ಮುಂಬೈ: ಟೀಂ ಇಂಡಿಯಾ ಕಂಡ ಟ್ಯಾಲೆಂಟೆಡ್ ಎಡಗೈ ಬ್ಯಾಟರ್ ಶಿಖರ್ ಧವನ್ (Shikhar Dhawan) ಅವರು ಇಂದು ಅಂತಾರಾಷ್ಟ್ರೀಯ ಮತ್ತು ದೇಶಿಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ನಿರ್ಧಾರವನ್ನು ಪ್ರಕಟಿಸಿದರು. ಪ್ರೀತಿ ಮತ್ತು ಬೆಂಬಲಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.
ಹಿಂದೂಸ್ತಾನ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ತನ್ನ ನಿವೃತ್ತಿಯ ಬಗ್ಗೆ ಹೇಳಿರುವ ಧವನ್, ಇದು ಕಷ್ಟದ ನಿರ್ಧಾರ ಅಲ್ಲದಿದ್ದರೂ, ಭಾವನಾತ್ಮಕವಾಗಿದೆ ಎಂದು ಹೇಳಿದರು.
“ಕಷ್ಟವಲ್ಲ, ಆದರೆ ಭಾವನಾತ್ಮಕವಾಗಿ ಹೌದು. ಆದರೆ ಇದರ ಬಗ್ಗೆ ಬೇಸರವಿಲ್ಲ. ನಾನು ನನ್ನ ಅರ್ಧ ಜೀವನವನ್ನು ಕ್ರಿಕೆಟ್ ಗಾಗಿ ನೀಡಿದ್ದೇನೆ. ಈಗ ನಿವೃತ್ತಿಯ ಸಮಯ. ಬಹುಶ ಇದು ವಿರಾಮದ ಸಮಯ. ನಾನು ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯುತ್ತಿದ್ದೇನೆ” ಎಂದು ಗಬ್ಬರ್ ಹೇಳಿದರು.
“ಕ್ರಿಕೆಟ್ ತ್ಯಜಿಸಿದರೆ ನಾನೇಕೆ ಖ್ಯಾತಿಯನ್ನು ಕಳೆದುಕೊಳ್ಳುತ್ತೇನೆ? ಯಾರಿಗೆ ಗೊತ್ತು, ಖ್ಯಾತಿಯೂ ಹೆಚ್ಚಾಗಬಹುದು. ನಾನು ಜನರ ಹೃದಯದ ಅರಸ. ಕ್ರಿಕೆಟ್ ಮೂಲಕ ಮಾತ್ರವಲ್ಲ … ಕೆಲವೊಮ್ಮೆ ನನ್ನ ಇನ್ಸ್ಟಾಗ್ರಾಮ್ ರೀಲ್ಗಳ ಮೂಲಕವೂ. ನಾನು ಜನರಿಂದ ಪಡೆಯುವ ಪ್ರೀತಿಯು ಬೆಳೆಯುತ್ತಲೇ ಇರುತ್ತದೆ, ನಾನು ಅದನ್ನು ಖಚಿತವಾಗಿ ಹೇಳುತ್ತೇನೆ” ಎಂದು ಧವನ್ ಹೇಳಿದರು.
ದೆಹಲಿಯ ಧವನ್ ಅವರು 34 ಟೆಸ್ಟ್, 167 ಏಕದಿನ ಪಂದ್ಯಗಳು ಮತ್ತು 68 ಅಂತಾರಾಷ್ಟ್ರೀಯ ಟಿ20ಗಳಲ್ಲಿ ಭಾರತ ತಂಡವನ್ನು ಪ್ರಕಟಿಸಿದ್ದಾರೆ. ಏಕದಿನ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಅವರು 44.11 ರ ಸರಾಸರಿಯಲ್ಲಿ 6793 ರನ್ ಗಳಿಸಿದ್ದಾರೆ. ಏಕದಿನ ಮಾದರಿಯಲ್ಲಿ ಅವರು 17 ಶತಕ ಮತ್ತು 39 ಅರ್ಧಶತಕ ಬಾರಿಸಿದ್ದಾರೆ.
ಶಿಖರ್ ಧವನ್ ಅವರು 2022ರಲ್ಲಿ ಬಾಂಗ್ಲಾದೇಶ ವಿರುದ್ದ ಕೊನೆಯದಾಗಿ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.