Advertisement

ಶಬರಿಮಲೆ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ

12:30 AM Jan 05, 2019 | Team Udayavani |

ಶಬರಿಮಲೆ/ಹೊಸದಿಲ್ಲಿ: ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ಮೂಲಕ ಅಯ್ಯಪ್ಪ ದೇಗುಲದ ಸಂಪ್ರದಾಯವನ್ನು ನಾಶ ಮಾಡಲು ಸಿಪಿಎಂ ಮತ್ತು ತೀವ್ರಗಾಮಿ ಗುಂಪುಗಳು ಸಂಚು ರೂಪಿಸಿವೆ ಎಂದು ಶಬರಿಮಲೆ ಕರ್ಮ ಸಮಿತಿ ಆರೋಪಿಸಿದೆ. ಶಬರಿಮಲೆಯ ಪರಿಸ್ಥಿತಿ ಕುರಿತು ಶುಕ್ರವಾರ ನಡೆದ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಕೇರಳದಾದ್ಯಂತ ಪ್ರತಿಭಟನೆ ತೀವ್ರಗೊಳಿಸಲು ನಿರ್ಧರಿಸಲಾಗಿದೆ. ಮಾವೋವಾದಿಗಳ ಬೆಂಬಲದಿಂದ ಇಬ್ಬರು ಮಹಿಳೆಯರು ದೇಗುಲ ಪ್ರವೇಶಿಸಿದ್ದರು. ಆ ಬಗ್ಗೆ ಎನ್‌ಐಎ ತನಿಖೆ ನಡೆಯಬೇಕು ಎಂದು ಸಮಿತಿ ಆಗ್ರಹಿಸಿದೆ. ಅಲ್ಲದೆ, ಕೇರಳ ಸರಕಾರದ ವಿರುದ್ಧ ಇದೇ 11, 12 ಮತ್ತು 13ರಂದು ಹಿಂದೂ ನಾಯಕರು ರಥಯಾತ್ರೆ ಕೈಗೊಳ್ಳಲಿದ್ದಾರೆ. ತಿರುವನಂತಪುರಂ, ಕೊಲ್ಲಂ, ಪಟ್ಟಣಂತಿಟ್ಟ ಮತ್ತು ಅಳಪ್ಪುಳ ಹೊರತುಪಡಿಸಿ 10 ಜಿಲ್ಲೆಗಳಲ್ಲಿ ರಥಯಾತ್ರೆ ನಡೆಯಲಿದೆ. ಜ.14ರಂದು ಅಂದರೆ ಮಕರ ಸಂಕ್ರಾಂತಿಯ ದಿನ 18 ಕೋಟಿ ಮಕರ ಜ್ಯೋತಿಗಳನ್ನು ಬೆಳಗಿಸಲಿದ್ದೇವೆ ಎಂದು ಕರ್ಮ ಸಮಿತಿ ನಾಯಕ ಎಸ್‌.ಜೆ.ಆರ್‌. ಕುಮಾರ್‌ ಹೇಳಿದ್ದಾರೆ.

Advertisement

ಮೋದಿ ಭೇಟಿ ರದ್ದು: ಈ ನಡುವೆ, ಪ್ರಧಾನಿ ಮೋದಿ ಅವರ ಜ.6ರ ಪಟ್ಟಣಂತಿಟ್ಟ ಭೇಟಿ ರದ್ದಾಗಿದೆ. ಬೇರೆ ಕಾರ್ಯಕ್ರಮಗಳು ಇರುವ ಕಾರಣ ಭೇಟಿ ರದ್ದು ಮಾಡಲಾಗಿದೆ ಎಂದು ಬಿಜೆಪಿ ತಿಳಿಸಿದೆ.

ಲೋಕಸಭೆಯಲ್ಲೂ ಪ್ರಸ್ತಾಪ: ಶುಕ್ರವಾರ ಕೈಗಳಿಗೆ ಕಪ್ಪು ಪಟ್ಟಿ ಧರಿಸಿಕೊಂಡು ಬಂದಿದ್ದ ಕಾಂಗ್ರೆಸ್‌ ಸಂಸದ ಕೆ.ಕೆ.ವೇಣುಗೋಪಾಲ್‌, ಲೋಕಸಭೆಯಲ್ಲಿ ಶಬರಿಮಲೆ ವಿಚಾರ ಪ್ರಸ್ತಾಪಿಸಿದ್ದಾರೆ. ಕೇರಳದ ಸ್ಥಿತಿ ನೋಡಿ ಬೇಸರವಾಗುತ್ತಿದೆ. ಬಿಜೆಪಿಯ ಹರತಾಳದಿಂದಾಗಿ ಹಿಂಸಾಚಾರ ನಡೆದಿದ್ದು, ಶಾಂತಿ ಸ್ಥಾಪನೆಯ ಕಾರ್ಯ ತುರ್ತಾಗಿ ನಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ವೇಳೆ ಬಿಜೆಪಿ ಸಂಸದೆ ಮೀನಾಕ್ಷಿ ಲೇಖೀ ಮಾತನಾಡಿ, ಹಿಂದೂಧರ್ಮದ ಬಗ್ಗೆ ಗೊತ್ತಿಲ್ಲದವರು ಹೀಗೆಲ್ಲ ಮಾತನಾಡುತ್ತಾರೆ. ಇವರೆಲ್ಲರೂ ಧರ್ಮ ವಿರೋಧಿಗಳು ಎಂದು ಕಿಡಿಕಾರಿದ್ದಾರೆ.

ಶಶಿಕಲಾ ಪ್ರವೇಶಕ್ಕೆ ಸಿಸಿಟಿವಿ ಸಾಕ್ಷಿ
ಶ್ರೀಲಂಕಾದ ತಮಿಳು ಮಹಿಳೆ ಶಶಿಕಲಾ ದೇಗುಲ ಪ್ರವೇಶಿಸಿ ರುವುದು ನಿಜ ಎಂದು ಅಧಿಕೃತ ಮೂಲಗಳೂ ಸ್ಪಷ್ಟಪಡಿಸಿವೆ. ಆದರೆ, ಶಶಿಕಲಾ ಮಾತ್ರ ಇದನ್ನು ಒಪ್ಪುತ್ತಿಲ್ಲ. ಹೀಗಾಗಿ, ಪೊಲೀಸರು ದೇಗುಲದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡುವ ಮೂಲಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಶಶಿಕಲಾ ಅವರು ಸನ್ನಿಧಾನಂ ಕಡೆಗೆ ಹೆಜ್ಜೆಯಿಡುತ್ತಿರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಶ್ರೀಕೋವಿಲ್‌ನಲ್ಲಿ ಅಳವಡಿಸಲಾಗಿದ್ದ ಕಣ್ಗಾವಲು ಕ್ಯಾಮೆರಾದಲ್ಲಿ ಶಶಿಕಲಾ ಮತ್ತು ಅವರೊಂದಿಗಿದ್ದ ಪುರುಷರೊಬ್ಬರು ದರ್ಶನ ಪಡೆದು ವಾಪಸಾಗುತ್ತಿರುವುದು ಕೂಡ ದಾಖಲಾಗಿದೆ. ಶಶಿಕಲಾ ಅವರ ತಲೆಯಲ್ಲಿ ಇರುಮುಡಿ ಕೆಟ್ಟು ಕೂಡ ಇದೆ.

ಇಲ್ಲವೇ ಇಲ್ಲ ಎನ್ನುತ್ತಿರುವ ಶಶಿಕಲಾ ಕುಟುಂಬ
ಪೊಲೀಸರು ಹಾಗೂ ಸರಕಾರದ ಹೇಳಿಕೆಯನ್ನು ಶಶಿಕಲಾ ಮತ್ತು ಕುಟುಂಬ ಅಲ್ಲಗಳೆದಿದೆ. ಈ ಕುರಿತು ಮಾತನಾಡಿರುವ ಶಶಿಕಲಾ, “ನಾನು ಅಯ್ಯಪ್ಪ ಭಕ್ತೆ. 41 ದಿನಗಳ ವ್ರತವನ್ನೂ ಮಾಡಿದ್ದೇನೆ. ನಾನು ದೇಗುಲಕ್ಕೆ ಹೋದಾಗ ಭಕ್ತರ್ಯಾರೂ ವಿರೋಧಿ ಸಲಿಲ್ಲ. ಆದರೆ, ಪೊಲೀಸರೇ ನನ್ನನ್ನು ತಡೆದು, ವಾಪಸ್‌ ಕಳುಹಿಸಿದರು. ದೇವರ ದರ್ಶನಕ್ಕೆ ನನಗೇಕೆ ಅವಕಾಶ ನೀಡಲಿಲ್ಲ? ನಿಮಗೆಲ್ಲರಿಗೂ ಅಯ್ಯಪ್ಪನೇ ಉತ್ತರ ಕೊಡುತ್ತಾನೆ. ನಾನು ಯಾರು ಎಂಬುದು ನಿಮಗೆ ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಪಂಪಾದಲ್ಲಿ ವರದಿಗಾರರ ಜತೆ ಮಾತನಾಡಿದ ಶಶಿಕಲಾ ಅವರ ಪತಿ ಶರವಣನ್‌, “ನಾನು, ಪತ್ನಿ ಹಾಗೂ ಪುತ್ರ ಅಯ್ಯಪ್ಪ ದರ್ಶನಕ್ಕಾಗಿ ತೆರಳಿದ್ದು ನಿಜ. ಆದರೆ, ನನ್ನ ಪತ್ನಿಯನ್ನು 18 ಮೆಟ್ಟಿಲು ಹತ್ತಲು ಪೊಲೀಸರು ಬಿಡಲಿಲ್ಲ. ಅವರು ಆಕೆಯನ್ನು ವಾಪಸ್‌ ಕಳುಹಿಸಿದರು. ಹೀಗಾಗಿ, ನಾನು ಮತ್ತು ಮಗ ಮಾತ್ರ ಅಯ್ಯಪ್ಪನ ದರ್ಶನ ಪಡೆದೆವು’ ಎಂದಿದ್ದಾರೆ. ಆದರೆ ಭದ್ರತೆಯ ಭಯದಿಂದ ಶಶಿಕಲಾ ಕುಟುಂಬ ಈ ರೀತಿ ಹೇಳುತ್ತಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಕತ್ತಲಲ್ಲಿ ಮಹಿಳೆಯರನ್ನು ದೇಗುಲ 
ಪ್ರವೇಶಿಸುವಂತೆ ಮಾಡಿದ್ದು ಹೇಡಿತನದ ಕೃತ್ಯ. ಮುಸ್ಲಿಮರು, ಕ್ರಿಶ್ಚಿಯನ್ನರ ಪದ್ಧತಿಯಲ್ಲಿ ಕೋರ್ಟ್‌ ಮಧ್ಯಪ್ರವೇಶ ಮಾಡುತ್ತದೆಯೇ? ಹಿಂದೂಗಳ ಸಂಪ್ರದಾಯದಲ್ಲೇಕೆ ಈ ನೀತಿ?
ಮಾಧವನ್‌ ನಾಯರ್‌, ಬಿಜೆಪಿ ನಾಯಕ

ಸುಪ್ರೀಂ ಆದೇಶ ಕೇವಲ ಸಲಹೆಯಷ್ಟೆ. ಆದರೆ, ಅದರ ದೋಷಪೂರಿತ ಅನುಷ್ಠಾನದ ಮೂಲಕ ಕೇರಳ ಸರಕಾರವು ದೇಗುಲವನ್ನು ಅಪವಿತ್ರಗೊಳಿಸುತ್ತಿದೆ.
ಜೆ.ನಂದಕುಮಾರ್‌, ಆರೆಸ್ಸೆಸ್‌ ನಾಯಕ

ಕಲ್ಲಿಕೋಟೆಯ ಮಲಬಾರ್‌ ದೇವಸ್ವಂ ಬೋರ್ಡ್‌ ಸದಸ್ಯನ ಮನೆ ಮೇಲೆ ಕಚ್ಚಾ ಬಾಂಬ್‌ ದಾಳಿ
ಅಡೂರ್‌ನ ಮೊಬೈಲ್‌ ಮಳಿಗೆಗೆ ಸ್ಫೋಟಕ ಎಸೆತ
ಕಣ್ಣೂರಿನಲ್ಲಿ 4 ಕಡೆ ಕಚ್ಚಾ ಬಾಂಬ್‌ ದಾಳಿ
ಬಿಜೆಪಿ ಕಚೇರಿಗೆ ಬೆಂಕಿ
ಬಿಜೆಪಿ ಮತ್ತು ಸಿಪಿಎಂ ನಾಯಕರ ಮನೆಗಳ ಮೇಲೆ ದಾಳಿ, ಕಲ್ಲುತೂರಾಟ

Advertisement

Udayavani is now on Telegram. Click here to join our channel and stay updated with the latest news.

Next