Advertisement

ಸಾಕಾರಗೊಳ್ಳಲಿದೆ ಹಡವಿನಕೋಣೆ ರಸ್ತೆ ಬೇಡಿಕೆ

09:50 PM Oct 03, 2019 | Team Udayavani |

ಬೈಂದೂರು: ಬಹುವರ್ಷದ ಬೇಡಿಕೆಯಾಗಿರುವ ಶಿರೂರು ಹಡವಿನಕೋಣೆ ರಸ್ತೆ ನಿರ್ಮಾಣ ಕಾಮಗಾರಿಗೆ ಈ ವರ್ಷ ಕಾಲ ಕೂಡಿ ಬಂದಿದೆ. ಅತ್ಯಂತ ಶಿಥಿಲಗೊಂಡಿರುವ ಈ ರಸ್ತೆಯಲ್ಲಿ ನಡೆದಾಡಲೂ ಪ್ರಯಾಸಪಡುವಂತಾಗಿತ್ತು. ಪ್ರಸ್ತುತ ಈ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಸಿದ್ಧಗೊಳ್ಳುತ್ತಿದ್ದು, ಶಿರೂರಿನ ಬಹುಮುಖ್ಯ ರಸ್ತೆಯೊಂದು ನಿರ್ಮಾಣ ಭಾಗ್ಯ ಕಂಡಿದೆ.

Advertisement

ಹಲವು ವರ್ಷದ ಬೇಡಿಕೆ
ಶಿರೂರು ಗ್ರಾ.ಪಂ. ವ್ಯಾಪ್ತಿಯ ಹಡವಿನಕೋಣೆ ರಸ್ತೆ ಪ್ರಮುಖ ಮೀನುಗಾರಿಕಾ ರಸ್ತೆಯಾಗಿದ್ದರೂ, ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಅಧಿಕಾರಿಗಳ ಆಸಕ್ತಿ ಕೊರತೆಯಿಂದ ನನೆಗುದಿಗೆ ಬಿದ್ದಿತ್ತು. ಹೀಗಾಗಿ ಡಾಮರು ರಸ್ತೆ ಹೊಂಡಮಯವಾಗಿದ್ದು ವಾಹನ ಸಂಚಾರ ದುಸ್ತರವಾಗಿತ್ತು ಹಲವು ಬಾರಿ ಸ್ಥಳೀಯರು ಮನವಿ ನೀಡಿದ್ದರೂ ಯಾವ ಇಲಾಖೆಯೂ ಇತ್ತ ಗಮನ ಹರಿಸಿರಲಿಲ್ಲ.

ಇದರಿಂದ ಬೇಸತ್ತುಹೋದ ಸ್ಥಳೀಯರು ಕಳೆದ ವರ್ಷ ಚುನಾವಣಾ ಬಹಿಷ್ಕಾರ ಮಾಡುವ ನಿರ್ಧಾರದಿಂದ ನೋ ರೋಡ್‌, ನೋ ವೋಟ್‌ ಎನ್ನುವ ಬ್ಯಾನರ್‌ ಅಳವಡಿಸಿದ್ದರು. ಹಡವಿನಕೋಣೆಗೆ ಭೇಟಿ ನೀಡಿ ಸ್ಥಳೀಯರ ಮನವೊಲಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಚುನಾವಣಾ ಸಂದರ್ಭದಲ್ಲಿ ಕಾಮಗಾರಿ ಆರಂಭಿಸಲು ಕಾನೂನು ಸಮಸ್ಯೆಗಳಿವೆ. ಹೀಗಾಗಿ ಚುನಾವಣೆ ಮುಗಿದ ಪ್ರತಿಕ್ರಿಯಿಸುವ ಭರವಸೆ ನೀಡಿದ್ದರು.

ಆದರೆ ಚುನಾವಣೆ ಮುಗಿದ ಎರಡು ವರ್ಷ ಕಳೆದರೂ ರಸ್ತೆ ಮಾತ್ರ ನಿರ್ಮಾಣವಾಗಿಲ್ಲ. ಬಳಿಕ ಸ್ಥಳೀಯರು ಶಾಸಕರ ಜನಸ್ಪಂದನ ಸಭೆ ನಡೆಸಿ ರಸ್ತೆ ಶೀಘ್ರ ನಿರ್ಮಿಸಿಕೊಡಲು ಬೇಡಿಕೆಯಿಟ್ಟಿದ್ದರು. ಮಾತ್ರವಲ್ಲದೆ ಅನಿವಾಸಿ ಭಾರತೀಯರಾಗಿ ಶಿರೂರು ಅಭಿವೃದ್ಧಿಗೆ ಸ್ಪಂದಿಸು ತ್ತಿರುವ ಎಂ.ಎಂ. ಮೀರಾನ್‌ ವಿಶೇಷ ಮುತುವರ್ಜಿ ಯಿಂದ ಶಾಸಕರ ಹಾಗೂ ಸರಕಾರದ ಗಮನ ಸೆಳೆದಿದ್ದರು. ಈ ಕುರಿತು ಉದಯವಾಣಿ ವರದಿಯನ್ನೂ ಪ್ರಕಟಿಸಿತ್ತು. ಇದರ ಫಲದಿಂದ ಮೊದಲ ಹಂತದಲ್ಲಿ 25 ಲಕ್ಷ ರೂ.ಅನುದಾನ ಬಿಡುಗಡೆಯಾಗಿ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗಿತ್ತು. ಆದರೆ 25 ಲಕ್ಷ ರೂ. ಅನುದಾನದಲ್ಲಿ ಕೆಲವೆ ಮೀಟರ್‌ ರಸ್ತೆ ಮಾತ್ರ ನಿರ್ಮಿಸಲು ಸಾಧ್ಯ. ಹೀಗಾಗಿ ಎರಡು ತಿಂಗಳಿಂದ ಯಾವುದೇ ಕೆಲಸ ಪ್ರಾರಂಭವಾಗಿಲ್ಲ.

ಬಳಿಕ ಶಾಸಕರು ಹೆಚ್ಚುವರಿ ಅನುದಾನ ನೀಡಲು ಸರಕಾರದ ಗಮನ ಸೆಳೆದು ಸಂಸದರ ಸಹಕಾರದೊಂದಿಗೆ ಅಲ್ಪಸಂಖ್ಯಾಕರ ಅನುದಾನದಲ್ಲಿ 75 ಲಕ್ಷ ರೂ. ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾವನೆ ನೀಡಿದ್ದು ಒಂದೆರೆಡು ದಿನಗಳಲ್ಲಿ ಮಂಜೂರಾಗಲಿದೆ. ಒಟ್ಟು 1 ಕೋಟಿ ರೂ. ಅನುದಾನದಲ್ಲಿ ಶಿರೂರು ಹಡವಿನಕೋಣೆಯಲ್ಲಿ 3 ಕಿ.ಮೀ. ರಸ್ತೆ ನಿರ್ಮಾಣವಾಗಲಿದೆ.

Advertisement

ಸಂಚಾರ ವ್ಯವಸ್ಥೆ ಸುಧಾರಿಸಬೇಕಾಗಿದೆ
ಹಡವಿನಕೋಣೆ ರಸ್ತೆ ಅತ್ಯಂತ ಜನನಿಬಿಡ ರಸ್ತೆಯಾಗಿದ್ದು, ರಸ್ತೆ ಪಕ್ಕದ ಅಂಗಡಿಗಳು ಹಾಗೂ ವಾಹನ ನಿಲುಗಡೆಯಿಂದ ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಒಂದು ವರ್ಷದ ಹಿಂದೆ ಸ್ಥಳೀಯ ಪಂಚಾಯತ್‌ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಿ ಬದಲಿ ವ್ಯವಸ್ಥೆ ಕಲ್ಪಿಸಿ ಅನುವು ಮಾಡಿಕೊಡಲು ನಿರ್ಣಯ ಕೈಗೊಳ್ಳಲಾಗಿತ್ತು. ಪ್ರಸ್ತುತ ರಸ್ತೆ ನಿರ್ಮಾಣವಾಗಬೇಕಾದರೆ ಪಂಚಾಯತ್‌ ಸಮರ್ಪಕ ಕ್ರಮ ಕೈಗೊಳ್ಳಬೇಕಾಗಿದೆ.

ಒಂದೆರಡು ದಿನದಲ್ಲಿ ಮಂಜೂರಾತಿ
ಹಡವಿನಕೋಣೆ ರಸ್ತೆ ಬೇಡಿಕೆ ಬಹಳ ಹಿಂದಿ ನಿಂದಲೂ ಇದ್ದಿದ್ದು ಪೂರ್ಣರಸ್ತೆ ನಿರ್ಮಾಣಕ್ಕೆ ಅನುದಾನ ಹೊಂದಿಸಲು ಸಾಧ್ಯವಾಗದೆ ಹಿನ್ನಡೆಯಾಗಿತ್ತು. ಪ್ರಸ್ತುತ ಮುಖ್ಯಮಂತ್ರಿ
ಬಿಎ ಸ್‌ವೈ ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ನೀಡಲು ಅಲ್ಪಸಂಖ್ಯಾಕರ ಅನುದಾನ ಒದಗಿಸಲು ಪ್ರಸ್ತಾವನೆ ಸಲ್ಲಿಸಿದ್ದು ಒಂದೆರಡು ದಿನದಲ್ಲಿ ಮಂಜೂರಾತಿ ದೊರೆಯಲಿದೆ. ಈ ಮೂಲಕ ಹಡವಿನಕೋಣೆ ಜನರಿಗೆ ನೀಡಿದ ಬೇಡಿಕೆ ಈಡೇರಿದಂತಾಗಿದೆ.
-ಬಿ.ಎಂ.ಸುಕುಮಾರ ಶೆಟ್ಟಿ,
ಶಾಸಕರು ಬೈಂದೂರು ವಿಧಾನಸಭಾ ಕ್ಷೇತ್ರ

ಬದಲಿ ವ್ಯವಸ್ಥೆ ಕಲ್ಪಿಸಲು ಬದ್ಧ
ಶಿರೂರು ಹಡವಿನಕೋಣೆ ರಸ್ತೆ ನಿರ್ಮಾಣ ಬಹುದಿನದ ಬೇಡಿಕೆಯಾಗಿದೆ. ಈ ರಸ್ತೆ ನಿರ್ಮಾಣ ಮಾಡುವ ಮುಂಚಿತವಾಗಿ ರಸ್ತೆ ಬದಿಯಲ್ಲಿರುವ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಲು ಪಂಚಾಯತ್‌ ನಿರ್ಣಯ ಕೈಗೊಂಡಿದೆ. ಈಗಾಗಲೇ ಎಲ್ಲ ಅಂಗಡಿಯವರನ್ನು ಕರೆದು ಸಭೆ ನಡೆಸಿ ವಿಷಯ ತಿಳಿಸಲಾಗಿದೆ. ರಸ್ತೆ ನಿರ್ಮಾಣವಾಗುವ ಒಂದು ವಾರದ ಮುಂಚೆ ಇವರಿಗೆ ಬದಲಿ ವ್ಯವಸ್ಥೆ ಕಲ್ಪಿಸಲು ಬದ್ಧವಾಗಿದೆ.
-ಮಂಜುನಾಥ ಶೆಟ್ಟಿ.
ಪಿಡಿಒ ಶಿರೂರು

-ಅರುಣ್‌ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next