Advertisement
ಈ ನಿರ್ಣಯದಿಂದ 9 ವರ್ಷಗಳಿಂದ ಅತಂತ್ರರಾಗಿದ್ದ ಸುಮಾರು 60ಕ್ಕೂ ಅಧಿಕ ಕುಟುಂಬಗಳಿಗೆ ನೆರವಾಗಲಿದೆ.ಮೇಯರ್ ಕವಿತಾ ಸನಿಲ್ ಅವರ ಅಧ್ಯಕ್ಷತೆಯಲ್ಲಿ, ಮನಪಾ ನಗರ ಯೋಜನೆ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷ ರವೂಫ್ ನೇತೃತ್ವದಲ್ಲಿ ಮಂಗಳವಾರ ನಡೆದ ಸ್ಥಾಯೀ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪಂಪ್‌ವೆಲ್‌ನಲ್ಲಿ ನೂತನ ಬಸ್ ತಂಗುದಾಣಕ್ಕೆ 1ನೇ ಹಂತದಲ್ಲಿ 7.50 ಎಕ್ರೆ ಹಾಗೂ 4 ಎಕ್ರೆ ಸಹಿತ ಒಟ್ಟು 11.50 ಎಕ್ರೆ ಭೂಮಿಯನ್ನು ಮೊದಲು ಭೂಸ್ವಾಧೀನ ಮಾಡಲಾಗಿತ್ತು.
ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣವಾದ ಬಳಿಕ ಇದರೊಳ ಗಡೆಯೇ ಬಸ್ ನಿಲ್ದಾಣ ಕಲ್ಪಿಸಲು ನಕ್ಷೆ ಸಿದ್ಧಪಡಿಸಲಾಗಿತ್ತು.
Related Articles
ಕಳೆದ 9 ವರ್ಷಗಳಿಂದ ಈ ಭೂಮಿ ಕಡತದಲ್ಲಿ “ಪಾಲಿಕೆಯದ್ದು’ ಎಂದೇ ಉಳಿದುಕೊಂಡಿತ್ತು. ಅತ್ತ ಜಾಗ ಕಳೆದುಕೊಂಡವರಿಗೆ ಹಣವೂ ಇಲ್ಲ. ಇತ್ತ ಭೂಮಿಯೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ವಾಗಿತ್ತು. ತೀರಾ ಬಡ ಕುಟುಂಬಗಳು ಈ ಜಾಗದಲ್ಲಿ ನೆಲೆಸಿದ ಕಾರಣ ಮನೆ ಸಹಿತ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳನ್ನು ಈ ಭೂಮಿಯಲ್ಲಿ ನಡೆಸಲು ಅವಕಾಶವಿರಲಿಲ್ಲ. “ತಮ್ಮ ಜಾಗವನ್ನು ಪಡೆದು ಪರಿಹಾರ ಮೊತ್ತವನ್ನಾದರೂ ನೀಡಿ, ಅಥವಾ ಭೂಮಿ ಯನ್ನು ವಾಪಸ್ ಕೊಡಿ’ ಎಂದು ಈ ಕುಟುಂಬಗಳು ಹಲವು ಬಾರಿ ಪಾಲಿಕೆಗೆ ಮನವಿ ಕೂಡ ಸಲ್ಲಿಸಿತ್ತು.
2014ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮತ್ತು ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣ ಕೈಬಿಡಲು ಮನಪಾಕ್ಕೆ ಸೂಚನೆ ನೀಡಲಾಗಿತ್ತು.
Advertisement
ಅಂದು 19 ಕೋಟಿ; ಈಗ 30 ಕೋಟಿ ಪರಿಹಾರ..!2ನೇ ಹಂತದ ಭೂಸ್ವಾಧೀನ ಮಾಡಿರುವ ಭೂಮಿಗೆ 2009ರಲ್ಲಿ 19 ಕೋಟಿ ರೂ. ಇದ್ದ ಪರಿಹಾರ ಮೊತ್ತ ಈಗ 30 ಕೋಟಿ ರೂ.ಗೆ ಏರಿಕೆಯಾಗಿದೆ. ಇಷ್ಟು ದೊಡ್ಡ ಮೊತ್ತವನ್ನು ಪರಿಹಾರ ನೀಡಲು ಪಾಲಿಕೆಗೆ ಕಷ್ಟ ಸಾಧ್ಯ. ಜತೆಗೆ ಬಸ್ ನಿಲ್ದಾಣಕ್ಕೆಂದು (11.50 ಎಕರೆ) ಈಗಾಗಲೇ ಜಾಗ ಮೀಸಲಿರಿಸಿರುವುದರಿಂದ ಹೆಚ್ಚುವರಿಯಾಗಿ ಅನಗತ್ಯವಾಗಿ ಬೇರೆ ಜಮೀನಿನ ಆವಶ್ಯಕತೆ ಇಲ್ಲ ಮತ್ತು 60 ಕುಟುಂಬಗಳು ಈ ಸಂಬಂಧ ಕಳೆದ 9 ವರ್ಷಗಳಿಂದ ಭೂಮಿ ಅಥವಾ ಪರಿಹಾರ ನೀಡುವಂತೆ ನಿರಂತರವಾಗಿ ಪಾಲಿಕೆಗೆ ಮನವಿ ಮಾಡುತ್ತಿರುವ ಕಾರಣದಿಂದ ಜಾಗ ಕೈಬಿಡಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ. ಈಗ ನಗರ ಯೋಜನಾ ಸ್ಥಾಯೀ ಸಮಿತಿಯಲ್ಲಿ ಕೆಲವರ ವಿರೋಧದ ಮಧ್ಯೆಯೂ 2ನೇ ಹಂತದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ನಿರ್ಣಯ ಕೈಗೊಂಡಿದೆ. ಮುಂದಿನ ಪಾಲಿಕೆ ಸಭೆಯಲ್ಲಿ ಇದು ಸ್ಥಿರೀಕರಣಗೊಳ್ಳುವ ಸಾಧ್ಯತೆ ಇದೆ. ಈ ಮೂಲಕ ಕಳೆದ 9 ವರ್ಷಗಳಿಂದ ಭೂಮಿಯೂ ಇಲ್ಲ ಪರಿಹಾರವೂ ಇಲ್ಲ ಎಂದು ಕಾಯುತ್ತ ಕುಳಿತಿರುವ ಸುಮಾರು 60 ಕುಟುಂಬಗಳು ನಿಟ್ಟುಸಿರು ಬಿಡುವಂತಾಗಿದೆ ಎಂದು ಮೂಲಗಳು ತಿಳಿಸಿವೆ. ಬಸ್ ನಿಲ್ದಾಣ ನಿರ್ಮಾಣ: ಪ್ರಸ್ತಾವನೆ ಪರಿಶೀಲನೆ
ಪಂಪ್‌ವೆಲ್‌ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಕಲ್ಪಿಸುವ ಹಲವು ವರ್ಷದ ಕನಸಿಗೆ ಈಗ ಮೂರ್ತರೂಪ ದೊರಕಿದ್ದು, ಪ್ರಾಥಮಿಕ ಸಿದ್ಧತೆಗಳು ಈಗಾಗಲೇ ನಡೆಯುತ್ತಿದೆ. ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವ (ಪಿಪಿಪಿ)ದಲ್ಲಿ ಬಸ್ ನಿಲ್ದಾಣ ನಿರ್ಮಿಸುವ ಸಂಬಂಧ ಆಸಕ್ತ ಅಭಿವೃದ್ಧಿ ಸಂಸ್ಥೆಯವರಿಂದ ಮಾದರಿ ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ. 6 ಜನರು ಈ ಸಂಬಂಧ ಮುಂದೆ ಬಂದು ಮಾದರಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗಾಗಲೇ ಬಂದ ಮಾದರಿ ಪ್ರಸ್ತಾವನೆಗಳನ್ನು ಪರಿಶೀಲಿಸಿ ಜು. 27ರಂದು ಇದು ಅಂತಿಮಗೊಳ್ಳಲಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕುರಿತಂತೆ ಪ್ರಾಥಮಿಕ ವಿಚಾರ ವಿನಿಮಯ ಸಭೆ ನಡೆದಿದೆ. ಪಂಪ್‌ವೆಲ್ ಹೆದ್ದಾರಿ ಪಕ್ಕದ ಸುಮಾರು 11.50 ಎಕರೆ ಜಾಗದಲ್ಲಿ ಬಸ್ ನಿಲ್ದಾಣ ನಿರ್ಮಾಣವಾಗಲಿದೆ.