Advertisement

ಅರಣ್ಯದಂಚಿನ ಜನತೆಯ ಬೇಡಿಕೆ ಹಲವು

08:37 PM Aug 10, 2021 | Team Udayavani |

ಕಡಬ ತಾಲೂಕಿನ ಗ್ರಾಮೀಣ ಪ್ರದೇಶವಾದ ಕಡ್ಯ ಕೊಣಾಜೆ, ಪುತ್ತಿಗೆಯಲ್ಲಿ ಆಗ ಬೇಕಾದ ಕಾಮಗಾರಿಗಳ ಪಟ್ಟಿ ದೊಡ್ಡದಿದೆ.  ಕಡಬ ತಾಲೂಕು ಕೇಂದ್ರದಿಂದ 15ರಿಂದ 20 ಕಿ.ಮೀ. ದೂರದಲ್ಲಿರುವ ಈ ಪ್ರದೇಶಗಳಲ್ಲಿನ ರಸ್ತೆ ಸಮರ್ಪಕವಾಗಿಲ್ಲ, ಕಾಡುವ ನೆಟ್‌ವರ್ಕ್‌…ಹೀಗೆ ಸಮಸ್ಯೆಗಳು ಹಲವಾರು. ಅವುಗಳ ವಿವರ ಇಂದಿನ “ಒಂದು ಊರು; ಹಲವು ದೂರು’ ಸರಣಿಯಲ್ಲಿ.

Advertisement

ಸುಬ್ರಹ್ಮಣ್ಯ: ಹೆಚ್ಚಿನ ಸಂಪರ್ಕ ರಸ್ತೆಗಳು ಅಭಿವೃದ್ಧಿ ವಂಚಿತ. ಮಣ್ಣಿನ ರಸ್ತೆಯೇ ಬಹುಪಾಲು. ಅರಣ್ಯದಂಚಿನ ನಿವಾಸಿಗಳ ಅಭಿವೃದ್ಧಿ ಚಿಂತನೆಯ ಬೇಡಿಕೆಗಳು ಬೆಟ್ಟದಷ್ಟಿದ್ದರೂ, ಈಡೇರಿದ್ದು ಮಾತ್ರ ಬೆರಳೆಣಿಕೆಯಷ್ಟು ಮಾತ್ರ.

ಇದು ಕಡಬ ತಾ|ನ ಗ್ರಾಮೀಣ ಪ್ರದೇಶವಾದ ಕಡ್ಯ ಕೊಣಾಜೆ, ಪುತ್ತಿಗೆ ಪ್ರದೇಶದ ಚಿತ್ರಣ. ಕಡಬ ತಾಲೂಕು ಕೇಂದ್ರದಿಂದ ಸುಮಾರು 15ರಿಂದ 20 ಕಿ.ಮೀ. ದೂರದಲ್ಲಿರುವ ಕಡ್ಯ ಕೊಣಾಜೆ ಹಾಗೂ ಪುತ್ತಿಗೆ ಅಭಿವೃದ್ಧಿ ನಿರೀಕ್ಷೆಯೊಂದಿಗೆ ಮುಂದೆ ಸಾಗುತ್ತಿದೆ. ಒಂದು ಕಾಲದಲ್ಲಿ ಹಲವು ಮೂಲ ಸೌಕರ್ಯದಿಂದ ವಂಚಿತಗೊಂಡಿದ್ದ ಕಡ್ಯ ಕೊಣಾಜೆ ಗ್ರಾ.ಪಂ. ವ್ಯಾಪ್ತಿಗೆ ಬಳಿಕ ಕೆಲ ಸೌಲಭ್ಯ ಲಭಿಸಿದ್ದರೂ ಆಗಬೇಕಿರುವ ಅಭಿವೃದ್ಧಿಯ ಪಟ್ಟಿ ಇನ್ನಷ್ಟಿದೆ.

ಇಲ್ಲಿ ಬಹುಮುಖ್ಯವಾಗಿ ಅಭಿವೃದ್ಧಿಗಾಗಿ ಕಾಯುತ್ತಿರುವುದು ಸಂಪರ್ಕ ರಸ್ತೆಗಳು. ಮರ್ಧಾಳ-ಕಡ್ಯ-ಕೊಣಾಜೆ-ಪಟ್ಲ ಸಂಪರ್ಕ ರಸ್ತೆ ಕೆಲವು ವರ್ಷಗಳ ಹಿಂದೆ ಅಭಿವೃದ್ಧಿಗೊಂಡಿದ್ದು, ಉಳಿದಂತೆ ಈ ಭಾಗದ ಹೆಚ್ಚಿನ ರಸ್ತೆಗಳು ಅಭಿವೃದ್ಧಿಯಿಂದ ವಂಚಿತವಾಗಿವೆ. ಕೆಲವೆಡೆ ಅಲ್ಲಲ್ಲಿ ಅಲ್ಪ ಅನುದಾನದಲ್ಲಿ ಕಾಂಕ್ರೀಟ್‌ ರಸ್ತೆ ಮಾಡಲಾಗಿದೆ.

ಮಾರಪ್ಪೆ-ಕೊಣಾಜೆ ರಸ್ತೆ:

Advertisement

ಕೊಣಾಜೆ ಪೇಟೆಯಿಂದ ಕಲ್ಲುಗುಡ್ಡೆ ಸಂಪರ್ಕಿಸುವ ರಸ್ತೆ ರೆಂಜಿಲಾಡಿ ಗ್ರಾಮ ವ್ಯಾಪ್ತಿವರೆಗೆ ಅಭಿವೃದ್ಧಿಗೊಳ್ಳಬೇಕಿದೆ. ಈ ರಸ್ತೆ ಕಚ್ಛಾ ರಸ್ತೆಯಂತಿದ್ದು, ಮಳೆಗಾಲದಲ್ಲಿ ಕೆಸರಿನಿಂದ ಕೂಡಿರುತ್ತದೆ. ದಿನನಿತ್ಯ ನೂರಾರು ಜನರು ಓಡಾಟ ನಡೆಸುವ ಪ್ರಮುಖ ರಸ್ತೆ ಇದಾಗಿದೆ.

ಕೊಣಾಜೆಯ ಪಟ್ಲದಿಂದ ಪುತ್ತಿಗೆ ಪ್ರದೇಶಕ್ಕೆ ಸಂಪರ್ಕಿಸುವ ರಸ್ತೆಯೂ ದುಸ್ತರಗೊಂಡಿದೆ. ಪುತ್ತಿಗೆ ಭಾಗದ ಜನತೆ ಕೊಣಾಜೆ ಪೇಟೆಗೆ ಬರಲು ಇದೇ ರಸ್ತೆ ಬಳಸಬೇಕಾಗಿದ್ದು, ಸಂಕಷ್ಟದಲ್ಲಿ ಸಂಚರಿಸುತ್ತಿದ್ದಾರೆ. ಇಲ್ಲೂ ಕೆಲವೆಡೆ ಕಾಂಕ್ರೀಟ್‌ ಕಾಮಗಾರಿ ನಡೆಸಲಾಗಿದೆ. ಹೆಚ್ಚಿನ ಭಾಗದ ರಸ್ತೆ ಅಭಿವೃದ್ಧಿ ಆಗಬೇಕಿದೆ.

ಪುತ್ತಿಗೆ-ಕಲ್ಲುಗುಡ್ಡೆ ಸಂಪರ್ಕ ರಸ್ತೆಯ ಸ್ಥಿತಿಯೂ ಶೋಚನೀಯವಾಗಿದೆ. ಉದನೆ ಎಂಬಲ್ಲಿ ಗುಂಡ್ಯ ಹೊಳೆಗೆ ಸೇತುವೆ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ, ಇದು ಸಂಚಾರಕ್ಕೆ ಮುಕ್ತವಾದಲ್ಲಿ ಇದೇ ರಸ್ತೆಯಲ್ಲಿ ವಾಹನಗಳು ಸಂಚರಿಸಬೇಕಾಗಿರುವುದರಿಂದ ಈ ರಸ್ತೆಯ ಅಭಿವೃದ್ಧಿ ಶೀಘ್ರ ನಡೆಯಬೇಕಿದೆ.

ನೆಟ್‌ವರ್ಕ್‌ ಸಮಸ್ಯೆ:

ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ನೆಟ್‌ವರ್ಕ್‌ ಸಮಸ್ಯೆ ಜೀವಂತವಾಗಿದೆ.  ಕರೆಂಟ್‌ ಇದ್ದಲ್ಲಿ ಮಾತ್ರವೇ ಇಲ್ಲಿನ ಬಿಎಸ್‌ಎನ್‌ಎಲ್‌ ಟವರ್‌ ನೆಟ್‌ವರ್ಕ್‌ ಒದಗಿಸುತ್ತದೆ. ಇಲ್ಲವೇ ಇಲ್ಲಿ ಯಾವುದೇ ಇತರ ನೆಟ್‌ವರ್ಕ್‌ ಸೌಲಭ್ಯ ಇನ್ನೂ ಒದಗಿಲ್ಲ.

ಕಡ್ಯ ಕೊಣಾಜೆ ಗ್ರಾಮ ಈ ಮೊದಲು ಐತ್ತೂರು ಗ್ರಾಮ ಪಂಚಾಯತ್‌  ವ್ಯಾಪ್ತಿಯಲ್ಲಿತ್ತು. ಕೆಲ ವರ್ಷಗಳ ಹಿಂದೆ ಕಡ್ಯ ಕೊಣಾಜೆ ಪ್ರತ್ಯೇಕ ಗ್ರಾಮ ಪಂಚಾಯತ್‌ ಆಗಿ ಮೇಲ್ದರ್ಜೆಗೇರಿತ್ತು. ಇದೀಗ ಕೊಣಾಜೆ ಪೇಟೆಯಲ್ಲಿಯೇ ಗ್ರಾಮ ಪಂಚಾಯತ್‌ ಕಚೇರಿ ಇದೆ. ಕಡ್ಯ ಕೊಣಾಜೆ ಶಿರಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯನ್ನು ಹೊಂದಿದೆ. ಇಲ್ಲಿ ನಡೆಯಬೇಕಿರುವ ಹಲವು ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಪ್ರದೇಶ ವ್ಯಾಪ್ತಿ ಅಡ್ಡಿಯಾಗುತ್ತಿದೆ ಎನ್ನಲಾಗಿದೆ.

ಅರಣ್ಯ ವ್ಯಾಪ್ತಿಯೂ ಸೇರಿರುವುದರಿಂದ ರಸ್ತೆ ಅಭಿವೃದ್ಧಿ ಕೆಲಸಗಳಿಗೆ ಅರಣ್ಯ ಇಲಾಖೆಯ ಆಕ್ಷೇಪ ವ್ಯಕ್ತವಾಗುತ್ತಿದೆ.

ಇತರ ಸಮಸ್ಯೆಗಳೇನು?:

  • ಅಸಮರ್ಪಕ ಸಾರ್ವಜನಿಕರ ಸಾರಿಗೆ ವ್ಯವಸ್ಥೆ
  • ಸಾರ್ವಜನಿಕ ಶ್ಮಶಾನದ ಕೊರತೆ

ಕಾಡುಪ್ರಾಣಿ ಹಾವಳಿ:

ಈ ವ್ಯಾಪ್ತಿ ಅರಣ್ಯದಂಚಿನಲ್ಲಿರುವುದರಿಂದ ಕೃಷಿ ಭೂಮಿಗೆ ಕಾಡುಪ್ರಾಣಿಗಳ ಹಾವಳಿ ನಿರಂತರವಾಗಿರುತ್ತದೆ ಎನ್ನುತ್ತಾರೆ ಗ್ರಾಮಸ್ಥರು. ಕಾಡಾನೆ, ಕೋತಿ, ಹಂದಿ ಮುಂತಾದ ಕಾಡು ಪ್ರಾಣಿಗಳು ತೋಟ, ಹೊಲಗಳಿಗೆ ಲಗ್ಗೆ ಇಟ್ಟು ಕೃಷಿಗಳನ್ನು ಹಾಳುಗೆಡವುತ್ತಿರುತ್ತವೆ. ವರ್ಷಂಪ್ರತಿ ಕಾಡುಪ್ರಾಣಿಗಳ ಉಪಳಟದಿಂದ ಇಲ್ಲಿನ ಕೃಷಿಕರಿಗೆ ಸಾವಿರದಿಂದ ಲಕ್ಷ ರೂ.ವರೆಗೆ ನಷ್ಟ ಸಂಭವಿಸುತ್ತದೆ.

-ದಯಾನಂದ ಕಲ್ನಾರ್‌

 

Advertisement

Udayavani is now on Telegram. Click here to join our channel and stay updated with the latest news.

Next