ಹುಬ್ಬಳ್ಳಿ: ಕಳಸಾ-ಬಂಡೂರಿ ಸಮಸ್ಯೆ ಇತ್ಯರ್ಥಕ್ಕೆ ಶೀಘ್ರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಳಿಗೆ ರೈತರ ನಿಯೋಗ ತೆರಳಲು ಇಲ್ಲಿನ ಸರ್ಕಿಟ್‌ಹೌಸ್ ನಲ್ಲಿ ನಡೆದ ಮಹದಾಯಿ, ಕಳಸಾ-ಬಂಡೂರಿ ಪಕ್ಷಾತೀತ ರೈತ ಹೋರಾಟ ಸಮಿತಿ ಸಭೆಯಲ್ಲಿ ನಿರ್ಧರಿಲಾಯಿತು. ಸಚಿವರೊಂದಿಗೆ ರೈತ ಮುಖಂಡರು ಸೇರಿ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವಂತೆ ಕೋರಲು ಹಾಗೂ ಎಲ್ಲ ರೈತರು ಒಗ್ಗಟ್ಟಿನಿಂದ ಹೋರಾಟ ಮುಂದುವರಿಸಲು ನಿರ್ಧರಿಸಲಾಯಿತು.
ರೈತ ಮುಖಂಡ ಬಸವರಾಜ ಸಾಬಳೆ ಮಾತನಾಡಿ, ಎಲ್ಲ ರೈತ ಹೋರಾಟಗಾರರು ಒಂದೇ ವೇದಿಕೆಯಡಿ ಹೋರಾಟ ಸಂಘಟಿಸುವುದು ಮುಖ್ಯ. ಸಂಘಗಳ ಹೆಸರಿನಲ್ಲಿ ರೈತರಲ್ಲಿ ಯಾವುದೇ ಒಡಕು ಬೇಡ. ನಮ್ಮ ಬೇಡಿಕೆ ಏನಿದ್ದರೂ ಕಳಸಾ-ಬಂಡೂರಿ ಅನುಷ್ಠಾನವಾಗಿದೆ. ಬೇಡಿಕೆ ಈಡೇರಿಕೆಗಾಗಿ ನಮ್ಮಲ್ಲಿನ ಭಿನ್ನಾಭಿಪ್ರಾಯ ದೂರ ಇರಿಸಬೇಕು ಎಂದರು.
ಕೆಲ ತಿಂಗಳುಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದ್ದು, ರೈತ ಮುಖಂಡರು ಸಂಸದರನ್ನು ಕರೆದು ಪ್ರಧಾನಿ ಮೇಲೆ ಒತ್ತಡ ಹೇರುವಂತೆ ಆಗ್ರಹಿಸಬೇಕಿದೆ. ರೈತರ ಸ್ಥಿತಿಗೆ ಸ್ಪಂದಿಸುವಂತೆ ಒತ್ತಡ ಹೇರಬೇಕಿದೆ ಎಂದರು. ಮಲ್ಲಿಕಾರ್ಜುನಗೌಡ ಬಾಳನಗೌಡರ ಮಾತನಾಡಿ, ರೈತರಲ್ಲಿ ಒಗ್ಗಟ್ಟಿನ ಕೊರತೆಯಿದೆ. ಒಗ್ಗಟ್ಟಿನಿಂದ ಹೋರಾಡಿದರೆ ಖಂಡಿತಾ ಬೇಡಿಕೆ ಈಡೇರಲು ಸಾಧ್ಯ. 1000ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆದರೂ ಪ್ರಧಾನಿ ಸ್ಪಂದಿಸದಿರುವುದು ಖಂಡನೀಯ ಎಂದರು. ವೈ.ಬಿ.ಇನಾಮತಿ ಮಾತನಾಡಿ, ರೈತರಲ್ಲಿ ಸಣ್ಣ ರೈತರು ಹಾಗೂ ದೊಡ್ಡ ರೈತರೆಂದು ಭೇದ ಮಾಡದೇ ಎಲ್ಲ ರೈತರ ಸಾಲವನ್ನು ಏಕಕಾಲಕ್ಕೆ ಮನ್ನಾ ಮಾಡಬೇಕು ಎಂದರು.
ಜೂನ್ 10ರ ಬಂದ್‌ಗೆ ಬೆಂಬಲ: ಹೋರಾಟಗಾರ ಅಮೃತ ಇಜಾರಿ ಮಾತನಾಡಿ, ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಉತ್ತರ ಹಾಗೂ ಮಧ್ಯ ಭಾರತದ ರೈತ ಸಂಘಟನೆಗಳು ಕರೆ ನೀಡಿದ ಭಾರತ ಬಂದ್‌ಗೆ ಮಹದಾಯಿ, ಕಳಸಾ-ಬಂಡೂರಿ ಪಕ್ಷಾತೀತ ರೈತ ಹೋರಾಟ ಸಮಿತಿ ಬೆಂಬಲ ನೀಡಲಿದೆ. ಕೇಂದ್ರ ಸರಕಾರ ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿರುವುದು ಖಂಡನೀಯ ಎಂದರು. ಕಳಸಾ-ಬಂಡೂರಿಗಾಗಿ ನಡೆದ ಹೋರಾಟದಲ್ಲಿ ಪಾಲ್ಗೊಂಡ ಹೋರಾಟಗಾರರ ಮೇಲಿನ ಎಲ್ಲ ಬಾಕಿ ಪ್ರಕರಣಗಳನ್ನು ಹಿಂಪಡೆಯಬೇಕೆಂದು ಸರಕಾರಕ್ಕೆ ಆಗ್ರಹಿಸಬೇಕು. ಮೃತರ ಕುಟುಂಬಗಳಿಗೆ ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಸುಭಾಸಗೌಡ ಪಾಟೀಲ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ರೈತರ ಬಗ್ಗೆ ಕಾಳಜಿ ಇಲ್ಲ. ಕಳೆದ 3 ವರ್ಷಗಳಿಂದ ರೈತರು ಹೋರಾಡುತ್ತಿದ್ದರೂ ಸ್ಪಂದಿಸದ ಪ್ರಧಾನಿ ಮೋದಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಬಂದಾಗ ಕಳಸಾ-ಬಂಡೂರಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಮಾತನಾಡಿದ್ದಾರೆ. ನಾವು ಹೋರಾಟ ಮುಂದುವರಿಸಬೇಕು ಎಂದು ತಿಳಿಸಿದರು.
ರೈತ ಮುಖಂಡರಾದ ಸಿ.ಸಿ.ಪಾಟೀಲ, ಶಿವಣ್ಣ ಹುಬ್ಬಳ್ಳಿ, ಬಸಪ್ಪ ಈರಣ್ಣವರ, ಕುಮಾರಸ್ವಾಮಿ ಹಿರೇಮಠ, ಸಂಜೀವ ಧುಮ್ಮಕನಾಳ, ರಾಜು ಪಾಟೀಲ, ಮಂಜುನಾಥ ಲೂತಿಮಠ, ರೆಹಮಾನ್ ನದಾಫ, ಹೇಮನಗೌಡ ಬಸನಗೌಡರ ಮೊದಲಾದವರು ಸಭೆಯಲ್ಲಿದ್ದರು.
ರೈತರಿಂದ ಸಂಗ್ರಹಿಸಿದ ಹಣದ ಲೆಕ್ಕ ನೀಡಲಿ ಕೋಡಿಹಳ್ಳಿ ಚಂದ್ರಶೇಖರ, ಶಾಂತಕುಮಾರ ಅವರಿಗೆ ಉತ್ತರ ಕರ್ನಾಟಕದ ರೈತರ ಬಗ್ಗೆ ಕಾಳಜಿ ಇಲ್ಲ. ಅವರು ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಳೆದ ಬಾರಿ ಚಂದ್ರಶೇಖರ ಧಾರವಾಡಕ್ಕೆ ಬಂದಾಗ ಪ್ರತಿಯೊಬ್ಬ ರೈತರಿಂದ 50 ರೂ. ಹಣ ಸಂಗ್ರಹಿಸಿದರು. ಸ್ತ್ರೀ ಶಕ್ತಿ ಸಂಘಗಳಿಂದಲೂ ಹಣ ಸಂಗ್ರಹಿಸಿದರು. ಸಾಲ ಮನ್ನಾ ಮಾಡುವುದಕ್ಕಾಗಿ ಬಳಸಲಾಗುವುದು ಎಂದು ಸುಳ್ಳು ಹೇಳಿ ಹಣ ಪಡೆದು ಹೋದರು. ಜಿಲ್ಲೆಯಿಂದ ಸುಮಾರು 20 ಲಕ್ಷ ರೂ. ಸಂಗ್ರಹಿಸಿದ್ದು, ಅದನ್ನು ಯಾವುದಕ್ಕೆ ಖರ್ಚು ಮಾಡಿದ್ದಾರೆಂಬುದನ್ನು ನಾವು ಕೇಳಬೇಕಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನಗೌಡ ಬಾಳನಗೌಡರ ಹೇಳಿದರು.