ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ ಖಾಲಿ ಇರುವ 37 ನ್ಯಾಯಮೂರ್ತಿಗಳ ಹುದ್ದೆ ಭರ್ತಿಗೆ ಆದೇಶಿಸುವಂತೆ ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಶುಕ್ರವಾರ ಆರಂಭಗೊಂಡಿದೆ.
ನಿವೃತ್ತ ನ್ಯಾ.ಎ.ಎನ್.ವೇಣುಗೋಪಾಲಗೌಡ, ವಕೀಲರಾದ ಬಿ.ಎಂ.ಅರುಣ್, ಎಸ್.ಬಸವರಾಜು ಹೈಕೋರ್ಟ್‌ನಲ್ಲಿ ಖಾಲಿ ಇರುವ ನ್ಯಾಯಮೂರ್ತಿಗಳ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್‌ಗೆ ನಿರ್ದೇಶನ ನೀಡುವಂತೆ ಕೋರಿದ್ದರು. ಈ ಬಗ್ಗೆ ನ್ಯಾ.ರವಿ ಮಳೀಮಠ ಮತ್ತು ನ್ಯಾ.ಜಾನ್ ಮೈಕೆಲ್ ಕುನ್ಹಾ ಅವರಿದ್ದ ವಿಭಾಗೀಯ ಪೀಠವು ಶುಕ್ರವಾರ ಅರ್ಜಿ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಹಿರಿಯ ವಕೀಲ ಬಿ.ವಿ.ಆಚಾರ್ಯ, ನ್ಯಾಯಮೂರ್ತಿ ಹುದ್ದೆ ಖಾಲಿ ಬಿಡುವುದು ಸಂವಿಧಾನ ಬಾಹಿರ. ಇದರಿಂದ ಕಕ್ಷಿದಾರರಿಗೂ ತೊಂದರೆ ಹೀಗಾಗಿ ನೇಮಕ ಅಗತ್ಯ ಎಂದು ವಾದ ಮಂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ರವಿಮಳೀಮಠ, ನ್ಯಾಯಮೂರ್ತಿಗಳ ನೇಮಕಾತಿ ಕೊಲಿಜಿಯಂ ತೀರ್ಮಾನಕ್ಕೆ ಬಿಟ್ಟದ್ದು.
ಇದರಲ್ಲಿ ಹೈಕೋರ್ಟ್, ಸುಪ್ರೀಂಕೋರ್ಟ್‌ಗೆ ನಿರ್ದೇಶನ ನೀಡಲು ಹೇಗೆ ಸಾಧ್ಯ ಎಂದರು. ನೇಮಕಕ್ಕೆ ನ್ಯಾಯಾಲಯಗಳು ಶಿಫಾರಸು ಮಾಡಲಾಗದು ಎಂದ ತಿಳಿಸಿದರು. ಇದಕ್ಕೆ ಉತ್ತರಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಮೇಲ್ವಿಚಾರಣೆ ನಡೆಸಬಹುದು ಎಂದು ತಿಳಿಸಿದರು.
ಇದನ್ನು ಒಪ್ಪದ ನ್ಯಾಯಪೀಠ, ನೋಟಿಸ್ ಜಾರಿ ಅಥವಾ ಮೇಲ್ವಿಚಾರಣೆ ಎರಡೂ ಒಂದೇ ಎಂದು ತಿಳಿಸಿತು. ಬಳಿಕ ಬಿ.ವಿ.ಆಚಾರ್ಯ ಸುಪ್ರೀಂ ತೀರ್ಪನ್ನು ಅಧ್ಯಯನಕ್ಕೆ ಕಾಲಾವಕಾಶ ಕೋರಿದರು. ಇದಕ್ಕೆ ಒಪ್ಪಿದ ಪೀಠವು ನ.15ಕ್ಕೆ ವಿಚಾರಣೆ ಮುಂದೂಡಿತು.