Advertisement

ಅನುದಾನ ದುರ್ಬಳಕೆ ಮಾಡಿದ ಗ್ರಾಪಂಗಳ ವಿರುದ್ಧ ಕ್ರಮಕ್ಕೆ ಆಗ್ರಹ

10:54 AM May 02, 2019 | Suhan S |

ಕೋಲಾರ: ಗ್ರಾಪಂಗಳು ಬಜೆಟ್‌ ಅನುದಾನ ದುರ್ಬಳಕೆ ಮಾಡಿಕೊಂಡು ಮೂಲ ಸೌಲಭ್ಯ ಕಲ್ಪಿಸದೇ ವಂಚನೆ ಮಾಡುತ್ತಿವೆ. ಈ ಬಗ್ಗೆ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಜಿಪಂ ಸಿಇಒಗೆ ಮನವಿ ಸಲ್ಲಿಸಲಾಯಿತು.

Advertisement

ಹಸಿರುಸೇನೆ ಜಿಲ್ಲಾಧ್ಯಕ್ಷ ಟಿ.ಎನ್‌.ರಾಮೇಗೌಡ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾಗಬೇಕು ಎನ್ನುವ ದೃಷ್ಟಿಯಲ್ಲಿ ಸರ್ಕಾರ ಪ್ರತಿ ವರ್ಷವೂ ಬಜೆಟ್‌ನಲ್ಲಿ ಅನುದಾನ ನೀಡುತ್ತಿದೆ. ಆದರೆ, ಗ್ರಾಪಂಗಳು ದುರ್ಬಳಕೆ ಮಾಡಿಕೊಂಡು ಗ್ರಾಮಗಳಿಗೆ ಮೂಲ ಸೌಲಭ್ಯ ಒದಗಿಸದೇ ವಂಚನೆ ಮಾಡುತ್ತಿವೆ ಎಂದು ಆರೋಪಿಸಿದರು.

ಬಂಗಾರಪೇಟೆ ತಾಲೂಕಿನ ಬೇತಮಂಗಲ, ಜಕ್ಕಾರಸನಕುಪ್ಪ, ಹುಲಿಬೆಲೆ, ಬೂದಿಕೋಟೆ, ಕೋಲಾರ ತಾಲೂಕಿನ ತೊರದೇವಂಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಟ್ಟಿಗೆ ಕಾರ್ಖಾನೆಗಳು, ಶಾಲಾ ಕಾಲೇಜುಗಳು, ರೈಸ್‌ ಮಿಲ್‌ಗಳು, ಕೋಳಿ ಫಾರಂಗಳು ಸೇರಿದಂತೆ ಲಾಭದಾಯಕ ಸಂಸ್ಥೆಗಳು ಇರುತ್ತವೆ. ಇವೆಲ್ಲವನ್ನೂ ನಡೆಸಲು ಪಂಚಾಯ್ತಿ ಯಿಂದ ಪರವಾನಗಿ ಪಡೆಯಬೇಕು. ಆದರೆ, ಪಂಚಾಯ್ತಿಯವರು ವಾಣಿಜ್ಯ ಪರವಾನಗಿ ನೀಡದೆ ಸಾಮಾನ್ಯ ಪರವಾನಗಿ ನೀಡಿ ಲಕ್ಷಾಂತರ ರೂ. ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಖರ್ಚು ಮಾಡದೇ ಲೆಕ್ಕ ತೋರಿಸ್ತಾರೆ: ಪಿಡಿಒ, ಅಧ್ಯಕ್ಷರು ಹಾಗೂ ಬಿಲ್‌ ಕಲೆಕ್ಟರ್‌ಗಳು ಮೂಲ ಸೌಲಭ್ಯ ಒದಗಿಸುವುದಕ್ಕಿಂತ ಹಣ ಮಾಡುವುದನ್ನೇ ನೇರ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಆರೋಪಗಳು ಕೇಳಿ ಬರುತ್ತಿವೆ.

ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಬೀದಿ ದೀಪಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಪ್ರತಿವರ್ಷವು ಸಹ ಇವುಗಳ ಹೆಸರಿನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ ಎಂದು ತೋರಿಸುತ್ತಾರೆ ಎಂದು ದೂರಿದರು.

Advertisement

ನೀರಿನ ಘಟಕ ಇಲ್ಲ: ಎಳೇಸಂದ್ರ ಗ್ರಾಮ ಪಂಚಾಯ್ತಿ ಯಲ್ಲಿ ಅಳವಡಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ದುರಸ್ತಿಗೊಂಡಿದ್ದು, ಇದನ್ನು ಸರಿಪಡಿಸುವಂತೆ ಹಲವು ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶುದ್ಧ ಕುಡಿಯುವ ನೀರಿನ ಘಟಕವು ನಾಮ್‌ಕೇವಾಸ್ತೆಗೆ ಇದೆ ಎಂದು ದೂರಿದರು.

ತೆರಿಗೆ ಹಣ ಎಲ್ಲಿ: ಕೋಲಾರ ತಾಲೂಕಿನ ನರಸಾಪುರ, ವೇಮಗಲ್‌, ಕುರುಗಲ್‌, ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗಾರಿಕಾ ಪ್ರದೇಶವು ಇದೆ. ಇಲ್ಲಿನ ಕೈಗಾರಿಕೆಗಳಿಂದಲೂ ಪಂಚಾಯಿತಿಗೆ ಲಕ್ಷಾಂತರ ರೂ. ತೆರಿಗೆ ಹಣ ಬರುತ್ತಿವೆ. ಆದರೂ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳು ಅಭಿವೃದ್ಧಿಗೊಂಡಿಲ್ಲ. ಈ ಹಣವು ಎಲ್ಲಿ ಹೋಯಿತು ಎಂಬುದು ಇನ್ನೂ ನಿಗೂಢವಾಗಿದೆ ಎಂದರು.

ಸೇನೆ ಜಿಲ್ಲಾ ಕಾರ್ಯದರ್ಶಿ ರಾಮಸಂದ್ರ ರವಿ,ವೀರಾಪುರ ಮಂಜುನಾಥ್‌, ಬಂಗಾರಪೇಟೆ ತಾಲೂಕು ಅಧ್ಯಕ್ಷ ಗೋಪಿನಾಥ್‌, ಉಪಾಧ್ಯಕ್ಷ ಬೂದಿಕೋಟೆ ರಘು, ಕಾರ್ಯದರ್ಶಿ ದೇವರಾಜು, ಸಹ ಕಾರ್ಯದರ್ಶಿ ಮುರಳಿ, ಖಜಾಂಚಿ ಮಾವಳ್ಳಿ ಚಲಪತಿ, ಕೋಲಾರ ತಾಲೂಕು ಸಹ ಕಾರ್ಯದರ್ಶಿ ಶಿವು, ಕಾರ್ಯದರ್ಶಿ ನಾರಾ  ಯಣಸ್ವಾಮಿ, ಉಪಾಧ್ಯಕ್ಷ ಶ್ರೀಕಾಂತ್‌ ಇದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next