Advertisement

ಕಣ ಕಣಕ್ಕೂ ಗತಿ ಮತಿ

12:30 AM Jul 07, 2018 | |

ಶಿವರಸನ್‌ನನ್ನು ತೋರಿಸಿದ್ದಕ್ಕೆ ಅಂದು ಹತ್ತು ಲಕ್ಷ ಕೊಡಿಸಿಯೇ ಕೊಡಿಸ್ತೀವೆಂದರು. ಸರ್ಕಾರದ ಹಣ ಸಿಕ್ಕೇ ಸಿಗುತ್ತದೆಂದು, ನಮ್ಮ ಕುಟುಂಬದ ಬದುಕು ಬದಲಾಗಿಯೇ ತೀರುತ್ತದೆಂದು ಅಮ್ಮ ನಿರೀಕ್ಷಿಸಿದ್ದಷ್ಟೇ ಬಂತು. ಹಣ ಬರಲೇ ಇಲ್ಲ. ನಮಗೆ ಸರ್ಕಾರವೇ ನ್ಯಾಯ ದೊರಕಿಸಿಕೊಡಬೇಕಿದೆ. ಹಾಲಿನ ಮುನಿಯಮ್ಮನ ಮಗ ಹೀಗೆ ಹೇಳುತ್ತಲೇ ಉಳಿದುಬಿಟ್ಟಿದ್ದಾನೆ. 

Advertisement

ಎಲ್‌ಟಿಟಿಇ ವೇಲುಪಿಳ್ಳೆ„ ಪ್ರಭಾಕರನ್‌ನ್ನು ಕಣ್ಮುಂದೆ ಚಿತ್ರಿಸಿಕೊಂಡಾಗಲೆಲ್ಲಾ ಆತನ ಹುಲಿ ಪಟ್ಟೆಯ ಹಸಿರು ಯುನಿಫಾರ್ಮ್, ತಲೆಯ ಮೇಲಿನ ಹಸಿರು ಕ್ಯಾಪು, ದಪ್ಪ ಸೊಂಟ, ಅದರ ಸುತ್ತಲೂ ಪ್ಯಾಂಟಿಗೆ ಜೋಡಿಸಿಕೊಂಡ ಅಗಲವಾದ ಬೆಲ್ಟಾ, ಬೆಲ್ಟಿಗೆ ಸಿಕ್ಕಿಸಿಕೊಂಡ ರಿವಾಲ್ವರ್‌ಗಳು, ಕತ್ತಿಗೆ ಸುತ್ತಿಕೊಂಡು ಷರ್ಟ್‌ ಜೇಬಿನೊಳಕ್ಕೆ ಇಳಿಬಿದ್ದ ಆ ಕಪ್ಪಗಿನ ದಾರ ಎಲ್ಲವೂ ಒಟ್ಟಿಗೇ ಜ್ಞಾಪಕಕ್ಕೆ ಬರುತ್ತದೆ. ಜೇಬಿಗಿಳಿದ ಆ ದಾರದ ಬಗ್ಗೆ ನಮ್ಮ ಕಾಲೇಜು ದಿನಗಳ ಕಾಲಕ್ಕೆ ಆಗುತ್ತಿದ್ದ ಚರ್ಚೆಗಳೇ ಸ್ವಾರಸ್ಯಕರ. ಇಚ್ಛಾ ಮರಣ ದಯಪಾಲಿಸುವ ಸೈನೈಡ್‌ ಎಂಬ ಗುಳಿಗೆಯನ್ನು ಅದಕ್ಕೆ ತೂಗುಹಾಕಲಾಗಿರುತ್ತಂತೆ. ಇನ್ನು ಅನ್ಯದಾರಿಯೇ ಇಲ್ಲ. ವೈರಿ ತನ್ನನ್ನು ಹತಗೊಳಿಸಿಯೇ ತೀರುತ್ತಾನೆ ಎನ್ನುವ ಸಂದರ್ಭದಲ್ಲಿ ಅದನ್ನು ನುಂಗಿ ಅರೆ ಕ್ಷಣದಲ್ಲಿಯೇ ಅವನು ಪ್ರಾಣ ಬಿಟ್ಟುಬಿಡುತ್ತಾನಂತೆ. ಪ್ರಭಾಕರನ್‌ ಯಾವುದೇ ಕಾರಣಕ್ಕೂ ಯಾರ ಕೈಗೂ ಸಿಗುವುದಿಲ್ಲವಂತೆ. ಆತ ಮುಟ್ಟುವಷ್ಟರಲ್ಲಿ ಹೆಣವಾಗಿಬಿಟ್ಟಿರುತ್ತಾನಂತೆ. ಅವನೊಬ್ಬನಷ್ಟೇ ಅಲ್ಲ. ಎಲ್‌ಟಿಟಿಇ ಯೋಧರೆಲ್ಲರೂ ಸೈನೈಡ್‌ ವೀರರಂತೆ. ಸೈನೈಡ್‌ ಎನ್ನುವುದು ಎಲ್‌ಟಿಟಿಇ ಜನರ ಆತ್ಮ ಗೌರವದ ಸಂಕೇತವಂತೆ. 

ಕಾಲು ಶತಮಾನ ಅಷ್ಟು ದೊಡ್ಡ ಅವಧಿಗೆ ಪ್ರಭಾಕರನ್‌ ಸುಮಾರು 15000 ಚದರ ಕಿಲೋಮೀಟರ್‌ ವಿಸ್ತಾರದ ಶ್ರೀಲಂಕಾದ ಉತ್ತರ ಹಾಗೂ ಪೂರ್ವ ಪ್ರಾಂತ್ಯವನ್ನು ಅಕ್ಷರಶಃ ಅನಭಿಷಕ್ತವಾಗಿ ಆಳಿದ. ಅವನು ಆಕ್ರಮಿಸಿಕೊಂಡಿದ್ದ ಆ ಪ್ರದೇಶದಲ್ಲಿ ಅವನದ್ದೇ ತೆರಿಗೆ, ಅವನು ನಿರ್ಮಿಸಿದ್ದೇ ರಸ್ತೆ, ಅವನದ್ದೇ ನ್ಯಾಯಾಲಯ. ಭಾರತದಂತೆಯೇ ಬ್ರಿಟಿಷರ ದಾಸ್ಯದಿಂದ ಮುಕ್ತವಾದ ಶ್ರೀಲಂಕಾಗೆ ಬಾಲಗ್ರಹದಂತೆ ಆಗ ಕಾಡಿದ್ದು ಅಲ್ಲಿನ ಅಲ್ಪಸಂಖ್ಯಾತ ತಮಿಳರ ಪ್ರತ್ಯೇಕ ರಾಜ್ಯದ ಹೋರಾಟ. ಆ ಹೋರಾಟದ ಅತ್ಯಂತ ಪ್ರಬಲ ಯುಗ ಪ್ರಭಾಕರನ್‌ನದ್ದು. ಅವನ ಕೃತ್ಯಗಳಿಗೆ, ಅವನ ಮಾತುಗಳಿಗೆ ಅಂದು ಸಿಕ್ಕಿದ್ದು ಅಂತಾರಾಷ್ಟ್ರೀಯ ಮಾನ್ಯತೆ. ತನ್ನವರನ್ನು ಆತ್ಮಹತ್ಯೆ ದಾಳಿಗಳಿಗೆ ಪ್ರೇರೇಪಿಸಿ ಹುತಾತ್ಮರನ್ನಾಗಿಸುತ್ತಾ, ಸಿಕ್ಕಸಿಕ್ಕಲ್ಲಿ ಶ್ರೀಲಂಕಾ ಸೇನೆಯ ಯೋಧರನ್ನು ಕೊಲ್ಲುತ್ತಾ ವಿಜೃಂಭಿಸಿದ ಪ್ರಭಾಕರನ್‌ ತನ್ನ ಸಾವನ್ನೂ ತನ್ನ ಜೇಬಿನಲ್ಲಿಟ್ಟುಕೊಂಡಿದ್ದೇನೆಂದು ಊಹಿಸಿಕೊಂಡೇ ಕಟು ನಿರ್ದಯಿಯಾಗಿ ವರ್ತಿಸಿದ. ಮಾರ್ಮಿಕವೆಂದರೆ ಹೇಗೆ ತನ್ನ ಸಾವಿನ ರೀತಿಯನ್ನು ಪೂರ್ವ ನಿರ್ಧರಿಸಿಕೊಂಡಿದ್ದನೋ ಹಾಗೆ ಅವನಿಗೆ ಸಾಯಲಾಗಲೇ ಇಲ್ಲ. ಸದಾಕಾಲ ಅವನ ಕೊರಳಿನಲ್ಲಿರುತ್ತಿದ್ದ ಆ ಸೈನೈಡ್‌ ಗುಳಿಗೆಯನ್ನು ತನ್ನ ಸಾವಿಗೆ ಬಳಸಿಕೊಳ್ಳಲಾಗಲೇ ಇಲ್ಲ. ಅವನು ಸತ್ತಿದ್ದು ಥೇಟ್‌ ನಮ್ಮ ಟಿಪ್ಪೂವಿನ ಹಾಗೆ, ಅವನದೇ ಸಾಮ್ರಾಜ್ಯದ ಆವರಣದಲ್ಲಿ. ಅವನನ್ನು ಹೊಡೆದುರುಳಿಸಿದ್ದು ಅದೇ ಶ್ರೀಲಂಕಾ ಪಡೆ. ನಡುವೆ ತಮ್ಮದಲ್ಲದ ತಪ್ಪಿಗೆ ಹತರಾಗಿ ಹೋದವರು ಲಕ್ಷ ಲಕ್ಷ ಜನ. ಹತ ಭಾಗ್ಯರಾದವರು ಮೂರು ಪೀಳಿಗೆಯ ಜನ. ಅವನಿದ್ದಾಗ ತಮಿಳರಿಗೆ ಶ್ರೀಲಂಕೆಯಲ್ಲಿ ಪ್ರತ್ಯೇಕ ಅಸ್ತಿತ್ವ ಸಿಗಲೇ ಇಲ್ಲ. ಅವನು ಕನಸಿದ ಈಳಂ ಸಾಮ್ರಾಜ್ಯ ಇಂದಿಗೂ ಉದಯವಾಗಲೇ ಇಲ್ಲ. 

ಇಂದಿರಾ ಗಾಂಧಿ ಹತರಾದಾಗ ರಾಜೀವ್‌ ಗಾಂಧಿಯನ್ನು ಪ್ರಧಾನಿ ಹುದ್ದೆ ಒಪ್ಪಿಕೊಳ್ಳದಿರಲು ಸೋನಿಯಾ ಅಳುತ್ತ ಗೋಗರೆದಿದ್ದನ್ನು ಪಿಸಿ ಅಲೆಕ್ಸಾಂಡರ್‌ ತಮ್ಮ My Years with Indira Gandhi ಪುಸ್ತಕದಲ್ಲಿ ದಾಖಲಿಸಿದ್ದರು. ದಿಲ್ಲಿಯ ಏಮ್ಸ್‌ (AIIMS) ಆಸ್ಪತ್ರೆಯ ಮೊಗಸಾಲೆಯಲ್ಲಿ ಆಕೆ ರಾಜೀವ್‌ ಗಾಂಧಿಯನ್ನು, ಅವರು ನಿನ್ನನ್ನೂ ಕೊಂದುಬಿಡುತ್ತಾರೆ, ನಿನಗಿದು ಅವಶ್ಯವೇ ಎಂದು ಕಣ್ಣೀರು ಹಾಕುತ್ತಾ ಪ್ರಶ್ನಿಸುತ್ತಿದ್ದರೆ ಆತ ತನಗೆ ವಿಧಿಯಿಲ್ಲವೆಂಬಂತೆ ನಿಂತಿದ್ದದ್ದು ಮನಕಲಕುತ್ತಿತ್ತು ಎಂದು ಅವರು ಬರೆದಿದ್ದರು. ಅಮ್ಮನನ್ನು ಕೊಂದವರೇ ತನ್ನನ್ನೂ ಕೊಲ್ಲುತ್ತಾರೆ ಎನ್ನುವ ಗಟ್ಟಿ ನಂಬಿಕೆಯಿಂದಲೇ ಆತ ಅಧಿಕಾರದ ಚುಕ್ಕಾಣಿ ಹಿಡಿದಿದ್ದು. ಆದರೆ ಇನ್ನಾವುದೋ ಹೋರಾಟದ ಸಾಧನವಾಗಿ ಧನು ಎಂಬ ಆ ಮಹಿಳೆ ಅಂದು ಆತನ ಕಾಲನ್ನು ಮುಟ್ಟಲು ಅವಸರಿಸಿದ್ದು, ಆತ ಸಂಕೋಚಗೊಂಡು ಆಕೆಯನ್ನು ಹಿಡಿದು ಮೇಲೆತ್ತಲು ತವಕಿಸಿದ್ದು, ಆ ತವಕವೇ ಆತನ ಇಡೀ ದೇಹವನ್ನು ಛಿದ್ರಗೊಳಿಸಿದ್ದು. ಈಗ ಎಲ್ಲವೂ ಇತಿಹಾಸ. ನಮ್ಮೂರಿನ, ನಮ್ಮ ಕಾಲೇಜು ದಿನಗಳು ಅವು. ಆಗೆಲ್ಲಾ ಬಣ್ಣದ ಪತ್ರಿಕೆಗಳೆಲ್ಲಿದ್ದವು? ಅಂದಿದ್ದ ಕನ್ನಡದ ದಿನಪತ್ರಿಕೆಗಳ ಪೈಕಿ ಈ ಕುರಿತಂತೆ ಯಾವುದರಲ್ಲಿ ಲೇಟೆಸ್ಟ್‌ ಸುದ್ದಿ ಚಿತ್ರಗಳಿವೆ ಎಂದು ಗೆಳೆಯರ ಮನೆಗಳಿಗೆಲ್ಲಾ ತಡಕಾಡಿ ಅವರ ಮನೆ ಪೇಪರುಗಳನ್ನು ತಿರುವಿ ಹಾಕಿದ್ದ ನೆನಪು ಈಗಲೂ ನನ್ನಲ್ಲಿ ಮಾಸಿಯೇ ಇಲ್ಲ. ರಾಜೀವ್‌ ಗಾಂಧಿಯ ಛಿದ್ರಗೊಂಡ ದೇಹ, ಅದಕ್ಕೆ ನಿತ್ರಾಣವಾಗಿ ಅಂಟಿಕೊಂಡಿದ್ದ ಹರಿದ ಆ ಬಿಳಿಯ ಬಟ್ಟೆ, ದೂರದಲ್ಲಿ ಬಿದ್ದಿದ್ದ ಆತನ ಆ ಲೊಟ್ಟೋ ಬೂಟುಗಳು.. ಇಡೀ ಪತ್ರಿಕೆಯ ಮುಖಪುಟವನ್ನಾವರಿಸಿಕೊಂಡ ಆ ಚಿತ್ರ ಕಪ್ಪು$ಬಿಳುಪಿನದ್ದಾದರೂ ಅದರ ಕೆಂಪಿನ ಕಮಟು ನನ್ನನ್ನು ಖನ್ನನಾಗಿಸಿ ಅದೆಷ್ಟೋ ದಿನಗಳು ಕಾಡಿದ್ದವು. ಶಾಂತಿ ಕಾಪಾಡುತ್ತೇನೆಂದು ಒಪ್ಪಂದ ಮಾಡಿಕೊಂಡು ಸೇನಾಪಡೆ ಕಳಿಸಲು ನಿರ್ಧರಿಸಿದ ರಾಜೀವ್‌ ನಿರ್ಧಾರದಿಂದ ಲೆಕ್ಕಕ್ಕೆ ಸಿಗದಷ್ಟು ಜನ ಶ್ರೀಲಂಕೆಯಲ್ಲಿ ಸತ್ತು ಹೋದರು. ಈಳಂ ಸಾಮ್ರಾಜ್ಯದ ಕಿಚ್ಚು ಅದೆಷ್ಟಿತ್ತೆಂದರೆ ಯಾರದೋ ತಾಯಿ, ಯಾರದೋ ಪತ್ನಿ, ಯಾರದೋ ಮಗು ಲೆಕ್ಕವಿಲ್ಲದಷ್ಟು ಜನ ಈಳಂ ಪರವಾಗಿ ಆತ್ಮಹತ್ಯೆ ದಾಳಿಗೆ ಒಡ್ಡಿಕೊಂಡರು. ಅಲ್ಲಲ್ಲಿ ಬದುಕುತ್ತೀನೆಂದು ಅಲವತ್ತುಕೊಂಡವರನ್ನು ಸಾವು ಬಿಡಲಿಲ್ಲ. ಸಿಕ್ಬರ ಕೈಗೆ ಸಿಕ್ಕು ಸಾಯುತ್ತೇನೆಂದುಕೊಂಡಿದ್ದ ರಾಜೀವ್‌ ಗಾಂಧಿ ಸತ್ತಿದ್ದು ಸಂಬಂಧವೇ ಇಲ್ಲದ ಈಳಂ ಉಗ್ರರ ಕೈಯಲ್ಲಿ. ಎಷ್ಟೋ ಬಾರಿ ಆತಂಕಕ್ಕೂ ಬಯಕೆಗೂ ವ್ಯತ್ಯಾಸಗಳೇ ಮಸುಕಾಗಿಬಿಡುತ್ತವೆ. 

ನಾನು, ನಮ್ಮಮ್ಮನೇ ಪೊಲೀಸರಿಗೆ ಆ ಮನೆಯನ್ನು ತೋರಿಸಲು ಸಹಕರಿಸಿದ್ದು. ಶಿವರಸನ್‌ನನ್ನು ತೋರಿಸಿದ್ದಕ್ಕೆ ಅಂದು ಹತ್ತು ಲಕ್ಷ ಕೊಡಿಸಿಯೇ ಕೊಡಿಸ್ತೀವೆಂದರು. ಸರ್ಕಾರದ ಹಣ ಸಿಕ್ಕೇ ಸಿಗುತ್ತದೆಂದು, ನಮ್ಮ ಕುಟುಂಬದ ಬದುಕು ಬದಲಾಗಿಯೇ ತೀರುತ್ತದೆಂದು ಅಮ್ಮ ನಿರೀಕ್ಷಿಸಿದ್ದಷ್ಟೇ ಬಂತು. ಹಣ ಬರಲೇ ಇಲ್ಲ. ನಮಗೆ ಸರ್ಕಾರವೇ ನ್ಯಾಯ ದೊರಕಿಸಿಕೊಡಬೇಕಿದೆ. ಹಾಲಿನ ಮುನಿಯಮ್ಮನ ಮಗ ಹೀಗೆ ಹೇಳುತ್ತಲೇ ಉಳಿದುಬಿಟ್ಟಿದ್ದಾನೆ. 1991ರಲ್ಲಿ ಬೆಂಗಳೂರಿನಿಂದ ಅಷ್ಟು ದೂರವಾ ಎಂಬಂತಿದ್ದ ಕೋಣನಕುಂಟೆಯೆಂಬ ಹಳ್ಳಿಯ ಹಾಲಿನ ಮುನಿಯಮ್ಮ ಶಿವರಸನ್‌ನನ್ನ, ಅವನ ಸಹಚರರನ್ನ ನೋಡಿದಳಂತೆ ಎನ್ನುವುದೇ ಅಂದಿನ ದೊಡ್ಡ ಸುದ್ದಿ. ಶಿವರಸನ್‌ ಸತ್ತೇ ಹೋದ. ಅವನ ಜೊತೆಗಿದ್ದವರೆಲ್ಲರೂ ಹತರಾದರು. ಇಂತಹ ಘನಕಾರ್ಯವನ್ನು ಮಾಡಿಕೊಟ್ಟಿದ್ದಕ್ಕೆ ಪೊಲೀಸರು ಕೊಟ್ಟ ಕಾಸಿಗೆ ಆಕೆ ಕೊಳ್ಳಲಾಗಿದ್ದು ಆರು ಹಸುಗಳು. ಅದನ್ನೂ ಕಳ್ಳರು ಎತ್ತಿಕೊಂಡು ಹೋದ ಮೇಲೆ ಆಕೆ ಹತಾಶಳಾಗಿ ಸತ್ತೇ ಹೋಗಿದ್ದಾಳೆ. ಕೋಣನಕುಂಟೆ ಬೆಂಗಳೂರಿನೊಳಗೆ ಸೇರಿಕೊಂಡು ಕಾಲವಾಗಿ ಹೋಗಿದೆ. ಗತಕ್ಕೆ ಬಂಧಿಯಾಗಿ ಆಕೆಯ ಮಗನ ಬದುಕು ಗತಿಯನ್ನೇ ಬದಲಿಸಿಕೊಂಡಿದೆ. ಮುನಿಯಮ್ಮನನ್ನ ಕೊಂದವರಾರು ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆ!

Advertisement

ನಿಮ್ಮ ಮಗನನ್ನು ನಾಳೆಯೇ ಕಳಿಸಿಕೊಟ್ಟುಬಿಡುತ್ತೇವೆ..ಸಣ್ಣದೊಂದು ವಿಚಾರಣೆಯಷ್ಟೇ.. ನಾಳೆಯೇ ಎಂದು ಹತ್ತೂಂಬತ್ತೇ ವರ್ಷದ ಅವನ ಕೈಹಿಡಿದು ಪೊಲೀಸರು ಕರೆದೊಯ್ದು ಇಪ್ಪತ್ತೇಳು ವರ್ಷಗಳು ಕರಗಿ ಹೋಗಿವೆ. ಸತ್ಯದೆಡೆಗಿನ ಕಾಲು ದಾರಿಯಲ್ಲಿ ಅವನ ಅಮ್ಮ ನಿತ್ಯವೂ ನಡೆಯುತ್ತಲೇ ಇದ್ದಾಳೆ. ನಡುವಯಸ್ಕಳಾದಾಗ ಆಕೆ ಆರಂಭಿಸಿದ ನಡಿಗೆ ಈಗ ಎಪ್ಪತ್ತು ದಾಟಿದರೂ ಮುಂದುವರೆದಿದೆ. ಕಾಲುಗಳು ಸೋಲುತ್ತಿವೆ. ಆಸೆಯ ಬೆಳಕುಗಳು ಒಂದೊಂದೇ ಆರುತ್ತಲಿವೆ. ಆದರೂ ಆಕೆ ನಸುಗಾಳಿ ನುಸುಳಿದೆಡೆಯಲ್ಲಾ ಅದು ಬೆಳಕಿನ ಕಿಂಡಿಯೇನೋ ಎಂದು ಆಸೆಗಣ್ಣಿನಿಂದ ಎದುರುನೋಡುತ್ತಿದ್ದಾಳೆ. ಮಗ ಅಲ್ಲಿಂದ ಬಂದಾನೇನೋ ಎಂದು ಕಾಯುತ್ತಳೇ ಇದ್ದಾಳೆ. ಹತ್ತೂಂಬತ್ತು ತುಂಬಿದಾಗ ಒಳಗೆ ಬಂದು ಇಂದಿಗೂ ಹೊರಗೆ ಬರಲೇ ಆಗದ ಅಂದಿನ ಆ ಯುವಕನಿಗೆ ಇಂದು ಐವತ್ತರ ಆಸುಪಾಸು. ಅವನು ಮಾಡಿದ ತಪ್ಪಿಗೆ ಮರಣ ದಂಡನೆ ನೀಡಿದ ನ್ಯಾಯಾಲಯಕ್ಕೆ ಇಂದು ಅವನಿಗೆ ಕ್ಷಣಕಾಲ ಸಂತೈಸಿಕೊಳ್ಳಲು ಅವಕಾಶ ನೀಡುವ ಉದಾರತೆ. ಕಾಲದ ಪ್ರಜ್ಞೆಯ ಕೂಸಾಗಿ ಅವನು ನಾಲ್ಕು ಗೋಡೆಗಳ ನಡುವಿನಲ್ಲಿಯೇ ಚಿನ್ನದ ಪದಕದ ಪದವಿ ಪೂರೈಸಿದ್ದಾನೆ. ಜೊತೆಗಾರರೊಂದಿಗೆ ಸೇರಿಕೊಂಡು ಹಾಡು ಹೇಳಿದ್ದಾನೆ. ತನ್ನ ಸಹ ಖೈದಿಗಳಿಗೆ ಪರೀಕ್ಷೆ ಬರೆಯಲು ಪ್ರೇರೇಪಿಸಿದ್ದಾನೆ. ಪಾಠ ಮಾಡಿದ್ದಾನೆ. ಖೈದಿಗಳಿಂದ ಹಿಡಿದು ಪೊಲೀಸರವರೆಗೆ ಎಲ್ಲರಿಗೂ ತನ್ನ ನಡವಳಿಕೆಯ ನಗುವಿನ ಸಿಹಿಯನ್ನು ಹಂಚಿದ್ದಾನೆ. ಇತ್ತ ಅವನ ತಂಗಿಗೆ ಎಂದೋ ಮದುವೆಯಾಗಿದೆ. ಆಕೆಯ ಮಕ್ಕಳು ಸಹಾ ಓದು ಮುಗಿಸಿ ಇಂಜಿನಿಯರ್‌ಗಳಾಗಿದ್ದಾರೆ. ಅರಿವು ಹಾಗೂ ಅರಿವಮ್ಮ.. ಮಗ ಹಾಗೂ ಅಮ್ಮ.. ಒಂದು ಜೀವ ನಂಟು ಹಾಗೆಯೇ ಸ್ಥಿರವಾಗಿ ಉಳಿದಿದೆ. ಅಂದೆಂದೋ ಅವನು ಒಂಬತ್ತು ವೋಲ್ಟಿನ ಬ್ಯಾಟರಿ ಖರೀದಿಸಿ ಅದನ್ನು ಶಿವರಸನ್‌ಗೆ ತಲುಪಿಸಿದನಂತೆ. ಶಿವರಸನ್‌ ಅದನ್ನು ರಾಜೀವ ಗಾಂಧಿ ಹತ್ಯೆಗೆ ಬಳಸಿಕೊಂಡನಂತೆ. ಶಿವರಸನ್‌ ತನ್ನಿಂದ ಅದನ್ನು ಏತಕ್ಕೆ ಪಡೆದ ಎಂಬುದು ತನಗೆ ತಿಳಿದಿಲ್ಲವೆನ್ನುವುದನ್ನು ಆತ ಪ್ರತಿಪಾದಿಸುತ್ತಲೇ ಬಂದಿದ್ದಾನೆ. ಅಮ್ಮನಿಗೋಸ್ಕರವಾದರೂ ಜಗತ್ತಿಗೆ ತಾನು ತಪ್ಪು ಮಾಡಿಲ್ಲವೆಂದು ಗೊತ್ತಾಗಬೇಕೆಂದು ಹಂಬಲಿಸುತ್ತಿದ್ದಾನೆ. ಅವನ ಪರವಾಗಿ ಮಾನವ ಹಕ್ಕುಗಳ ಹೋರಾಟಗಾರರು ನಿಂತಿದ್ದಾರೆ. ಆದರೆ ನ್ಯಾಯದ ವ್ಯಾಖ್ಯಾನ ಬದಲಾಗಲು ಪರಿತಪಿಸುತ್ತಿದೆ.

ಅಂದಹಾಗೆ ರಾಹುಲ್‌ ಗಾಂಧಿ ತನ್ನಪ್ಪನನ್ನು ಕೊಂದ ಎಲ್ಲರನ್ನೂ ತನ್ನ ಕುಟುಂಬ ಕ್ಷಮಿಸಿಬಿಟ್ಟಿದೆ ಎಂದಿದ್ದಾರೆ. ವಿಕಾಸವೆನ್ನುವುದು ಆಗುವುದೇ ಹೀಗೆ. ಒಂದು ಸುದೀರ್ಘ‌ ಅವಧಿಗೆ ದ್ವೇಷವೂ ಕ್ಷಮೆ ಯೊಂದಿಗೆ ಮುಖಾಮುಖೀಯಾಗುತ್ತದೆ. ತರ್ಕವನ್ನು ನಿರಾಕರಿಸುವ, ಅಸಂಗತವನ್ನು ಗೌರವಿಸುವ ಪಕ್ವತೆಯನ್ನು ಕಾಲವೇ ಕಲ್ಪಿಸಿಕೊಡುತ್ತದೆ. ಸರಿಯಾಗಿ ಮೂವತ್ತೆ„ದು ವರ್ಷಗಳ ಹಿಂದೆ (1983) ಇದೇ ಜುಲೈನಲ್ಲಿ ದೂರದ ಶ್ರೀಲಂಕೆಯಲ್ಲಿ ಆರಂಭವಾದ ಆ ಅಂತರ್ಯುದ್ಧ ಕಾಲ ಸರಿದಂತೆಲ್ಲಾ ಯಾರನ್ನೆಲ್ಲಾ ಒಟ್ಟಿಗೆ ಸೇರಿಸಿತು, ಏನೆಲ್ಲಾ ಸಾಬೀತು ಮಾಡಿತೆಂದು ನೆನೆಸಿಕೊಂಡರೆ ಮನಸ್ಸು ಆದ್ರìವಾಗುತ್ತದೆ. 

ಫ‌ಣಿಕುಮಾರ್‌ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next