಾದ ನಿಲುವನ್ನು ಪ್ರಕಟಿಸಿದ್ದಾರೆ ಎಂದು ನನಗನಿಸುವುದಿಲ್ಲ ಎಂದರು.

ಇಂಗ್ಲಿಷ್‌ನ್ನು ಓದಬೇಡಿ ಅಥವಾ ಬರೆಯಬೇಡಿ ಎಂದು ಯಾರು ಹೇಳುವುದಿಲ್ಲ. ಆದರೆ, ಯಾವುದೇ ಇಂಗ್ಲಿಷ್‌ ಶಾಲೆಯ ಮಟ್ಟಕ್ಕೆ ಕನ್ನಡ ಶಾಲೆ ಬಾಳಿ ಬದುಕಬೇಕು. ಇತರ ಶಾಲೆಗಳಿಗೆ ಸಿಗುವಂತ ಸೌಲಭ್ಯಗಳು ಕನ್ನಡ ಶಾಲೆಗಳಿಗೂ ಸಿಗಬೇಕು. ತಾತ್ಸರ ಮನೋಭಾವನೆ ಇರಬಾರದು ಎಂದು ಹೇಳಿದರು.

ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಲಿ: ಕನ್ನಡ ಸಾಹಿತ್ಯ ಪರಿಷತ್ತಿನ ಬೇರುಗಳು ಆಳವಾಗಿವೆ. ಇದಕ್ಕೆ ದೊಡ್ಡ ಪರಂಪರೆ ಇದೆ. ಇಂತಹ ಪರಿಷತ್ತು ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಬೇಕು. ಆಗ ಮಾತ್ರ ಯಾರ ಹಂಗೂ ಇಲ್ಲದೆ, ಯಾರನ್ನೂ ಒಲೈಕೆ ಮಾಡದೇ ಸಮ್ಮೇಳನಗಳನ್ನು ನಾವು ಅಂದು ಕೊಂಡ ಹಾಗೆ ಮಾಡಿ ಮುಗಿಸಬಹುದು. ಸಾಹಿತ್ಯ ಪರಿಷತ್ತು ಯಾವತ್ತು ಸರ್ಕಾರದ ಅನುದಾನವಿಲ್ಲದೆ ಸಾಹಿತ್ಯ ಸಮ್ಮೇಳನ ಮಾಡುತ್ತದೆಯೋ ಅವತ್ತು ನಿಜವಾಗಿ ಕನ್ನಡ ಸಾಹಿತ್ಯ ಪರಿಷತ್ತು ಉದಯವಾದ ಹಾಗೆ ಎಂದು ತಿಳಿಸಿದರು.

ಇಲ್ಲಸಲ್ಲದ ಆರೋಪ ಸರಿಯಲ್ಲ: ಸರ್‌.ಎಂ.ವಿಶ್ವೇಶ್ವರಯ್ಯನವರ ಒತ್ತಾಸೆಯ ಮೇರೆಗೆ ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂತು. ಆದರೆ, ಕೆಲವು ಮಡಿವಂತಿಕೆಯ ಸಾಹಿತಿಗಳು ಅವರ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಪ್ರವೃತ್ತಿ ಸರಿಯಲ್ಲ. ಅಷ್ಟೇ ಅಲ್ಲ ಕನ್ನಡ ಸಾಹಿತ್ಯ ಪರಿಷತ್ತಿನ ಬಗ್ಗೆಯೂ ಹೊರಗೆ ಟೀಕೆ ಮಾಡುತ್ತಾರೆ. ಇಂತವರು ಹೊರಗಡೆ ದೂರುವುದಕ್ಕಿಂತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಮತ್ತು ಸದಸ್ಯರ ಮುಂದೆ ಕುಳಿತು ಸಮಸ್ಯೆಗಳನ್ನು ಹೇಳಿಕೊಳ್ಳಲಿ ಎಂದರು.

Advertisement

ಕನ್ನಡ ಪುಸ್ತಕ ಕೊಳ್ಳುವವರ ಸಂಖ್ಯೆ ಕಡಿಮೆ: ಇತ್ತೀಚಿನ ದಿನಗಳಲ್ಲಿ ಕನ್ನಡ ಪುಸ್ತಕಗಳನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಯುವ ಸಮುದಾಯ ಕಂಪ್ಯೂಟರ್‌ ಮತ್ತು ಮೊಬೈಲ್‌ನಲ್ಲಿ ಮುಳುಗಿ ಹೋಗಿದ್ದು, ಪರೀಕ್ಷೆ ದೃಷ್ಟಿಯಿಂದ ಮಾತ್ರ ಇ-ಪುಸ್ತಕಗಳನ್ನು ತೆರೆಯುತ್ತಾರೆ. ಹೀಗಾಗಿ, ಕನ್ನಡಿಗರ ಮತ್ತು ಯುವ ಸಮುದಾಯದ ಆಲೋಚನಾ ಕ್ರಮ ಬದಲಾಗಬೇಕಾಗಿದೆ ಎಂದು ನುಡಿದರು.

ದಲಿತ ಸಂಪುಟ ಹೊರತರಲು ತೀರ್ಮಾನ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್‌ ಮಾತನಾಡಿ, ತಾವು ಪರಿಷತ್ತಿನ ಅಧ್ಯಕ್ಷರಾದ ಮೇಲೆ ಹಲವು ರೀತಿಯ ಕಾರ್ಯಗಳು ನಡೆದಿವೆ. ಈ ಬಗ್ಗೆ ಸಾಧನೆಯ ಕಾಯಕ ಪಥವನ್ನು ಹೊರ ತರಲಾಗಿದೆ. ಇದೇ ಮೊದಲ ಬಾರಿಗೆ ಸಾಹಿತ್ಯ ಪರಿಷತ್ತು “ದಲಿತ ಸಂಪುಟ’ ವನ್ನು ಹೊರತರಲು ತೀರ್ಮಾನಿಸಿದೆ ಎಂದರು.

ಈ ಸಂದರ್ಭದಲ್ಲಿ ಪರಿಷತ್ತಿನ ನೌಕರರನ್ನು ಸನ್ಮಾನಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಗೌರವ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಡಾ.ರಾಜಶೇಖರ ಹತಗುಂದಿ ಹಾಜರಿದ್ದರು.

ಪರಿಷತ್ತಿನಲ್ಲೀಗ ಲವಲವಿಕೆ ಇಲ್ಲ: ಕನ್ನಡ ಸಾಹಿತ್ಯ ಪರಿಷತ್ತಿನಲ್ಲೀಗ ಹಿಂದಿದಷ್ಟು ಲವಲವಿಕೆ ಇಲ್ಲವಾಗಿದೆ. ಹೀಗಾಗಿ ಪರಿಷತ್ತಿಗೆ ಮತ್ತಷ್ಟು ಜೀವಂತಿಕೆಯನ್ನು ನೀಡಬೇಕಾಗಿದೆ. ಕೆಲವು ವಿಭಾಗಗಳಿಗೆ ಕಾಯಕಲ್ಪ ನೀಡಬೇಕಾಗಿದ್ದು, ಈ ದೃಷ್ಟಿಯಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷರು ಆಲೋಚನೆ ಮಾಡಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ನೆನಪಿಸಿಕೊಳ್ಳುವಂತ ಕೊಡುಗೆ ನೀಡಬೇಕಾಗಿದೆ ಎಂದು ದೊಡ್ಡರಂಗೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next