ಶಿವಮೊಗ್ಗ: ಬುಟ್ಟಿಯಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿ ಗೋಂದಿ ಚಟ್ನಹಳ್ಳಿಯ ಮೀನುಗಾರರ ಸಹಕಾರ ಸಂಘದ ನೇತೃತ್ವದಲ್ಲಿ ಮೀನು ಮಾರಾಟ ಮಾಡುವ ಮಹಿಳೆಯರು ಶುಕ್ರವಾರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಸುಮಾರು 40-50 ವರ್ಷಗಳಿಂದ ನಾವು ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆಯ ಹೊರಭಾಗದಲ್ಲಿ ಮೀನು ವ್ಯಾಪಾರ ಮಾಡುತ್ತಿದ್ದೇವೆ. ಮೀನು ಹಿಡಿದು ಮಾರಾಟ ಮಾಡುವುದು ನಮ್ಮ ಕುಲ ಕಸುಬು. ನಾವೆಲ್ಲ ಅತ್ಯಂತ ಬಡವರು, ಅಲೆಮಾರಿಗಳು. ಇದು ಬಿಟ್ಟರೆ ನಮಗೆ ಬೇರೆ ಗತಿಯಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ನಮಗೆ ಅಲ್ಲಿ ಮೀನು ಮಾರಾಟ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ದೂರಿದರು.
ನಾವು ಟೆಂಡರ್‌ನಲ್ಲಿ ಭಾಗವಹಿಸಿ ಮಳಿಗೆ ಬಾಡಿಗೆ ಪಡೆದು ವ್ಯಾಪಾರ ಮಾಡಿ ಅದರಲ್ಲಿ ಲಾಭಗಳಿಸುವಷ್ಟು ಶ್ರೀಮಂತರಲ್ಲ. ಪಾಲಿಕೆಯ ಈ ಹೊಸ ನಿಯಮದಿಂದ ನಮಗೆ ತೊಂದರೆಯಾಗುತ್ತಿದೆ. ಅಲ್ಲದೆ ಟೆಂಡರ್‌ನಲ್ಲಿ ಮಳಿಗೆ ಪಡೆದ ಬಲಾಡ್ಯರು ಮೀನು ವ್ಯಾಪಾರ ಮಾಡದಂತೆ ನಮಗೆ ತಡೆ ಒಡ್ಡುತ್ತಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಮೀನು ತಂದಿದ್ದ ಬುಟ್ಟಿಗಳನ್ನು ಎಸೆದು ನಾಶ ಪಡಿಸುತ್ತಿದ್ದಾರೆ. ಒಟ್ಟಾರೆ ನಮ್ಮನ್ನು ವ್ಯಾಪಾರ ಮಾಡದಂತೆ ಹೊರದೂಡಿದ್ದಾರೆ. ನಾವು ಮಹಿಳೆಯರು ಎಲ್ಲಿಗೆ ಹೋಗಬೇಕು ಎಂದು ತಮ್ಮ ಅಳಲು ತೋಡಿಕೊಂಡರು. ನಾವು ಅನೇಕ ವರ್ಷಗಳಿಂದ ಇದೇ ಮಾರುಕಟ್ಟೆಯ ಹೊರಗೆ ಮೀನು ವ್ಯಾಪಾರ ಮಾಡುತ್ತಾ ಬಂದಿದ್ದೇವೆ. ಹಾಗಾಗಿ ನಮಗೆ ಇಲ್ಲಿ ಅವಕಾಶ ಮಾಡಿಕೊಡಬೇಕು. ಅದು ಸಾಧ್ಯವಾಗದಿದ್ದರೆ ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಖಾಲಿ ಜಾಗ ಹುಡುಕಿ ಮೀನು ವ್ಯಾಪಾರ ಮಾಡಿಕೊಂಡು ಹೋಗಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಮಹಿಳಾ ಮೀನು ಮಾರಾಟಗಾರರು ಇದ್ದರು.