Advertisement

ಬೇಡಿಕೆಗಳ ಈಡೇರಿಕೆಗೆ ಬಿಸಿಯೂಟ ತಯಾರಕರ ಆಗ್ರಹ

07:11 AM Feb 15, 2019 | Team Udayavani |

ದಾವಣಗೆರೆ: ಕೆಲಸದ ಭದ್ರತೆ, ಕನಿಷ್ಠ ವೇತನ ಜಾರಿ, ಆರೋಗ್ಯ ವಿಮೆ, ಭವಿಷ್ಯನಿಧಿ ಜಾರಿ ಒಳಗೊಂಡಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್‌(ಎಐಟಿಯುಸಿ) ನೇತೃತ್ವದಲ್ಲಿ ಬಿಸಿಯೂಟ ಕಾರ್ಯಕರ್ತೆಯರು ಗುರುವಾರ ಶಾಲೆಯಲ್ಲಿ ಅಡುಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.

Advertisement

ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.
 
ಕಳೆದ 16 ವರ್ಷದಿಂದ ದಾವಣಗೆರೆ ಜಿಲ್ಲೆಯಲ್ಲಿ 4 ಸಾವಿರ ಒಳಗೊಂಡಂತೆ ರಾಜ್ಯದಲ್ಲಿ 1.80 ಲಕ್ಷದಷ್ಟು ಕಾರ್ಯಕರ್ತೆಯರು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಬಿಸಿಯೂಟ ಯೋಜನೆಯಡಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಸೌಲತ್ತು ಇಲ್ಲದೆಯೇ ಕೆಲಸ ಮಾಡುತ್ತಿರುವರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗೌರವಧನದ ಹೆಸರಲ್ಲಿ ಅತೀ ಕಡಿಮೆ ವೇತನ ನೀಡುತ್ತಿವೆ. ಸಾಕಷ್ಟು ಹೋರಾಟದ ಫಲವಾಗಿ ಮುಖ್ಯ ಅಡುಗೆಯವರಿಗೆ 2,700 ಮತ್ತು ಸಹಾಯಕ ಅಡುಗೆಯವರಿಗೆ 2,600 ರೂ. ನೀಡಲಾಗುತ್ತಿದೆ.

ಇಂದಿನ ದಿನಮಾನದಲ್ಲಿ ಅಷ್ಟು ಹಣದಲ್ಲಿ ಜೀವನ ನಡೆಸುವುದು ತೀರಾ ದುಸ್ತರ. ಸರ್ಕಾರ ಕೂಡಲೇ ಬಿಸಿಯೂಟ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
 
ಬಿಸಿಯೂಟ ಕಾರ್ಯಕರ್ತೆಯರ ವೇತನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಿದಾಗ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಜೆಟ್‌ನಲ್ಲಿ ವೇತನ ಹೆಚ್ಚಳದ ನಿರೀಕ್ಷೆ ಮೂಡಿಸಿದ್ದರು.

ಆದರೆ, ಫೆ. 8 ರಂದು ಅವರು ಮಂಡಿಸಿರುವ ಬಜೆಟ್‌ನಲ್ಲಿ 500 ರೂ. ಮಾತ್ರ ಹೆಚ್ಚಳ ಮಾಡುವ ಮೂಲಕ ದುಡಿಯುವ ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ. ಬಜೆಟ್‌ಗೆ ಅನುಮೋದನೆ ಪಡೆಯುವ ಮುನ್ನವೇ ಪುನರ್‌ ಪರಿಶೀಲನೆ ನಡೆಸಿ, ವೇತನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು. 

16 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ಕೆಲಸದ ಭದ್ರತೆ ಎಂಬುದೇ ಇಲ್ಲ. ಸಾಮಾಜಿಕ ಸೌಲಭ್ಯಗಳಾದ ಆರೋಗ್ಯ ವಿಮೆ, ಭವಿಷ್ಯನಿಧಿ ಯಾವುದೂ ಇಲ್ಲ. ಹಾಗಾಗಿ ಬಿಸಿಯೂಟ ಕಾರ್ಯಕರ್ತೆಯರನ್ನು ಶಾಲಾ ಸಿಬ್ಬಂದಿ, ಕಾರ್ಮಿಕರು ಎಂದು ಪರಿಗಣಿಸಿ, ಕಾರ್ಮಿಕರ ಕಾಯ್ದೆಯಡಿ ಸೌಲಭ್ಯ ಒದಗಿಸಬೇಕು. ಬಿಸಿಯೂಟ ಯೋಜನೆ ಎನ್ನುವ ಬದಲಿಗೆ ಬಿಸಿಯೂಟ ನಿರಂತರ ಕಾರ್ಯಕ್ರಮ ಎಂದು ಬದಲಾಯಿಸಬೇಕು. ಅಪಘಾತಕ್ಕೆ ತುತ್ತಾಗಿ ಮರಣ ಹೊಂದುವ ಕುಟುಂಬದವರಿಗೆ 5 ಲಕ್ಷ, ಅಪಘಾತಕ್ಕೆ ತುತ್ತಾದವರಿಗೆ 2 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

Advertisement

ದಾವಣಗೆರೆ ಒಳಗೊಂಡಂತೆ ಕೆಲವಾರು ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಯನ್ನು ಖಾಸಗಿಯವರಿಗೆ ವಹಿಸುವ ಹುನ್ನಾರ ನಡೆದಿದೆ. ಇದೇ ಪ್ರಕ್ರಿಯೆ ಎಲ್ಲಾ ಕಡೆ ನಡೆದಲ್ಲಿ 1.80 ಲಕ್ಷ ಕಾರ್ಯಕರ್ತೆಯರು ಬೀದಿ ಪಾಲಾಗಲಿದ್ದಾರೆ. ಹಾಗಾಗಿ ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಖಾಸಗಿಯವರಿಗೆ ವಹಿಸಬಾರದು ಎಂದು ಒತ್ತಾಯಿಸಿದರು.

ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ರುದ್ರಮ್ಮ ಬೆಳಲಗೆರೆ, ಐರಣಿ ಚಂದ್ರು, ಆವರಗೆರೆ ವಾಸು, ಸಿ. ರಮೇಶ್‌, ಜ್ಯೋತಿಲಕ್ಷ್ಮಿ, ಪ್ರಮೀಳಾ, ಜಯಮ್ಮ, ವನಜಾಕ್ಷಮ್ಮ, ಚನ್ನಮ್ಮ, ಗಿರಿಜಮ್ಮ, ಮಲ್ಲಮ್ಮ, ಸಾವಿತ್ರಮ್ಮ, ಗದಿಗೇಶ್‌ ಪಾಳೇದ್‌, ನಾಗರತ್ನಮ್ಮ, ಮಂಜುಳಾ, ರೇಖಾ, ಪ್ರೇಮಾ, ಟಿ. ಪುಷ್ಪಾ, ವಸಂತಮ್ಮ, ಕರಿಬಸಮ್ಮ, ಸುವರ್ಣಮ್ಮ, ಮಾದಿಹಳ್ಳಿ ಮಂಜುನಾಥ್‌, ಗಂಗಮ್ಮ, ಅನುರಾಧಾ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next