Advertisement

ಹೆಣ್ಣು ಮಕ್ಕಳ ಲಿಂಗಾನುಪಾತ ಕುಸಿತ; ವ್ಯತ್ಯಾಸ ತಡೆಗೆ ಕ್ರಿಯಾ ಯೋಜನೆ ಅಗತ್ಯ

12:16 AM Nov 14, 2019 | mahesh |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಣ್ಣು-ಗಂಡು ಲಿಂಗಾನುಪಾತದಲ್ಲಿ ವ್ಯತ್ಯಾಸ ಆಗುತ್ತಿರುವ ಬಗ್ಗೆ ಸ್ಪಷ್ಟ ಕ್ರಿಯಾ ಯೋಜನೆ ತಯಾರಿಸುವುದು ಅಗತ್ಯ. ಜಿಲ್ಲೆಯಲ್ಲಿರುವ ಎಲ್ಲ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ ಇಟ್ಟು ಲಿಂಗಪತ್ತೆ ಮಾಡುತ್ತಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಹೇಳಿದರು.

Advertisement

ಜಿ.ಪಂ. ಸಭಾಂಗಣದಲ್ಲಿ ನಡೆದ ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994ರಡಿ ಹೆಣ್ಣು ಮಕ್ಕಳ ಲಿಂಗಾನುಪಾತದಲ್ಲಿನ ವ್ಯತ್ಯಾಸ ಕುರಿತಂತೆ ಅಂತಾರಾಜ್ಯ ಹಾಗೂ ಅಂತರ್‌ ಜಿಲ್ಲಾ ಮಟ್ಟದ ಸಭೆ ಹಾಗೂ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಲಾಜಿಲ್ಲದೆ ಕ್ರಮ ಬಾಲ್ಯವಿವಾಹ, ಕಡಿಮೆ ಸಾಮಾಜಿಕ ಸ್ಥಾನಮಾನ, ಗಂಡು ಮಕ್ಕಳನ್ನು ಪಡೆಯುವ ಹಂಬಲ ಮೊದಲಾದವುಗಳಿಂದ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಕುಸಿತ ಆಗುತ್ತಿದೆ. ಆದರೆ, ಬುದ್ಧಿವಂತರ ಜಿಲ್ಲೆ ದ.ಕ.ದಲ್ಲಿ ಈ ಸಾಮಾಜಿಕ ಪಿಡುಗಿಗೆ ಕಾರಣವಾಗುವ ಅಂಶಗಳು ಮತ್ತು ಕಾರಣಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಬೇಕು. ಹೆಣ್ಣು ಭ್ರೂಣ ಹತ್ಯೆಯಂತಹ ಚಟುವಟಿಕೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ಅಂತಹ ಕ್ರೂರತನ ನಡೆದಲ್ಲಿ ಅಂತಹ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದರು.

ಲಿಂಗಾನುಪಾತ ಹೆಚ್ಚಳ
ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮಾತನಾಡಿ, ಪ್ರಸಕ್ತ ವರ್ಷದ ಎಪ್ರಿಲ್‌ನಿಂದ ಸೆಪ್ಟಂಬರ್‌ ವರೆಗೆ ಸರಾಸರಿ 850ರಿಂದ 950ರಷ್ಟಿದ್ದ ಲಿಂಗಾನುಪಾತ ಅಕ್ಟೋಬರ್‌ನಲ್ಲಿ 1,036 ಆಗಿದೆ. ವ್ಯತ್ಯಾಸ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಸ್ಕ್ಯಾನಿಂಗ್‌ ಸೆಂಟರ್‌ಗಳ ಮೇಲೆ ನಿಗಾ ಇರಿಸಿದೆ. ಜಿಲ್ಲೆಯಲ್ಲಿ 8 ಸರಕಾರಿ ಹಾಗೂ 154 ಖಾಸಗಿ ಸ್ಕ್ಯಾನಿಂಗ್‌ ಸೆಂಟರ್‌ಗಳು ಇದ್ದು, ಪ್ರಸವಪೂರ್ವ ಲಿಂಗ ಪತ್ತೆ ನಿಷೇಧ ಕಾಯ್ದೆ 1994ರ ಬಗ್ಗೆ ಜಾಗೃತಿ ಕೂಡ ಮೂಡಿಸಲಾಗಿದೆ ಎಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಆರ್‌. ಸೆಲ್ವಮಣಿ, ಉಡುಪಿ ಡಿಎಚ್‌ಒ ಡಾ| ಅಶೋಕ್‌, ಪ್ರಭಾರಿ ಐಎಎಸ್‌ ಅಧಿಕಾರಿ ಡಾ| ರಾಹುಲ್‌ ಶಿಂಧೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಡಾ| ರಶ್ಮಿ, ಡಾ| ದಿನೇಶ್‌, ಡಾ| ವತ್ಸಲಾ, ಡಾ| ರವಿಚಂದ್ರ ಜೆ., ಡಾ| ರಾಮಚಂದ್ರ, ಡಾ| ಕಿಶನ್‌ ಆಳ್ವ, ವೆನಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಉಪಸ್ಥಿತರಿದ್ದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಸಿಕಂದರ್‌ ಪಾಷಾ ಸ್ವಾಗತಿಸಿದರು. ಡಾ| ಸುಜಯ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next