Advertisement

ಬುದ್ಧಿಮಾಂದ್ಯ ಯುವತಿ ಅಪಹರಿಸಿ ಅತ್ಯಾಚಾರ

11:44 AM Aug 28, 2017 | Team Udayavani |

ಬೆಂಗಳೂರು: ಬುದ್ಧಿಮಾಂದ್ಯ ಯುವತಿಯನ್ನು ಅಪಹರಿಸಿ, ಬಲವಂತವಾಗಿ ಮದುವೆಯಾಗಿ ಅತ್ಯಾಚಾರ ಎಸಗಿರುವ ದುಷ್ಕೃತ್ಯ ನಗರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರೂ 20ರ ಹರೆಯದ ಬುದ್ಧಿಮಾಂದ್ಯ ಯುವತಿ ಮೇಲೆ ಕಣ್ಣು ಹಾಕಿ, ಆಕೆಯನ್ನು ಅಪಹರಿಸಿ ಮನೆಗೆ ಕರೆದೊಯ್ದು ನೆಪಮಾತ್ರಕ್ಕೆ ಮದುವೆಯಾಗಿ ಅತ್ಯಾಚಾರ ಎಸಗಿದ್ದಾನೆ.

Advertisement

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಮಾಗಡಿ ರಸ್ತೆ ಠಾಣೆ ಪೊಲೀಸರು, ಅಗ್ರಹಾರ ದಾಸರಹಳ್ಳಿಯ ಸಂತೋಷ್‌ (32) ಎಂಬಾತನನ್ನು ಬಂಧಿಸಿದ್ದಾರೆ. ದಾಸರಹಳ್ಳಿ ನಿವಾಸಿಯಾದ ಸಂತೋಷ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ವಿಪರೀತ ಮದ್ಯ ವ್ಯಸನಿಯಾಗಿದ್ದರಿಂದ ಬೇಸರಗೊಂಡ ಪತ್ನಿ ಐದು ವರ್ಷಗಳ ಹಿಂದೆಯೇ ತೊರೆದು ಹೋಗಿದ್ದರು.

ಜೀವನೋಪಾಯಕ್ಕೆ ಇಸ್ತ್ರಿ ಅಂಗಡಿ ಇಟ್ಟುಕೊಂಡಿದ್ದ ಸಂತೋಷ್‌, ಮನೆಯ ಸಮೀಪವಿದ್ದ ಬುದ್ಧಿಮಾಂದ್ಯ ಯುವತಿಯ ಮೇಲೆ ಕಣ್ಣು ಹಾಕಿದ್ದ. ಸಂತ್ರಸ್ತ ಯುವತಿಯ ಮನೆಗೆ ಹೋಗಿ ನಿಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿಕೊಡಿ ಎಂದು ಅವರ ತಾಯಿಗೆ ಹಲವು ಬಾರಿ ಕೇಳಿದ್ದ. ಈತನ ಬಗ್ಗೆ  ತಿಳಿದಿದ್ದ ಮನೆಯವರು, ವಿವಾಹ ಮಾಡಲು ನಿರಾಕರಿಸಿದ್ದರು.

24ರ ರಾತ್ರಿ ಅಪಹರಣಕ್ಕೆ ಸ್ಕೆಚ್‌
ಇದರಿಂದ ಕೋಪಗೊಂಡ ಸಂತೋಷ್‌, ಆ.24ರ ರಾತ್ರಿ 9.45ರ ಸುಮಾರಿಗೆ ಪಕ್ಕದ ಕ್ರಾಸ್‌ನಲ್ಲಿದ್ದ ತನ್ನ ಅಜ್ಜಿಯ ಮನೆಗೆ ಸಂತ್ರಸ್ತ ಯವತಿ ತೆರಳುತ್ತಿರುವುದನ್ನು ಗಮನಿಸಿದ್ದ. ಕೂಡಲೇ ಯುವತಿಯನ್ನು ಅಡ್ಡಗಟ್ಟಿ ಬಲವಂತವಾಗಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅದೇ ದಿನ ರಾತ್ರಿ ತನ್ನ ಮನೆಯ ದೇವರ ಫೋಟೋ ಮುಂದೆ “ಹಿತ್ತಾಳೆ’ ತಾಳಿಯೊಂದನ್ನು ಕಟ್ಟಿ ಮದುವೆಯಾಗಿದ್ದಾನೆ. ಬಳಿಕ ಯುವತಿ ಮೇಲೆ ಅತ್ಯಾಚಾರವೆಸಗಿ, ಮರುದಿನ ಮನೆಯಲ್ಲೇ ಯುವತಿಯನ್ನು ಕೂಡಿ ಬೀಗ ಹಾಕಿಕೊಂಡು ಅಂಗಡಿಗೆ ಬಂದಿದ್ದ.

ಇತ್ತ ಅಜ್ಜಿಯ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದ ಮಗಳು ಅಲ್ಲಿಯೂ ಇಲ್ಲದಿರುವುದನ್ನು ಕಂಡು ಗಾಬರಿಗೊಳಗಾದ ಆಕೆಯ ತಾಯಿ ಹಾಗೂ ಸಹೋದರ ಹಲವು ಕಡೆ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಅನುಮಾನದ ಮೇರೆಗೆ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು, ಸಂತೋಷ್‌ ಮನೆಗೆ ತೆರಳಿ ಪರಿಶೀಲಿಸಿದಾಗ ಯುವತಿ ಅಲ್ಲಿಯೇ ಇದ್ದಾರೆ. ಅಲ್ಲದೆ ಆರೋಪಿ ಕೂಡ ಮನೆಯಲ್ಲಿಯೇ ಇದ್ದ. ಕೂಡಲೇ ಆರೋಪಿಯನ್ನು ಬಂಧಿಸಿ ಯುವತಿಯನ್ನು ಪೋಷಕರಿಗೆ ಒಪ್ಪಿಸಲಾಯಿತು.

Advertisement

ಸಂತೋಷ್‌ ಬಲವಂತವಾಗಿ ಕರೆದುಕೊಂಡು ಬಂದು ತಾಳಿ ಕಟ್ಟಿದ್ದ, ಬಳಿಕ ಲೈಂಗಿಕವಾಗಿ ಬಳಸಿಕೊಂಡ ಎಂದು ಸಂತ್ರಸ್ತ ಯುವತಿ ಹೇಳಿದ್ದಾರೆ. ಮದುವೆ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಈ ರೀತಿ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸಂತ್ರಸ್ಥ ಯುವತಿಯ ತಾಯಿಯ ದೂರು ಹಾಗೂ ಯುವತಿ ಹೇಳಿಕೆ ಆಧರಿಸಿ ಆರೋಪಿ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next