Advertisement

ಗ್ರಾಪಂ ಮುತ್ತಿಗೆಗೆ ನಿರ್ಧಾರ

09:42 AM Jun 02, 2019 | Suhan S |

ವಾಡಿ: ಕುಡಿಯುವ ನೀರಿನ ಭೀಕರ ಸಮಸ್ಯೆಗೆ ಸಿಲುಕಿರುವ ಬಳವಡಗಿ ಗ್ರಾಮಸ್ಥರಿಗೆ ಹೋರಾಟಗಾರರ ಸ್ಪಂದನೆ ದೊರೆತಿದ್ದು, ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್‌ ಪಕ್ಷದ ನೇತೃತ್ವದಲ್ಲಿ ಗ್ರಾಮಸ್ಥರು ಹಳಕರ್ಟಿ ಗ್ರಾಪಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕುವ ತೀರ್ಮಾನ ಕೈಗೊಂಡಿದ್ದಾರೆ.

Advertisement

ಗ್ರಾಮಸ್ಥರು ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಕೊಡ ನೀರಿಗಾಗಿ ಹರದಾರಿ ನಡೆಯುತ್ತಿದ್ದಾರೆ. ಪ್ರಖರವಾದ ಬಿಸಿಲು ಲೆಕ್ಕಿಸದೆ ಕಲ್ಲು ಗಣಿಗಳ ಹೊಂಡಗಳಲ್ಲಿ ನೀರು ಹುಡುಕುತ್ತಿದ್ದಾರೆ. ಪಾಚಿಗಟ್ಟಿದ ನೀರು ತರುತ್ತಿದ್ದಾರೆ. ಕಲುಷಿತ ನೀರು ಕುಡಿದು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಟ್ಯಾಂಕರ್‌ ನೀರಿನ ಸೌಲಭ್ಯದಿಂದ ವಂಚಿತಗೊಂಡು ಜಲದಾಹದಿಂದ ತತ್ತರಿಸುತ್ತಿದ್ದಾರೆ. ಗ್ರಾಮದಲ್ಲಿ ನೀರಿನ ಹಾಹಾಕಾರ ಭುಗಿಲೆದ್ದಿದೆ ಎನ್ನುವ ಕುರಿತು ಮೇ 31 ರಂದು ‘ಉದಯವಾಣಿ’ ಪ್ರಕಟಿಸಿದ್ದ ‘ಗಣಿಗಳಲ್ಲಿ ನೀರು ಪತ್ತೆಗೆ ಪರದಾಟ’ ಎನ್ನುವ ವಿಶೇಷ ವರದಿ ಗಮನಿಸಿದ ಎಸ್‌ಯುಸಿಐ ವಾಡಿ ಸಮಿತಿ ಮುಖಂಡರಾದ ಮಲ್ಲಿನಾಥ ಹುಂಡೇಕಲ್ ಹಾಗೂ ಗೌತಮ ಪರತೂರಕರ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆ ನಡೆಸಿದ್ದಾರೆ. ಗ್ರಾಮಸ್ಥರು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿ ಹೋರಾಟ ಹಮ್ಮಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾರೆ.

ಈ ವೇಳೆ ‘ಉದಯವಾಣಿ’ಯೊಂದಿಗೆ ಮಾತನಾಡಿದ ಸಂಘಟಕ ಗೌತಮ ಪರತೂರಕರ, ಬಳವಡಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಜನತೆ ಆಕ್ರೋಶಗೊಂಡಿದ್ದಾರೆ. ಗ್ರಾಮದಲ್ಲಿನ ಬಾವಿ ನೀರು ಕುಡಿಯಲು ಯೋಗ್ಯವಿಲ್ಲ. ನಳಗಳಿಂದ ನೀರು ಸರಬರಾಜು ಆಗುತ್ತಿಲ್ಲ. ಒಡೆದ ಪೈಪ್‌ಲೈನ್‌ಗಳ ದುರಸ್ತಿಯಾಗಿಲ್ಲ. ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಬೇಕೆಂಬ ಕನಿಷ್ಠ ಕರ್ತವ್ಯ ಪ್ರಜ್ಞೆ ಹಳಕರ್ಟಿ ಗ್ರಾಪಂ ಅಧಿಕಾರಿಗಳಿಗಿಲ್ಲ. ಗ್ರಾಮದಲ್ಲಿ ಕಳೆದ ಎರಡು ತಿಂಗಳು ನೀರಿಗಾಗಿ ಪರದಾಟ ಶುರುವಾಗಿದೆ. ದೂರದ ಕಲ್ಲು ಗಣಿಗಳಿಂದ ಕುಡಿಯಲು ನೀರು ತರುತ್ತಿರುವುದು ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಂತಾಗಿದೆ. ಜನರು ಹೋರಾಟಕ್ಕೆ ಸಿದ್ಧರಾಗಿದ್ದು, ಜೂನ್‌ 3ರಂದು ಹಳಕರ್ಟಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಖಾಲಿ ಕೊಡಗಳ ಪ್ರದರ್ಶನ ಮಾಡಲು ಗ್ರಾಮಸ್ಥರ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next